ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಕರೆಗೆ ₹30 ಸಾವಿರ ಬೆಳೆ ಪರಿಹಾರ ನೀಡಲಿ: ಮಂಜುನಾಥ್

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣ ಪ್ರತಿಭಟನೆ
Published 11 ಡಿಸೆಂಬರ್ 2023, 15:42 IST
Last Updated 11 ಡಿಸೆಂಬರ್ 2023, 15:42 IST
ಅಕ್ಷರ ಗಾತ್ರ

ದಾವಣಗೆರೆ: ಖಾಸಗಿ‌ ಫೈನಾನ್ಸ್ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಬಲವಂತದ ಸಾಲ ವಸೂಲಿಗೆ ವಿರೋಧ ಹಾಗೂ ಏತ ನೀರಾವರಿ ಯೋಜನೆ, ಬಗರ್ ಹುಕುಂ ಹಕ್ಕುಪತ್ರ ವಿತರಣೆ,‌ ರೈತರಿಗೆ ಬೆಳೆ ಹಾನಿ ಪರಿಹಾರ, ಅಕ್ರಮ ಸಕ್ರಮ ಯೋಜನೆಯಡಿ ವಿದ್ಯುತ್ ಪರಿವರ್ತಕಗಳನ್ನು ವಿತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರು ನಗರದ ಜಯದೇವ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ಎ.ಸಿ.ಗೆ ಮನವಿ ಸಲ್ಲಿಸಿದರು.

‘ರೈತರಿಗೆ ಬೆಳೆ ಹಾನಿ ಪರಿಹಾರವನ್ನು ರಾಜ್ಯ ಅಥವಾ ಕೇಂದ್ರ ಸರ್ಕಾರಗಳು ನೀಡಲಿ. ಪ್ರತೀ ಎಕರೆಗೆ ₹30 ಸಾವಿರ ಪರಿಹಾರ ವಿತರಿಸಬೇಕು. 1 ಎಕರೆ ಭೂಮಿ ಉಳುಮೆ ಮತ್ತು ಬೀಜ ಬಿತ್ತನೆಗೆ ₹25 ಸಾವಿರ ವೆಚ್ಚ ತಗುಲುತ್ತದೆ. ಆದರೆ, ರಾಜ್ಯ ಸರ್ಕಾರ ಕೇವಲ ₹2 ಸಾವಿರ ಪರಿಹಾರ ಘೋಷಣೆ‌ ಮಾಡಿರುವುದು ಅವೈಜ್ಞಾನಿಕವಾಗಿದೆ’ ಎಂದು ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ‌ಹುಚ್ಚವ್ವನಹಳ್ಳಿ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.

‘ಅಕ್ರಮ-ಸಕ್ರಮ ಯೋಜನೆಯನ್ನು ಮತ್ತೆ ಮುಂದುವರಿಸಬೇಕು. ರೈತರ ಬೇಡಿಕೆಗೆ ತಕ್ಕಂತೆ ಸೋಲಾರ್ ಅಥವಾ ವಿದ್ಯುತ್ ಸಂಪರ್ಕ ನೀಡಬೇಕು. ಈ ಆಯ್ಕೆಯನ್ನು ರೈತರಿಗೆ ಬಿಡಬೇಕು’ ಎಂದು ಆಗ್ರಹಿಸಿದರು.

‘ಬಹುಕೋಟಿ ವೆಚ್ಚದ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ಸ್ಥಗಿತಗೊಂಡಿದೆ. ಈ ಹಿಂದೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದಾಗ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆ ನಂತರ ಎಚ್‌.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಹೀಗೆ 3 ಜನ ಮುಖ್ಯಮಂತ್ರಿಗಳಾದರೂ ಕೆರೆಗಳಿಗೆ ಪೈಪ್ ಲೈನ್ ಅಳವಡಿಕೆ ಪೂರ್ಣಗೊಂಡಿಲ್ಲ’ ಎಂದು ಕಿಡಿಕಾರಿದರು.

ಈ ವೇಳೆ ರೈತ ಸಂಘದ‌ ಯಲೋದಹಳ್ಳಿ ರವಿ, ಪಾಮೇನಹಳ್ಳಿ ಗೌಡ್ರ ಶೇಖರಪ್ಪ, ಕುರ್ಕಿ ಹನುಮಂತ, ನಿಟುವಳ್ಳಿ ಪೂಜಾರ ಅಂಜಿನಪ್ಪ, ಆಲೂರು ಪರಶುರಾಮ್, ಕೋಲ್ಕುಂಟೆ ಹುಚ್ಚೆಂಗಪ್ಪ, ಅಸ್ತಾಫನಹಳ್ಳಿ ಗಂಡುಗಲಿ, ಚಿಕ್ಕಮಲ್ಲನಹೊಳೆ ಚಿರಂಜೀವಿ, ರಾಜನಹಳ್ಳಿ ರಾಜು, ಕೋಲ್ಕುಂಟೆ ಬಸಣ್ಣ, ಗುಮ್ಮನೂರು ಬಸವರಾಜ್, ಹುಚ್ಚವ್ವನಹಳ್ಳಿ ಪ್ರಕಾಶ್, ಸಿದ್ದಪ್ಪ ನಾಯಕ, ಸತೀಶ್ ಗೌಡಗೊಂಡನಹಳ್ಳಿ, ತಾಯಿಟೋಣಿ ಸಹದೇವರೆಡ್ಡಿ, ನೀರ್ಥಡಿ ತಿಪ್ಪೇಶ್, ಕೋಗಲೂರು ಕುಮಾರ, ಮಡ್ರಳ್ಳಿ ತಿಪ್ಪೇಸ್ವಾಮಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT