ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿ | ತ್ಯಾಜ್ಯ ಪುರಸಭೆ ವಾಹನಗಳಿಗೆ ನೀಡುವುದು ಕಡ್ಡಾಯ: ಮಹಮದ್ ವಾಸೀಂ

ಬೀದಿ ಬದಿ ವ್ಯಾಪಾರಿಗಳಿಗೆ ಪುರಸಭೆಯಿಂದ ನೋಟಿಸ್ ಜಾರಿ
Published 19 ಮಾರ್ಚ್ 2024, 15:08 IST
Last Updated 19 ಮಾರ್ಚ್ 2024, 15:08 IST
ಅಕ್ಷರ ಗಾತ್ರ

ಚನ್ನಗಿರಿ: ‘ಪಟ್ಟಣದ ಹೋಟೆಲ್, ಡಾಬಾ ಹಾಗೂ ಬೀದಿ ಬದಿ ವ್ಯಾಪಾರಸ್ಥರು ತ್ಯಾಜ್ಯವನ್ನು ಕಡ್ಡಾಯವಾಗಿ ಪುರಸಭೆ ವಾಹನಗಳಿಗೆ ನೀಡಬೇಕು. ಎಲ್ಲೆಂದರಲ್ಲಿ ಎಸೆದರೆ ಅಂತಹ ಡಾಬಾ, ಹೋಟೆಲ್ ಹಾಗೂ ಬೀದಿ ಬದಿ ವ್ಯಾಪಾರಸ್ಥರ ಪರವಾನಗಿಯನ್ನು ರದ್ದುಗೊಳಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಮಹಮದ್ ವಾಸೀಂ ತಿಳಿಸಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಮಂಗಳವಾರ ಹೋಟೆಲ್, ಡಾಬಾ ಹಾಗೂ ಬೀದಿ ಬದಿ ವ್ಯಾಪಾರಸ್ಥರಿಗೆ ತ್ಯಾಜ್ಯ ವಿಲೇವಾರಿ ಬಗ್ಗೆ ನೋಟಿಸ್ ಜಾರಿ ಮಾಡಿ ಮಾತನಾಡಿದರು.

‘ಕೆಲವು ಹೋಟೆಲ್, ಡಾಬಾ ಹಾಗೂ ಬೀದಿ ಬದಿ ವ್ಯಾಪಾರಿಗಳು ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪುರಸಭೆಯ ವಾಹನಗಳಿಗೆ ನೀಡದೇ ಸಾರ್ವಜನಿಕರು ಓಡಾಡುವ ರಸ್ತೆ ಅಥವಾ ಖಾಲಿ ನಿವೇಶನಗಳಲ್ಲಿ ಹಾಕುವ ಮೂಲಕ ಪರಿಸರವನ್ನು ಹಾಳು ಮಾಡುತ್ತಿದ್ದಾರೆ ಎಂಬ ದೂರುಗಳು ಸಾರ್ವಜನಿಕರಿಂದ ಬಂದಿವೆ. ಈ ಬಗ್ಗೆ ಮೌಖಿಕವಾಗಿ ಎಲ್ಲರಿಗೂ ಎಚ್ಚರಿಕೆ ನೀಡಿದರೂ ಸುಧಾರಣೆ ಕಂಡು ಬಂದಿಲ್ಲ’ ಎಂದು ಹೇಳಿದರು.

ಹೋಟೆಲ್, ಡಾಬಾ ಹಾಗೂ ಬೀದಿ ಬದಿ ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂದೆ ಕಡ್ಡಾಯವಾಗಿ ಕಸದ ಬುಟ್ಟಿ ಇಟ್ಟುಕೊಂಡು ಅದರಲ್ಲಿ ತ್ಯಾಜ್ಯ ಹಾಕಬೇಕು. ಈ ತ್ಯಾಜ್ಯವನ್ನು ಪುರಸಭೆಯ ವಾಹನಗಳು ತೆಗೆದುಕೊಂಡು ಹೋಗುತ್ತವೆ. ಅದಕ್ಕಾಗಿ ಇಂದು ಪಟ್ಟಣದ ಎಲ್ಲ ವ್ಯಾಪಾರಸ್ಥರನ್ನು ಕರೆಯಿಸಿ ನೋಟಿಸ್ ಜಾರಿ ಮಾಡಲಾಗಿದೆ. ಇನ್ನು ಮುಂದೆ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದು ಕಂಡು ಬಂದಲ್ಲಿ ಪುರಸಭೆ ಅಧಿನಿಯಮ 1964 ಸೆಕ್ಷನ್ 256ರ ಅಡಿಯಲ್ಲಿ ಪರವಾನಗಿಯನ್ನು ರದ್ದುಪಡಿಸಲಾಗುವುದು ಹಾಗೂ ದಂಡ ಕೂಡಾ ವಿಧಿಸಲಾಗುವುದು ಎಂದರು.

ಹಿರಿಯ ಆರೋಗ್ಯ ನಿರೀಕ್ಷಕ ಜಿ.ಎಸ್.ಶಿವರುದ್ರಪ್ಪ, ವ್ಯವಸ್ಥಾಪಕ ವೈ.ಎಸ್.ಆರಾಧ್ಯ, ಬೀದಿ ಬದಿ ವ್ಯಾಪಾರಿಗಳಾದ ದೀಪ, ವಾಸು, ಚಂದ್ರಶೇಖರ್, ಪ್ರಶಾಂತ್, ಹಾಲೇಶ್, ರಂಗನಾಥ್, ದರ್ಶನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT