ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಬಲದಂಡೆ ನಾಲೆಗೆ ಫೆ.28ರವರೆಗೆ ನೀರು: ಡಾ.ಎಂ.ವಿ.ವೆಂಕಟೇಶ್

Published 18 ಫೆಬ್ರುವರಿ 2024, 6:20 IST
Last Updated 18 ಫೆಬ್ರುವರಿ 2024, 6:20 IST
ಅಕ್ಷರ ಗಾತ್ರ

ದಾವಣಗೆರೆ: ತೀವ್ರ ಬರಗಾಲದಿಂದಾಗಿ ಈ ವರ್ಷ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುವುದರಿಂದ ಬೇಸಿಗೆ ಹಂಗಾಮಿನಲ್ಲಿ ಅರೆ ನೀರಾವರಿ ಬೆಳೆಗಳಿಗೆ ನೀರು ಹರಿಸಲು ತೀರ್ಮಾನಿಸಿ ಬಲದಂಡೆ ಕಾಲುವೆ ಮೂಲಕ ನೀರು ಹರಿಸಲಾಗುತ್ತಿದ್ದು, ಈ ನೀರು ಕೊನೆ ಹಂತದ ರೈತರಿಗೂ ತಲುಪಿಸುವ ಉಸ್ತುವಾರಿ ನೋಡಿಕೊಳ್ಳಲು ಅಧಿಕಾರಿಗಳ ತಂಡ ರಚಿಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಬಲದಂಡೆ ನಾಲೆಗೆ ಫೆ.16ರಿಂದಲೇ ನೀರು ಬಿಡಲಾಗಿದ್ದು, ಫೆ.28ರವರೆಗೆ ಒಟ್ಟು 13 ದಿನಗಳವರೆಗೆ ನೀರು ಹರಿಸಿ ನಂತರ ನಿಲ್ಲಿಸಲಾಗುತ್ತದೆ. ಈ ವೇಳೆ ಕೊನೆಯ ಹಂತದ ರೈತರಿಗೂ ನೀರು ತಲುಪಿಸಬೇಕಾಗಿದೆ. ನೀರಿನ ಸಂಗ್ರಹ ಕಡಿಮೆ ಇರುವ ಕಾರಣ ಅರೆ ನೀರಾವರಿ ಬೆಳೆ ಬೆಳೆಯಲು ಸಲಹೆ ನೀಡಲಾಗಿದೆ. ಇರುವ ತೋಟಗಳನ್ನು ಉಳಿಸಿಕೊಳ್ಳಲು ಮತ್ತು ಕುಡಿಯುವ ನೀರಿನ ಕೊಳವೆಬಾವಿಗಳ ಅಂತರ್ಜಲ ಕಡಿಮೆಯಾಗದಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ’ ಎಂದರು.

ಅನಧಿಕೃತ ಪಂಪ್‌ಸೆಟ್ ತೆರವಿಗೆ ತಂಡ:

‘ಬಲದಂಡೆಗೆ ಕೆಲವು ರೈತರು ಅನಧಿಕೃತವಾಗಿ ಪಂಪ್ ಅಳವಡಿಕೆ ಮಾಡಿಕೊಂಡು ನೀರೆತ್ತಲಾಗುತ್ತಿದೆ. ಇದರಿಂದ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ನೀರಾವರಿ ಇಲಾಖೆಗೆ ಸೇರಿರುವ ಜಾಗದಲ್ಲಿ ಅಂದರೆ ಭೂಸ್ವಾಧೀನವಾದ ಜಾಗದಲ್ಲಿಯೇ ಕೊಳವೆಬಾವಿ ಕೊರೆಯಿಸಿ ಟಿ.ಸಿ.ಗಳನ್ನು ಅಳವಡಿಸಿ ನೀರೆತ್ತಲಾಗುತ್ತಿದೆ. ನಿಯಮಾನುಸಾರ ಕ್ರಮ ಕೈಗೊಂಡು ಅನಧಿಕೃತವಾಗಿದ್ದಲ್ಲಿ ತೆರವಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ’ ಎಂದು ಎಚ್ಚರಿಸಿದರು.

‘ಅನಧಿಕೃತ ಪಂಪ್‌ಸೆಟ್‌ಗಳ ತೆರವಿಗೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳನ್ನೊಳಗೊಂಡು ದಾವಣಗೆರೆ, ಹರಿಹರ, ಚನ್ನಗಿರಿ ತಾಲ್ಲೂಕುಗಳಿಗೆ ಮೂರು ತಂಡಗಳನ್ನು ರಚನೆ ಮಾಡಲಾಗಿದೆ. ಈ ತಂಡಗಳು ಎಲ್ಲೆಲ್ಲಿ ನಾಲೆಗೆ ಅನಧಿಕೃತವಾಗಿ ಪಂಪ್ ಅಳವಡಿಕೆ ಮಾಡಿದ್ದಾರೆ, ಅದನ್ನು ತೆರವು ಮಾಡುವರು ಮತ್ತು ರೈತರೇ ತೆರವು ಮಾಡದಿದ್ದಲ್ಲಿ ಪರಿಕರಗಳನ್ನು ಸರ್ಕಾರದ ವಶಕ್ಕೆ ಪಡೆದು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ’ ಎಂದರು.

ನಾಲೆಗೆ ನೀರು ಬಿಡಲಾಗಿದ್ದು ಅದರಲ್ಲಿ 10 ಅಡಿ ಮಾತ್ರ ನೀರು ಬರುತ್ತಿದೆ. ಇದು 13 ಅಡಿವರೆಗೆ ಏರಿಕೆಯಾದಲ್ಲಿ ಮಾತ್ರ ಕೊನೆ ಭಾಗದ ರೈತರಿಗೆ ತಲುಪಲು ಸಾಧ್ಯವಿದ್ದು, ಅಗತ್ಯವಿದ್ದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗುತ್ತದೆ. ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಲ್ಲಿ ಕಡಿತಗೊಳಿಸಲು ಬೆಸ್ಕಾಂ ವಿಜಿಲೆನ್ಸ್ ತಂಡದವರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಇಟ್ನಾಳ್ ಮಾತನಾಡಿ, ‘ಜಿಲ್ಲೆಯ ಚನ್ನಗಿರಿ, ಬಹುಗ್ರಾಮಗಳು ಸೇರಿದಂತೆ ಚಿತ್ರದುರ್ಗ ಜಿಲ್ಲೆಗೆ ಶಾಂತಿ ಸಾಗರದಿಂದ ನೀರು ಪೂರೈಸಲಾಗುತ್ತದೆ. ಶಾಂತಿಸಾಗರದಲ್ಲಿ ನೀರಿನ ಸಂಗ್ರಹ ಕಡಿಮೆ ಇದ್ದು, ನಾಲೆಯಿಂದ ನೀರು ಬಿಡುಗಡೆ ಮಾಡಿದಲ್ಲಿ ಬೇಸಿಗೆಗೆ ನೀರು ಪೂರೈಸಲು ಸಾಧ್ಯವಾಗಲಿದೆ. ರಾಜನಹಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು’ ಎಂದು ಹೇಳಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರಿನ್ ಭಾನು ಎಸ್.ಬಳ್ಳಾರಿ, ಬಿ.ಆರ್.ಪ್ರಾಜೆಕ್ಟ್ ಅಧೀಕ್ಷಕ ಎಂಜಿನಿಯರ್ ಸುಜಾತ, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಭದ್ರಾ ನಾಲಾ.ನಂ.5 ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ಆರ್.ಬಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT