ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷರತ್ತು ಹಾಕಿ ಬಿಜೆಪಿಗೆ ಬಂದಿಲ್ಲ: ಜಗದೀಶ ಶೆಟ್ಟರ್

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿಕೆ
Published 28 ಜನವರಿ 2024, 15:59 IST
Last Updated 28 ಜನವರಿ 2024, 15:59 IST
ಅಕ್ಷರ ಗಾತ್ರ

ದಾವಣಗೆರೆ: ‘ಯಾವುದೇ ಷರತ್ತು ಹಾಕಿ ನಾನು ಬಿಜೆಪಿಗೆ ಸೇರ್ಪಡೆಗೊಳ್ಳಲಿಲ್ಲ. ಪಕ್ಷದ ವರಿಷ್ಠರು ತೀರ್ಮಾನ ಕೈಗೊಂಡು ಯಾವುದೇ ಜವಾಬ್ದಾರಿ ನೀಡಿದರೂ ನಾನು ಅದನ್ನು ನಿಭಾಯಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ಬಿಜೆಪಿ ಸೇರ್ಪಡೆ ನಂತರ ಹುಬ್ಬಳ್ಳಿಗೆ ತೆರಳುವ ಮಾರ್ಗಮಧ್ಯೆ ದಾವಣಗೆರೆಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿ ಮಾಡಲು ನನ್ನದೊಂದು ಅಳಿಲು ಸೇವೆ ಇರಲಿ ಎಂಬ ಕಾರಣಕ್ಕಾಗಿ ಸ್ವಪಕ್ಷಕ್ಕೆ ಮರಳಿದ್ದೇನೆ’ ಎಂದರು.

‘ನಾನು ಬಿಜೆಪಿಗೆ ಮರಳಬೇಕೆಂದು ಕಾಯಕರ್ತರ ಪಡೆ ಮತ್ತು ಪಕ್ಷದ ವರಿಷ್ಠರ ಒತ್ತಡವಿತ್ತು. ಕೇಂದ್ರದ ನಾಯಕರೂ  ನನ್ನೊಂದಿಗೆ ಚರ್ಚೆ ನಡೆಸಿದರು. ಹಾಗಾಗಿ ಬಿಜೆಪಿಗೆ ಮರಳಿದ್ದೇನೆ, ಸ್ವಪಕ್ಷಕ್ಕೆ ಮರಳಿರುವ ಬಗ್ಗೆ ಖುಷಿ ಇದೆ’ ಎಂದು ತಿಳಿಸಿದರು.

‘ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷಗಳಿಂದ ದೇಶಕ್ಕೆ ಉತ್ತಮ ಆಡಳಿತ ನೀಡಿದ್ದಾರೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಮೂರನೇ ಬಾರಿಯೂ ಅವರು ಗೆಲುವು ಕಾಣಬೇಕು. ಅವರ ಕೈ ಬಲಪಡಿಸಬೇಕೆಂಬುದು ದೇಶದ ಜನರ ಕೂಗು. ಆದ್ದರಿಂದ ಪಕ್ಷ ಸಂಘಟಿಸಿ ಲೋಕಸಭಾ ಚುನಾವಣೆಯಲ್ಲಿ 150 ಸ್ಥಾನಗಳಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಬೇಕು ಎಂಬ ಇಚ್ಛೆಯಿಂದಲೇ ನಾನು ಪಕ್ಷಕ್ಕೆ ಬಂದಿದ್ದೇನೆ’ ಎಂದು ಹೇಳಿದರು.

ಬಿಜೆಪಿ ನನ್ನ ತವರು ಮನೆ

‘ಬಿಜೆಪಿ ನನ್ನ ತವರು ಮನೆ, ನಾವೇ ಕಟ್ಟಿ ಬೆಳೆಸಿದ ಮನೆ. ಕೆಲವು ಅಸಮಾಧಾನಗಳಿಂದ ಹೊರ ಹೋಗಿದ್ದು ನಿಜ. ಈಗ ಮತ್ತೆ ನಮ್ಮ ತವರುಮನೆಗೆ ಬಂದಿದ್ದೇನೆ. ದೇಶದ ಅಭಿವೃದ್ಧಿಗಾಗಿ ಮೂರನೇ ಬಾರಿಗೆ ಮೋದಿ ಅವರನ್ನು ಪ್ರಧಾನಿ ಮಾಡಬೇಕೆಂಬುದು ದೇಶದ ಜನರ ಒತ್ತಾಯ ಹಾಗೂ ಕಾರ್ಯಕರ್ತರ ಒತ್ತಾಸೆಯಾಗಿದೆ. ದೇಶದ ಹಿತರಕ್ಷಣೆ, ಅಭಿವೃದ್ಧಿಗಾಗಿ ಮೋದಿ ಅವರನ್ನು ಪ್ರಧಾನಿ ಮಾಡಲು ಶ್ರಮಿಸುತ್ತೇವೆ’ ಎಂದರು.

ದಾವಣಗೆರೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅವರಿಗೆ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಸ್ವಾಗತಿಸಿದ ವೇಳೆ ಮಾತನಾಡಿದ ಅವರು, ‘ಕಳೆದ ಮೂರು ದಶಕಗಳಿಂದ ಜನಸಂಘ, ಬಿಜೆಪಿಯಲ್ಲಿದ್ದ ನಾನು ಕೆಲವು ಘಟನೆಯಿಂದ ಬೇಸರಗೊಂಡು ಪಕ್ಷ ತೊರೆದಿದ್ದೆ. ಈಗ ಬಿಜೆಪಿಯಲ್ಲಿ ಎಲ್ಲವೂ ತಿಳಿಯಾಗಿದ್ದು, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಬಿ.ಎಸ್. ಯಡಿಯೂರಪ್ಪ ಸೇರಿದಂತೆ ರಾಜ್ಯ ಹಾಗೂ ಕೇಂದ್ರದ ವರಿಷ್ಠರ ಕರೆಯ ಮೇರೆಗೆ ಮತ್ತೆ ಸ್ವಪಕ್ಷಕ್ಕೆ ಮರಳಿದ್ದೇನೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಂಕರ್ ಮುನೇನಕೊಪ್ಪ, ಮಾಜಿ ಶಾಸಕ ಟಿ. ಗುರುಸಿದ್ಧನಗೌಡ, ಮಾಜಿ ಮೇಯರ್ ಬಿ.ಜೆ. ಅಜಯಕುಮಾರ್, ಡಾ. ಟಿ.ಜಿ. ರವಿಕುಮಾರ್, ಲೋಕಿಕೆರೆ ನಾಗರಾಜ್, ಕೆ.ಬಿ.ಕೊಟ್ರೇಶ್ ಮತ್ತಿತರರು ಉಪಸ್ಥಿತರಿದ್ದರು.

Cut-off box - ‘ಸ್ಥಳೀಯರಿಗೆ ಟಿಕೆಟ್ ನೀಡಲಿ ಎಂಬುದು ನಮ್ಮ ಉದ್ದೇಶ’ ದಾವಣಗೆರೆ: ‘ಇಲ್ಲಿನ ಸಂಸದರಿಗೆ ಟಿಕೆಟ್ ತಪ್ಪಿಸಬೇಕೆಂಬ ಉದ್ದೇಶದಿಂದ ನಿಯೋಗ ತೆರಳಿ ರಾಜ್ಯ ನಾಯಕರಿಗೆ ಮನವಿ ಸಲ್ಲಿಸಲಿಲ್ಲ. ಬದಲಿಗೆ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ಸಿಗಬೇಕೆಂಬುದಷ್ಟೇ ನಮ್ಮ ಕೋರಿಕೆಯಾಗಿದೆ’ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು. ‘ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ನೇತೃತ್ವದಲ್ಲಿ ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ  ಎ.ಎಚ್. ಶಿವಯೋಗಿಸ್ವಾಮಿ ಮಾಜಿ ಶಾಸಕ ಗುರುಸಿದ್ದನಗೌಡರು ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್ ಸೇರಿದಂತೆ ಮತ್ತಿತರರು ರಾಜ್ಯ ನಾಯಕರನ್ನು ಭೇಟಿ ಮಾಡಿ ಸ್ಥಳೀಯ ಅಭ್ಯರ್ಥಿಗೆ ಈ ಬಾರಿ ಲೋಕಸಭಾ ಚುನಾವಣೆ ಟಿಕೆಟ್ ನೀಡಬೇಕೆಂದು ಮನವಿ ಸಲ್ಲಿಸಿದೆವು’ ಎಂದು ಸ್ಪಷ್ಟನೆ ನೀಡಿದರು. ‘ಪಕ್ಷದ ಸಂಘಟನೆ ಹಿತದೃಷ್ಠಿಯಿಂದ ನಾವು ತೆರಳಿ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿ ಜಿಲ್ಲೆಯ ವಾಸ್ತವಾಂಶಗಳನ್ನು ಮನವರಿಕೆ ಮಾಡಿ ಬಂದಿದ್ದೇವೆ. ಜಿಲ್ಲೆಯ ಸಮೀಕ್ಷೆ ನಡೆಸಲು ಪಕ್ಷದವರಿಗೆ ಮನವಿ ಮಾಡಿದ್ದೇವೆ. ಹೊರತು ಯಾರಿಗೂ ಟಿಕೆಟ್ ತಪ್ಪಿಸಲು ಅಲ್ಲ’ ಎಂದು ಹೇಳಿದರು.

Cut-off box - ‘ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ’ ಜಿಲ್ಲೆಯ ಪ್ರಭಾವಿ ಬಿಜೆಪಿ ಮುಖಂಡರೆಲ್ಲಾ ನಮ್ಮ ನಾಯಕರು. ನಮ್ಮ ಅಭಿಪ್ರಾಯ ಹೇಳಿಕೊಳ್ಳಲು ಬೆಂಗಳೂರಿಗೆ ಹೋಗಿದ್ದೆವೆಯೇ ವಿನಃ ಯಾವುದೇ ಪಕ್ಷ ವಿರೋಧಿ ಚಟುವಟಿಕೆ ನಡೆಸಲು ಅಲ್ಲ. ನಮಗೆ ಎಲ್ಲರೂ ನಾಯಕರು ನಮಗೆ ಬೇಕು’ ಎಂದು ಮಾಜಿ ಮೇಯರ್ ಬಿ.ಜಿ.ಅಜಯ್‌ಕುಮಾರ್ ಹೇಳಿದರು. ‘ಲೋಕಸಭೆ ಚುನಾವಣೆಯಲ್ಲಿ ಒಳ್ಳೆಯ ಅಭ್ಯರ್ಥಿಗಳನ್ನು ನಿಲ್ಲಿಸಿ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಡುಗೆ ಕೊಡಬೇಕು ಎಂದು ವಿಜಯೇಂದ್ರ ಅವರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಯಾರಿಗೆ ಟಿಕೆಟ್ ನೀಡಿದರೂ ಗೆಲುವಿಗೆ ಶ್ರಮಿಸುತ್ತೇವೆ. ಸಂಸದ ಜಿ.ಎಂ. ಸಿದ್ದೇಶ್ವರ ಅವರು ನಮ್ಮ ನಾಯಕರು. ಯಾವ ಸಮಯದಲ್ಲಿ ಕರೆದರೂ ನಾನು ಹೋಗುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT