ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಾಹೀರಾತು ವೈಭವೀಕರಣದಿಂದ ಹೆಚ್ಚುತ್ತಿರುವ ಮಾದಕ ವ್ಯಸನ

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ
Published 1 ಜೂನ್ 2024, 5:50 IST
Last Updated 1 ಜೂನ್ 2024, 5:50 IST
ಅಕ್ಷರ ಗಾತ್ರ

ದಾವಣಗೆರೆ: ‘ಉದ್ದಿಮೆದಾರರು ತಮ್ಮ ವ್ಯವಹಾರ ವೃದ್ಧಿಸಿಕೊಳ್ಳಲು ಯುವಪೀಳಿಗೆಯನ್ನೇ ಗುರಿಯಾಗಿಸಿಕೊಂಡು ಮಾದಕ ವ್ಯಸನಿಗಳನ್ನಾಗಿ ಮಾಡುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ, ಅಧಿಕಾರಿಗಳು ಮಾತ್ರವಲ್ಲದೆ ಸಾರ್ವಜನಿಕರೂ ಇದರ ನಿಯಂತ್ರಣಕ್ಕೆ ಬದ್ಧತೆ ತೋರಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಚಿಗಟೇರಿ ಜಿಲ್ಲಾ ಆಸ್ಪತ್ರೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ವಕೀಲರ ಸಂಘ, ಅಶ್ವಿನಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಪಿ.ಜಿ ಸೆಂಟರ್ ಹಾಗೂ ವಿ.ಎಸ್. ಪ್ಯಾರಾಮೆಡಿಕಲ್ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ತಂಬಾಕುರಹಿತ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು’ ಘೋಷವಾಕ್ಯದಡಿ ಕಾರ್ಯಕ್ರಮ ಆಯೋಜಿಸಿದ್ದು, ಕರ್ನಾಟಕದಲ್ಲಿ ಪ್ರತಿನಿತ್ಯ 13ರಿಂದ 15ರ ವಯೋಮಾನ 293 ಮಕ್ಕಳು ತಂಬಾಕು ಸೇವನೆಗೆ ದಾಸರಾಗುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ 2022ರ ವರದಿಯ ಪ್ರಕಾರ ವಿಶ್ವದಾದ್ಯಂತ 37 ಮಿಲಿಯನ್ ಮಕ್ಕಳು ಯಾವುದಾದರೂ ಒಂದು ಬಗೆಯ ತಂಬಾಕು ಉತ್ಪನ್ನಗಳಿಗೆ ದಾಸರಾಗುತ್ತಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರೆದಲ್ಲಿ ಕ್ಯಾನ್ಸರ್‌ನಂತಹ ಭಯಾನಕ ಕಾಯಿಲೆಗೆ ತುತ್ತಾಗಿ ಯುವ ಸಮೂಹವೇ ಬಲಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಇನ್ನು ಹೆಚ್ಚಿನ ಮಟ್ಟದಲ್ಲಿ ತಂಬಾಕು ಉತ್ಪನ್ನಗಳ ಜಾಗೃತಿ ಕಾರ್ಯಕ್ರಮಗಳಿಗೆ ನಾವೆಲ್ಲರು ಕೈಜೋಡಿಸೋಣ’ ಎಂದು ಸಲಹೆ ನೀಡಿದರು.

‘ಜಾಹೀರಾತುಗಳ ವೈಭವೀಕರಣದಿಂದಾಗಿ ಯುವಜನತೆ ದಾರಿ ತಪ್ಪುತ್ತಿದ್ದು, ತಪ್ಪು ಮಾಡಿದವರು ಯಾರೂ ಕಾನೂನಿನ ಬಂಧನದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜನಸಂಖ್ಯೆಗೆ ತಕ್ಕಂತೆ ಅಧಿಕಾರಿಗಳು ಇಲ್ಲದ ಕಾರಣ ನಿಯಂತ್ರಣದಲ್ಲಿ ತಡವಾಗುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ.ಕರೆಣ್ಣವರ್ ಹೇಳಿದರು.

‘ಉದ್ದಿಮೆದಾರರ ಕುತಂತ್ರದ ಜಾಹೀರಾತಿನಿಂದ ವೀಕ್ಷಕರು ಉತ್ತೇಜನ ಆಗುತ್ತಿದ್ದಾರೆ. ತಂಪು ಪಾನೀಯಗಳು, ತಂಬಾಕು ಉತ್ಪನ್ನಗಳನ್ನು ತಯಾರಿಸುವ ಉದ್ದಿಮೆದಾರರು ಜಾಹೀರಾತುಗಳನ್ನು ತೋರಿಸುವುದೇ ಬೇರೆ, ಉತ್ಪನ್ನಗಳು ಇರುವುದು ಬೇರೆ. ಆದರೆ ಇದನ್ನು ತಿಳಿಯದೇ ಯುವಪೀಳಿಗೆ ಮಾತ್ರವಲ್ಲದೆ ಮಕ್ಕಳು ಸಹ ಜಾಹೀರಾತಿಗೆ ಮಾರು ಹೋಗಿ ದುಶ್ಚಟಗಳಿಗೆ ದಾಸರಾಗಿ ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಅಪಾಯಕಾರಿ, ಮಕ್ಕಳು, ಯುವಪೀಳಿಗೆಯನ್ನು ದಾರಿ ತಪ್ಪಿಸುವ ನಾವೇಲ್ಲರೂ ಜಾಗರೂಕರಾಗಿರಬೇಕು’ ಎಂದು  ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್ ಕುಮಾರ್  ಎಚ್ಚರಿಸಿದರು.

ಪಾಲಿಕೆ ಆಯುಕ್ತೆ ರೇಣುಕಾ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಜಿಲ್ಲಾ ಸರ್ವೇಕ್ಷಣೆ ಅಧಿಕಾರಿ ಡಾ. ಜಿ.ಡಿ.ರಾಘವನ್, ಹೆಚ್ಚುವರಿ ಜಿಲ್ಲಾಧಿಕಾರಿ ಸೈಯದಾ ಆಫ್ರೀನ್ ಬಾನು, ಡಿಎಚ್ಒ ಡಾ.ಎಸ್.ಷಣ್ಮುಖಪ್ಪ, ಡಾ.ಎಂ.ಬಿ. ನಾಗೇಂದ್ರಪ್ಪ, ಡಾ.ಎಲ್.ಎಂ. ಜ್ಞಾನೇಶ್ವರ. ಡಾ. ತಿಪ್ಪೇಸ್ವಾಮಿ ಪಿ.ಎಂ, ಆರೋಗ್ಯಾಧಿಕಾರಿ ಚಂದ್ರಮೋಹನ್ ಎನ್. ಹಿರೇಮಠ್, ಪ್ಯಾರಾಮೆಡಿಕಲ್ ಕಾಲೇಜು ಕಾರ್ಯದರ್ಶಿ ಶ್ವೇತಾ ರಂಗನಾಥ್ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT