ಗುರುವಾರ , ಫೆಬ್ರವರಿ 9, 2023
30 °C
ಕೌಶಲ ಮೇಳ, ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ

ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಒತ್ತು: ಸಂಸದ ಜಿ.ಎಂ. ಸಿದ್ದೇಶ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿನ ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡಲಾಗುವುದು. ನಗರದಲ್ಲಿ ಹೆಚ್ಚು ಗಾರ್ಮೆಂಟ್ಸ್‌ಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ನಗರದ ಭಗೀರಥ ಸರ್ಕಲ್‌ನ ಪ್ರಧಾನ ಮಂತ್ರಿ ಕೌಶಲ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಕೌಶಲ ಮೇಳ, ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಫೆಬ್ರುವರಿ 8ರಂದು ಬೃಹತ್‌ ಉದ್ಯೋಗ ಮೇಳ ನಡೆಸಲು ಚಿಂತನೆ ನಡೆಸಲಾಗಿದೆ. 50ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. ಯುವಜನರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

‘ಇಂದಿನ ಯುವಕರಲ್ಲಿ ಕೌಶಲ ಇದೆ. ಅದನ್ನು ಬಳಸಿಕೊಳ್ಳಿ. ದೇಶದಲ್ಲಿ 610 ಪ್ರಧಾನ ಮಂತ್ರಿ ಕೌಶಲ ಕೇಂದ್ರಗಳಿವೆ. ದಾವಣಗೆರೆಯ ತರಬೇತಿ ಕೇಂದ್ರ ಅತ್ಯುತ್ತಮವಾಗಿದೆ. ಇಲ್ಲಿನ ಕೇಂದ್ರದ ವಿದ್ಯಾರ್ಥಿಗಳಿಗೆ ವಸತಿ ನಿಲಯ ಸೌಲಭ್ಯ ಕಲ್ಪಿಸಲಾಗುವುದು. ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪ್ರತ್ಯೇಕ ಹಾಸ್ಟೆಲ್‌ ನಿರ್ಮಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತೇನೆ’ ಎಂದು ಭರವಸೆ ನೀಡಿದರು.

‘ಅಲ್ಲದೇ ಕೌಶಲ ಕೇಂದ್ರಕ್ಕೆ ಬರಲು ಬಸ್‌ ಸೌಲಭ್ಯ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರು.

ಕೇಂದ್ರದ ತರಬೇತುದಾರರು ಚೆನ್ನಾಗಿ ಕಲಿಸುತ್ತಿದ್ದಾರೆ. ಇತರೆ ಜಿಲ್ಲೆಯ ವಿದ್ಯಾರ್ಥಿಗಳೂ ಇಲ್ಲಿ ತರಬೇತಿ ಪಡೆಯುತ್ತಿರುವುದು ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಎಚ್‌.ಸಿ. ಬಸವರಾಜ್‌, ‘ಕೌಶಲ ಯೋಜನೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆ. ಇಲ್ಲಿ 350ಕ್ಕೂ ಹೆಚ್ಚು ಕೌಶಲ ತರಬೇತಿ ನೀಡಲಾಗುವುದು. ಯುವಕರು ಕೇಂದ್ರದಲ್ಲಿ ತರಬೇತಿ ಪಡೆದು ಇತರರಿಗೂ ತರಬೇತಿ ಪಡೆಯುವಂತೆ ಪ್ರೋತ್ಸಾಹಿಸಿ. ಈ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು‘ ಎಂದು ಮನವಿ ಮಾಡಿದರು. 

ಪಾಲಿಕೆ ಸದಸ್ಯೆ ಉಮಾ ಪ್ರಕಾಶ್‌, ‘ಕೌಶಲ ಮೇಳ ಅತ್ಯುತ್ತಮ ಕಾರ್ಯಕ್ರಮ. ಇಲ್ಲಿ ವಿದ್ಯಾವಂತರು, ಅನಕ್ಷರಸ್ಥರಿಗೂ ತರಬೇತಿ ನೀಡಲಾಗುತ್ತದೆ. ಎಲ್ಲರೂ ಇದರ ಸದುಪಯೋಗ ಪಡೆಯಬೇಕು. ಈ ಬಗ್ಗೆ ನಿಮ್ಮ ನೆರೆಹೊರೆಯವರಿಗೂ ಮಾಹಿತಿ ನೀಡಿ’ ಎಂದು ಸಲಹೆ ನೀಡಿದರು.

ಕೇಂದ್ರದ ಶಿಕ್ಷಕಿ ವಾಣಿಶ್ರೀ ಬಿ.ಆರ್‌., ‘ಕೇಂದ್ರದಲ್ಲಿ 18ರಿಂದ 35 ವರ್ಷ ವಯಸ್ಸಿನವರಿಗೆ ತರಬೇತಿ ನೀಡಲಾಗುತ್ತದೆ. ಕೇಂದ್ರದಿಂದ ಇದುವರೆಗೆ 1300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. 1200 ಜನರಿಗೆ ಪ್ರಮಾಣ ಪತ್ರ ವಿತರಿಸಲಾಗಿದೆ. 600ಕ್ಕೂ ಹೆಚ್ಚು ಜನರು ಉದ್ಯೋಗ ಪಡೆದಿದ್ದಾರೆ’ ಎಂದು ವಿವರಿಸಿದರು. 

ರೂಮನ್‌ ಟೆಕ್ನಾಲಜೀಸ್‌ ನಿರ್ದೇಶಕ ಜಿ.ಆರ್‌. ಕುಲಕರ್ಣಿ ಮಾತನಾಡಿದರು. ಪಾಲಿಕೆ ಸದಸ್ಯರಾದ ವೀರೇಶ್‌, ಮಂಜುನಾಥ, ಕೇಂದ್ರದ ಪೂರ್ಣಿಮಾ, ಜ್ಯೋತಿ ಇದ್ದರು.

ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವಿದ್ಯಾರ್ಥಿಗಳು ತಯಾರಿಸಿದ ವಿವಿಧ ವಸ್ತುಗಳ ಪ್ರದರ್ಶನ ಗಮನ ಸೆಳೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು