ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳೆ ವಿಮಾ ಪರಿಹಾರವನ್ನು ಸಾಲಕ್ಕೆ ಮುರಿದುಕೊಳ್ಳಬೇಡಿ: ಜಿಲ್ಲಾಧಿಕಾರಿ

ಬೆಳೆ ಪರಿಹಾರ: 11,597 ರೈತರ ಖಾತೆಗಳು ವ್ಯತ್ಯಾಸ
Published 15 ಮೇ 2024, 5:18 IST
Last Updated 15 ಮೇ 2024, 5:18 IST
ಅಕ್ಷರ ಗಾತ್ರ

ದಾವಣಗೆರೆ: ‘ರೈತರು ಬೆಳೆನಷ್ಟ ಅನುಭವಿಸಿದ್ದು, ಇವರಿಗೆ ಇನ್‍ಫುಟ್ ಸಬ್ಸಿಡಿ, ಬೆಳೆ ವಿಮಾ ಪರಿಹಾರ ಹಾಗೂ ಉದ್ಯೋಗ ಖಾತರಿಯಡಿ ಕೂಲಿ ಹಣವನ್ನು ಖಾತೆಗೆ ಜಮಾ ಮಾಡಲಾಗಿದ್ದು, ಇದನ್ನು ರೈತರು ಪಡೆದ ಸಾಲಕ್ಕೆ ತೀರುವಳಿ ಮಾಡಬಾರದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬ್ಯಾಂಕರ್ಸ್ ಅಧಿಕಾರಿಗಳೊಂದಿಗೆ ಮಂಗಳವಾರ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ರೈತರು ಯಾರೂ ಬಿಎಂಡಬ್ಲ್ಯು ಕಾರು ಇಟ್ಟುಕೊಂಡಿಲ್ಲ. ಅವರಿಗೆ ಸಿಗುವ ಹತ್ತಾರು ಸಾವಿರದಲ್ಲಿ ಬೀಜ, ಗೊಬ್ಬರಕ್ಕೆ ಉಪಯೋಗ ಮಾಡಿಕೊಳ್ಳುವರು. ಆದ್ದರಿಂದ ಯಾವುದೇ ಬ್ಯಾಂಕ್‍ನವರು ಬೆಳೆ ಪರಿಹಾರ, ಖಾತರಿ ಹಣವನ್ನು ಬಾಕಿ ಸಾಲಕ್ಕೆ ಮುರಿದುಕೊಳ್ಳಬಾರದು. ಅಂತಹ ಬ್ಯಾಂಕ್ ಅಧಿಕಾರಿಗಳ ಮೇಲೆ ಸರ್ಕಾರಕ್ಕ ವರದಿ ಮಾಡಲಾಗುತ್ತದೆ’ ಎಂದರು.

11,597 ರೈತರ ಖಾತೆಗಳು ವ್ಯತ್ಯಾಸ

 ‘ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರವಾಗಿ ಎರಡನೇ ಕಂತಿನಲ್ಲಿ ಜಿಲ್ಲೆಯ 69,575 ರೈತರಿಗೆ ₹44.35 ಕೋಟಿ ಇನ್‍ಫುಟ್ ಸಬ್ಸಿಡಿ ಬಿಡುಗಡೆ ಮಾಡಿದ್ದು, ದಾಖಲೆ ಹೊಂದಾಣಿಕೆಯಾಗದ 11,597 ರೈತರಿಗೆ ಪರಿಹಾರ ಬಿಡುಗಡೆ ಮಾಡಲು ಬ್ಯಾಂಕ್ ಖಾತೆಯ ದಾಖಲಾತಿಗಳನ್ನು ಸರಿಪಡಿಸಬೇಕಾಗಿದೆ’ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ತಿಳಿಸಿದರು.

‘ಮೊದಲ ಕಂತಿನಲ್ಲಿ ತಲಾ ₹2,000ದಂತೆ 82,928 ರೈತರಿಗೆ ಹಾಗೂ ಎರಡನೇ ಹಂತದಲ್ಲಿ 69,575 ರೈತರಿಗೆ ಒಟ್ಟು ₹60.23 ಕೋಟಿ ಬೆಳೆ ಪರಿಹಾರ ಬಿಡುಗಡೆ ಮಾಡಲಾಗಿದೆ. ಇನ್ನೂ 11,597 ರೈತರಿಗೆ ಇನ್‍ಫುಟ್ ಸಬ್ಸಿಡಿ ಬಿಡುಗಡೆ ಮಾಡಬೇಕಾಗಿದ್ದು, ಇವರ ಖಾತೆಯ ವಿವರಗಳು ಸರಿಯಾಗಿರದ ಕಾರಣ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಇದರಲ್ಲಿ 5,575 ರೈತರ ಖಾತೆಗಳಿಗೆ ಆಧಾರ್ ಜೋಡಣೆಯಾಗಿಲ್ಲ. ಐಎಫ್‍ಎಸ್‍ಸಿ ಸಂಖ್ಯೆ ತಪ್ಪಾಗಿರುವ 3,696, ಫ್ರೂಟ್ಸ್ ಮತ್ತು ಆಧಾರ್‌ಗೆ ಮಿಸ್ ಮ್ಯಾಚ್ ಆಗಿರುವ 1,684, ಆಧಾರ್ ಜೋಡಣೆಯಾಗದ 244 ಸೇರಿದಂತೆ ವಿಫಲ ಪಾವತಿ ಸೇರಿದಂತೆ ಇತರೆ ಕಾರಣದಿಂದ ಪಾವತಿ ಮಾಡಲು ಸಾಧ್ಯವಾಗಿಲ್ಲ’ ಎಂದು ಹೇಳಿದರು.

‘ಎಲ್ಲಾ ತಾಲ್ಲೂಕುಗಳಲ್ಲಿ ಪರಿಹಾರದ ಬಗ್ಗೆ ಸಹಾಯವಾಣಿ ಸ್ಥಾಪಿಸಲಾಗಿದ್ದ ಇಲ್ಲಿಯವರೆಗೆ 1,374 ಕರೆಗಳನ್ನು ಸ್ವೀಕರಿಸಲಾಗಿದೆ. ಬ್ಯಾಂಕ್‍ಗಳಲ್ಲಿ  ಪ್ರತ್ಯೇಕವಾಗಿ ಸಹಾಯ ಮೇಜು ಸ್ಥಾಪನೆ ಮಾಡುವ ಮೂಲಕ ಆಧಾರ್ ಸೀಡಿಂಗ್ ಮಾಡುವುದು ಮತ್ತು ಆಧಾರ್‌ ಸಂಖ್ಯೆಯಂತೆ ಬ್ಯಾಂಕ್ ಖಾತೆಯನ್ನು ತಿದ್ದುಪಡಿ ಮಾಡುವ ಮೂಲಕ ಆದಷ್ಟು ಬೇಗ ರೈತರ ಖಾತೆಗಳಿಗೆ ಪರಿಹಾರ ಜಮಾ ಮಾಡಲು ದಾಖಲೆಗಳನ್ನು ಸರಿಪಡಿಸುವ ಕೆಲಸ ಎಲ್ಲಾ ಬ್ಯಾಂಕ್‍ಗಳಿಂದ ಆಗಬೇಕಾಗಿದೆ’ ಎಂದರು.

 ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ.ಇಟ್ನಾಳ್ ಮಾತನಾಡಿ, ‘ಅಂಗವಿಕಲರಿಗೆ ಬರುವ ಮಾಸಾಶನದ ಹಣವನ್ನು ಅವರ ಸಾಲಕ್ಕೆ ಚುಕ್ತಾ ಮಾಡಿಕೊಳ್ಳಲಾಗುತ್ತಿದೆ ಎಂದು ದೂರುಗಳಿದ್ದು, ಅವರ ಜೀವನ ಮಟ್ಟ ಸುಧಾರಣೆ ಮಾಡಲು ಸರ್ಕಾರ ಮಾಸಾಶನ ನೀಡುತ್ತಿದೆ. ಈ ರೀತಿಯಾಗದಂತೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ತಿಳಿಸಿದರು.

 ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಲೀಡ್ ಮ್ಯಾನೇಜರ್ ಪ್ರಕಾಶ್ ಇದ್ದರು.
                                 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT