ಶುಕ್ರವಾರ, ಡಿಸೆಂಬರ್ 13, 2019
26 °C
ಜಿಲ್ಲಾಧಿಕಾರಿ, ಚುನಾವಣಾ ಆಯೋಗಕ್ಕೆ ದೂರು

16ನೇ ವಾರ್ಡ್‌ನಲ್ಲಿ ನಕಲಿ ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: 16ನೇ ವಾರ್ಡ್‌ ವಿನೋಬ ನಗರದ 10 ಬೂತ್‌ಗಳಲ್ಲಿ ನಕಲಿ ಮತದಾರರನ್ನು ಸೃಷ್ಟಿ ಮಾಡಲಾಗಿದೆ ಎಂದು ಬಿಜೆಪಿ ಕಾನೂನು ಘಟಕದ ಸಂಚಾಲಕ ರಾಘವೇಂದ್ರ ಆರೋಪಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ಈ ವಾರ್ಡ್‌ನಲ್ಲಿ 15 ವರ್ಷಗಳಿಂದ ವಾಸಿಸುವ ಮತದಾರರನ್ನು ಬದಿಗೆ ಸರಿಸಿ ಹೊರಗಡೆಯ ವ್ಯಕ್ತಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದಾರೆ. ಬಿಎಲ್‌ಒಗಳು ಮನೆ ಮನೆಗೆ ತೆರಳಿ ಮತದಾರ ಪಟ್ಟಿಯನ್ನು ತಯಾರಿಸದೇ ಆ ವಾರ್ಡ್‌ನ ವಿಜೇತ ಅಭ್ಯರ್ಥಿ ನಾಗರಾಜ್ ಅವರ ಕುಮ್ಮಕ್ಕಿನಿಂದ ಅವರ ಸಂಬಂಧಿಗಳ ಹೆಸರನ್ನು ಸೇರ್ಪಡೆಗೊಳಿಸಿದ್ದಾರೆ’ ಎಂದು ಆರೋಪಿಸಿದರು.

‘ವಾಸ್ತವವಾಗಿ ವಿನೋಬನಗರದಲ್ಲಿರುವ 6,500-7,000 ಮತದಾರರು ಇದ್ದಾರೆ. ಆದರೆ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ 9,663 ಮತದಾರರು ಇದ್ದಾರೆ ಎಂಬ ಮಾಹಿತಿ ಇದೆ. 10 ವಾರ್ಡ್‌ಗಳಲ್ಲಿ 2,500ಕ್ಕೂ ಹೆಚ್ಚು ನಕಲಿ ಮತದಾರರನ್ನು ಇಲ್ಲಿ ಸೃಷ್ಟಿ ಮಾಡಿ ನಾಗರಾಜ್ ಅನೈತಿಕವಾಗಿ ಗೆದ್ದಿದ್ದಾರೆ’ ಎಂದು ಆರೋ‍ಪಿಸಿದ್ದಾರೆ.

‘ಬೂತ್‌ ನಂ.144ರಲ್ಲಿ ಕ್ರಮ ಸಂಖ್ಯೆ 387ರಿಂದ 389 ರವರೆಗೆ ಡೋರ್‌ ನಂ.1525ರಲ್ಲಿ ವಾಸಿ ಎಂದು ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ. ಅಸಲಿಗೆ ಈ ಮನೆಯ ಮಾಲೀಕರು ಮುಸ್ಲಿಮರಾಗಿದ್ದು, ಸ್ಥಳೀಯ ನಿವಾಸಿಗಳಿಗೆ ಮತದಾನದ ಹಕ್ಕನ್ನು ಮೊಟಕುಗೊಳಿಸಿದ್ದಾರೆ. ಅದೇ ರೀತಿ ಡೋರ್ ನಂ. 1529ರಲ್ಲೂ ಇದೇ ರೀತಿ ಮಾಡಿದ್ದಾರೆ. ಎ.ನಾಗರಾಜು ಅವರ ಸಂಬಂಧಿಕರು ಹಾಗೂ ಅವರ ಅಣ್ಣ ತಮ್ಮಂದಿರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿದ್ದಾರೆ. ಇವರು ಯಾರೂ ನಮ್ಮ ನಿವಾಸಿಗಳಲ್ಲ.  ಬಸವೇಶ್ವರ, ಎಲ್ಲಮ್ಮನಗರದಲ್ಲಿ ಇವರಿಗೆ ಸ್ವಂತ ಮನೆ ಇದೆ’ ಎಂದು ಆರೋಪಿಸಿದರು.

‘ವಿನೋಬ ನಗರದಲ್ಲಿ ಯಾವುದೇ ರೆವಿನ್ಯೂ ಸೈಟ್‌ನ ಮನೆಗಳು ಇಲ್ಲ. ಅಲ್ಲದೇ ಡೋರ್‌ ನಂಬರ್‌ಗಳು ಇಲ್ಲದ ಮನೆಗಳೂ ಇಲ್ಲ. ಆದರೆ ಬಿಎಲ್ಒ ತಯಾರಿಸಿರುವ ಮತದಾರರ ಪಟ್ಟಿಯಲ್ಲಿ ಆರ್‌ಎಸ್‌ ಹಾಗೂ 00 ಡೋರ್‌ಗಳನ್ನು ಸೃಷ್ಟಿಸಿ 262 ಮತದಾರರನ್ನು ಸೃಷ್ಟಿ ಮಾಡಿದ್ದಾರೆ’ ಎಂದು ಆರೋಪಿಸಿದರು.

ನಕಲಿ ಮತದಾರರ ಸೃಷ್ಟಿಗೆ ಅಲ್ಲಿನ ಬಿಎಲ್ಒಗಳು ಹಾಗೂ ನಾಗರಾಜ್ ಅವರೇ ಹೊಣೆಯಾಗಿದ್ದು, ಚುನಾವಣಾ ಶಾಖೆಯ ಡಾಟಾ ಎಂಟ್ರಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಶಾಮೀಲಾಗಿದ್ದಾರೆ. ಈ ಕುರಿತು ಬಿಜೆಪಿ ಕಾನೂನು ಘಟಕದಿಂದ ಹೋರಾಟ ನಡೆಸಲಿದ್ದು, ಜಿಲ್ಲಾಧಿಕಾರಿ ಹಾಗೂ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಮುಂದಿನ ಚುನಾವಣೆಯಲ್ಲಾದರೂ ನಕಲಿ ಮತದಾರರನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.

ಪರಾಜಿತ ಅಭ್ಯರ್ಥಿ ಎಚ್.ದಿವಾಕರ್, ಯುವ ಮುಖಂಡ ಶ್ರೀನಿವಾಸ್ ದಾಸ ಕರಿಯಪ್ಪ, ಬಿಜೆಪಿ ಕಾನೂನು ಪ್ರಕೋಷ್ಠದ ಎ.ಎಸ್.ಮಂಜುನಾಥ್, ಮುಖಂಡರಾದ ಟಿಂಕರ್ ಮಂಜಣ್ಣ, ರಾಘವೇಂದ್ರ ಎ.ಸಿ, ಪುನೀತ್, ಮಂಜುನಾಥ್, ರಾಕೇಶ್, ಅರ್ಜುನ್, ಕಿರಣ್, ತಿರುಮಲೇಶ್ ಇದ್ದರು.

ಪ್ರತಿಕ್ರಿಯಿಸಿ (+)