ಗುರುವಾರ , ಡಿಸೆಂಬರ್ 3, 2020
20 °C

ಶೋಕಿ ಮಾಡಲು ಬೈಕ್‌ ಕದಿಯುತ್ತಿದ್ದ ಯುವಕರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ ನಗರದಲ್ಲಿ ಬೈಕ್‌ ಕಳವು ಮಾಡುತ್ತಿದ್ದ ಯುವಕರನ್ನು ಪೊಲೀಸರು ಬಂಧಿಸಿರುವುದು

ದಾವಣಗೆರೆ: ಶೋಕಿ ಮಾಡಲು ಬೈಕ್‌ ಕಳವು ಮಾಡುತ್ತಿದ್ದ ಐವರು ಯುವಕರನ್ನು ಬಂಧಿಸಿರುವ ಪೊಲೀಸರು, ಅವರಿಂದ ಒಟ್ಟು ₹ 4.42 ಲಕ್ಷ ಮೌಲ್ಯದ ಆರು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾರವಾರ ತಾಲ್ಲೂಕಿನ ಸೀತಾನಗರ ಗ್ರಾಮದ ಸುನೀಲ್‌ ರಾಠೋಡ್‌ (23), ದಾವಣಗೆರೆಯ ಎಸ್‌.ಒ.ಜಿ ಕಾಲೊನಿಯ ರಫೀಕ್‌ ಅಸ್ಲಂ ಬಾಷಾ (21), ಡಿಪ್ಲೊಮಾ ವಿದ್ಯಾರ್ಥಿ ದರ್ಶನ್‌ ಟಿ.ಪಿ (20), ಹಿರಿಯೂರಿನ ಐಟಿಐ ವಿದ್ಯಾರ್ಥಿ ಮನು ಅಲಿಯಾಸ್‌ ಮನೋಜ್‌ (19) ಹಾಗೂ ಹೊಸದುರ್ಗ ತಾಲ್ಲೂಕಿನ ಮತ್ತೋಡು ಗ್ರಾಮ, ಹಾಲಿ ದಾವಣಗೆರೆಯ ಯರಗುಂಟೆ ನಿವಾಸಿ ವಿನಯ್‌ ಕುಮಾರ್‌ (21) ಬಂಧಿತ ಆರೋಪಿಗಳು.

ಸಿದ್ದವೀರಪ್ಪ ಬಡಾವಣೆಯ ಅವಿನಾಶ್ ಕೆ.ಎ ಅವರು ಜುಲೈ 15ರಂದು ರಾತ್ರಿ ಬಿ.ಇ.ಐ.ಟಿ ರಸ್ತೆಯ ಜೆ.ಎಚ್‌. ಪಟೇಲ್‌ ಕಾಲೇಜಿನ ಪಕ್ಕದಲ್ಲಿ ನಿಲ್ಲಿಸಿದ್ದ ಪಲ್ಸರ್‌ ಬೈಕ್‌ ಕಳವಾಗಿತ್ತು. ಈ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ಅವರು ದೂರು ನೀಡಿದ್ದರು. ಜುಲೈ 21ರಂದು ವಿದ್ಯಾನಗರ ಕೊನೆ ಬಸ್‌ನಿಲ್ದಾಣದಲ್ಲಿ ಕಾನ್‌ಸ್ಟೆಬಲ್‌ ರುದ್ರಪ್ಪ ಹಾಗೂ ಹೋಮ್‌ ಗಾರ್ಡ್‌ ಸಂತೋಷ್‌ ನಾಕಾಬಂದಿ ಮಾಡಿ ವಾಹನ ತಪಾಸಣೆ ಮಾಡುತ್ತಿದ್ದರು. ಅನುಮಾನಾಸ್ಪದವಾಗಿ ಕಂಡು ಬಂದ ಸುನೀಲ್ ರಾಠೋಡ್ ಹಾಗೂ ರಫೀಕ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇವರ ಬಳಿ ಇರುವುದು ಕಳವಾಗಿದ್ದ ಬೈಕ್‌ ಇರುವುದು ಗೊತ್ತಾಗಿದೆ. ಬಳಿಕ ಹೆಚ್ಚಿನ ವಿಚಾರಣೆ ನಡೆಸಿ ಉಳಿದ ಮೂವರನ್ನೂ ಬಂಧಿಸಿ ಅವರಿಂದ ಐದು ಪಲ್ಸರ್‌ ಬೈಕ್‌ ಹಾಗೂ ಒಂದು ರಾಯಲ್‌ ಎನ್‌ಫೀಲ್ಡ್‌ ಬೈಕ್‌ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ತಿಳಿಸಿದ್ದಾರೆ.

ಖಾಸಗಿ ಕಂಪನಿಯಲ್ಲಿ ಡಿಸ್ಟ್ರಿಬ್ಯೂಟರ್‌ ಆಗಿದ್ದ ಸುನಿಲ್‌ಗೆ, ಉತ್ಪನ್ನ ಮಾರುವ ಚೈನ್‌ ಸಿಸ್ಟಮ್‌ನಿಂದಾಗಿ ಉಳಿದವರೊಂದಿಗೆ ಪರಿಚಯವಾಗಿತ್ತು. ಗೂಗಲ್‌ನಲ್ಲಿ ಬೈಕ್‌ ಕಳವು ಮಾಡುವುದು ಹೇಗೆ? ಬೈಕ್‌ನ ಲಾಕರ್‌ ತೆಗೆಯುವುದು ಹೇಗೆ ಎಂಬುದನ್ನು ಸುನೀಲ್‌ ತಿಳಿದುಕೊಂಡಿದ್ದಾನೆ. ಬಳಿಕ ಓಡಾಡಲು ಬೈಕ್‌ ಬೇಕು ಎಂಬ ಕಾರಣಕ್ಕೆ ಗೆಳೆಯರೊಂದಿಗೆ ಸೇರಿಕೊಂಡು ಕಳವು ಮಾಡುತ್ತಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಉದೇಶ್‌ ಟಿ.ಜೆ ಮಾರ್ಗದರ್ಶನದಲ್ಲಿ ನಗರ ವಲಯದ ಡಿವೈಎಸ್‌ಪಿ ಎಂ.ಬಾಬು, ಕೇಂದ್ರ ವೃತ್ತದ ಸಿಪಿಐ ಇ.ಆನಂದ, ವಿದ್ಯಾನಗರ ಠಾಣೆಯ ಪಿ.ಎಸ್.ಐ. ಸಿದ್ದೇಶ್ ಎಂ.ಡಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು