ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಭವನ: ಚಟುವಟಿಕೆಯಿಂದ ಬಲು ದೂರ

ಈಡೇರದ ನಿರ್ಮಾಣದ ಆಶಯ; ಬಾಗಿಲು ತೆರೆಯದ ಸುಸಜ್ಜಿತ ಕಟ್ಟಡ
Last Updated 7 ಫೆಬ್ರುವರಿ 2023, 4:56 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ರಾಮನಗರದಲ್ಲಿ, ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆ ಬಳಿ ನಿರ್ಮಿಸಿರುವ ಗಾಂಧಿ ಭವನ ಉದ್ಘಾಟನೆಯಾಗಿ ಒಂದೂವರೆ ವರ್ಷ ಕಳೆದಿದ್ದರೂ ಸಾರ್ವಜನಿಕರ ಉಪಯೋಗಕ್ಕೆ ದೊರೆತಿಲ್ಲ.

1 ಎಕರೆ ಪ್ರದೇಶದಲ್ಲಿ ₹ 3 ಕೋಟಿ ವ್ಯಯಿಸಿ ನಿರ್ಮಿಸಿರುವ ಗಾಂಧಿ ಭವನ ಉಪಯೋಗ ಆಗದಿರುವುದು ಸರ್ಕಾರದ ಹಣದ ಸದ್ಬಳಕೆ ಆಗದಿರುವುದಕ್ಕೆ ನಿದರ್ಶನ ಎಂಬುದು ಸ್ಥಳೀಯರು ಆರೋಪವಾಗಿದೆ.

ಗಾಂಧೀಜಿ 150 ಜನ್ಮದಿನಾಚರಣೆ ಸಂದರ್ಭದಲ್ಲಿ ಯುವ ಪೀಳಿಗೆಗೆ ಅವರ ಮೌಲ್ಯಗಳನ್ನು ಸಾರುವ ಉದ್ದೇಶದಿಂದ ರಾಜ್ಯ ಸರ್ಕಾರ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಗಾಂಧಿ ಭವನ ನಿರ್ಮಿಸಿದೆ. ಅಂತೆಯೇ ಇಲ್ಲಿ ಸುಂದರ ವಿನ್ಯಾಸದ ಗಾಂಧಿ ಭವನ ನಿರ್ಮಿಸಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಈ ಭವನವನ್ನು ಉದ್ಘಾಟಿಸಿದ್ದರು. ಅಲ್ಲಿ ಒಮ್ಮೆ ಮಾತ್ರ ಗಾಂಧೀಜಿ ಜಯಂತಿ ಆಚರಿಸಿದ್ದು ಹೊರತುಪಡಿಸಿದರೆ ಬೇರೆ ಯಾವುದೇ ಚಟುವಟಿಕೆ ನಡೆದಿಲ್ಲ.

ವಿಶಾಲ ಸಭಾಂಗಣ, ‌ಉದ್ಯಾನ, ಕಲಾಕೃತಿಗಳು ಇದ್ದರೂ ಯಾವ ಉದ್ದೇಶಕ್ಕಾಗಿ ಭವನ ನಿರ್ಮಿಸಲಾಗಿತ್ತೋ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ದೂರುತ್ತಾರೆ ಸಾಮಾಜಿಕ ಕಾರ್ಯಕರ್ತರು.

‘ಗಾಂಧಿ ಭವನದ ಸದ್ಬಳಕೆ ಆಗದಿರುವುದು ಬೇಸರದ ಸಂಗತಿ. ಯಾವುದೇ ಕಟ್ಟಡ ಇರಲಿ, ಯಾವ ಉದ್ದೇಶಕ್ಕೆ ನಿರ್ಮಿಸಲಾಗಿದೆಯೋ ಅದಕ್ಕಾಗಿ ಬಳಕೆಯಾಗಬೇಕು. ಈ ಭವನವನ್ನು ನಗರದ ಹೊರವಲಯದಲ್ಲಿ ನಿರ್ಮಿಸಿರುವುದೇ ಸರಿಯಲ್ಲ. ಗಾಂಧೀಜಿಯ ಜೀವನ ಹೋರಾಟ, ಆದರ್ಶಗಳು ಯುವ ಪೀಳಿಗೆಗೆ ತಲುಪಿಸುವ ಕೆಲಸ ಆಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು’ ಎಂದು ಕನ್ನಡಪರ ಹೋರಾಟಗಾರ ನಾಗೇಂದ್ರ ಬಂಡಿಕರ್‌ ಒತ್ತಾಯಿಸಿದರು.

‘ಗಾಂಧಿ ಭವನ ನೋಡಲು ಸುಂದರವಾಗಿದೆ. ಇಂತಹ ಭವನದಲ್ಲಿ ಸಾರ್ವಜನಿಕರಿಗೆ ಮುಕ್ತ ವೀಕ್ಷಣೆ ಅವಕಾಶ ಕಲ್ಪಿಸಬೇಕು. ಆದರೆ, ನಾನಂತೂ ಭವನದ ಬಾಗಿಲು ತೆರೆದಿದ್ದನ್ನೇ ನೋಡಿಲ್ಲ. ವೀಕ್ಷಣೆಗೆ ಅವಕಾಶ ಕಲ್ಪಿಸಿದರೆ ಆ ಮೂಲಕವಾದರೂ ಯುವಜನತೆಗೆ ಗಾಂಧೀಜಿ ಬಗ್ಗೆ ತಿಳಿಯಲು ಸಹಕಾರಿಯಾಗಲಿದೆ’ ಎಂದು ಸ್ಥಳೀಯ ಗೃಹಿಣಿ ವರ್ಷಾ ‘ಪ್ರಜಾವಾಣಿ’ ಎದುರು ಅಭಿಪ್ರಾಯಪಟ್ಟರು.

ಸಮರ್ಪಕ ಬಳಕೆಯ ಉದ್ದೇಶ

‘ಭವನವನ್ನು ಈಗ ಗಾಂಧಿ ಜಯಂತಿ ಆಚರಣೆ ಹಾಗೂ ಗಾಂಧೀಜಿ ಅವರಿಗೆ ಸಂಬಂಧಿಸಿದ ಕಾರ್ಯಕ್ರಮ ಅಯೋಜಿಸಲು ಬಳಸಿಕೊಳ್ಳಲಾಗುತ್ತಿದೆ. ವಾರ್ತಾ ಇಲಾಖೆ ಅಥವಾ ಯಾವುದೇ ಒಂದು ಇಲಾಖೆ ಅಧೀನದಲ್ಲಿ ಇಂತಹ ಭವನಗಳು ಇದ್ದರೆ ಅದರ ಸಮರ್ಪಕ ಬಳಕೆಯಾಗುವುದಿಲ್ಲ. ಉದ್ದೇಶವೂ ಈಡೇರುವುದಿಲ್ಲ. ಜಿಲ್ಲಾಡಳಿತಕ್ಕೆ ನೀಡಿದರೆ ಯುವ ಸಬಲೀಕರಣ, ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಕಾರ್ಯಕ್ರಮ ಹಾಗೂ ಮಹಾತ್ಮ ಗಾಂಧಿಗೆ ಸಂಬಂಧಿತ ಕಾರ್ಯಕ್ರಮಗಳಿಗೂ ಬಳಸಿಕೊಳ್ಳಬೇಕು ಎಂಬ ಸದುದ್ದೇಶದಿಂದ ಸ್ಥಳೀಯ ಆಡಳಿತಕ್ಕೆ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಈ ಸಂಬಂಧ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ’ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್‌. ಹರ್ಷ ‘ಪ್ರಜಾವಾಣಿ’ಗೆ ತಿಳಿಸಿದರು.

ಏನೇನು ಇದೆ

ಕೆಂಪು ಹಂಚಿನ ಭವನದ ಸುತ್ತ ಹಸಿರು ಹೊದಿಕೆಯ ಭವ್ಯ ಉದ್ಯಾನ. ಉದ್ಯಾನದಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತ ಗಾಂಧೀಜಿಯ ಸುಂದರ ಪ್ರತಿಮೆ. ಅದರ ಸುತ್ತ ಗಾಂಧೀಜಿಯ ವಿವಿಧ ಬಗೆಯ ಕಲಾಕೃತಿಗಳು. ಗಾಂಧಿ ಸಾಹಿತ್ಯ ಕಲಾ ವಸ್ತು ಪ್ರದರ್ಶನ ಕೊಠಡಿ, ವಸ್ತು ಸಂಗ್ರಹಾಲಯ, ಸುಂದರ ಸಭಾಂಗಣ, ಗಾಂಧೀಜಿ ಅವರ ಬಾಲ್ಯ, ಸ್ವಾತಂತ್ರ್ಯ ಹೋರಾಟದ ಹೆಜ್ಜೆಗಳು, ಅವರ ವಿಚಾರಧಾರೆಗಳನ್ನು ಪ್ರತಿಬಿಂಬಿಸುವ ವಿಷಯಗಳ ಛಾಯಾಚಿತ್ರಗಳು ಇಲ್ಲಿ ಕಾಣಸಿಗುತ್ತವೆ.

ಗಾಂಧಿ ಭವನವನ್ನು ಜನಾಕರ್ಷಣೆ ಕೇಂದ್ರವಾಗಿಸುವ ನಿಟ್ಟಿನಲ್ಲಿ ಶೀಘ್ರವೇ ಬಾಗಿಲು ತೆರೆಯಬೇಕು. ಇಲ್ಲದಿದ್ದರೆ ಪ್ರತಿಭಟನೆ ಅನಿವಾರ್ಯ.
-ನಾಗೇಂದ್ರ ಬಂಡಿಕರ್‌, ಕನ್ನಡಪರ ಹೋರಾಟಗಾರ

ಗಾಂಧಿ ಭವನ ನಿರ್ಮಾಣದ ಆಶಯ ಸೀಮಿತಗೊಳಿಸಬಾರದು. ವಿವಿಧ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬೇಕು ಎಂಬ ಉದ್ದೇಶದಿಂದ ಜಿಲ್ಲಾಡಳಿತಕ್ಕೆ ಹಸ್ತಾಂತರಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ.
-ಡಾ.ಪಿ.ಎಸ್‌. ಹರ್ಷ, ಆಯುಕ್ತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT