ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುತ್ವ ಭಾರತದ ಉಳಿವಿಗೆ ಬಿಜೆಪಿ ತೊಲಗಿಸಿ: ಸಿಪಿಐ

ಸಿಪಿಐ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ಸಲಹೆ
Published 2 ಏಪ್ರಿಲ್ 2024, 5:21 IST
Last Updated 2 ಏಪ್ರಿಲ್ 2024, 5:21 IST
ಅಕ್ಷರ ಗಾತ್ರ

ದಾವಣಗೆರೆ: ‘ಬಹುತ್ವ ಭಾರತಕ್ಕೆ ಧಕ್ಕೆ ತರಲು ಹೊರಟಿರುವ ಬಿಜೆಪಿಯನ್ನು ತೊಲಗಿಸಿ ಪ್ರಜಾಪ್ರಭುತ್ವ, ಸಂವಿಧಾನ ಉಳಿಸಲು ಎಲ್ಲರೂ ಒಂದಾಗಬೇಕಿದೆ’ ಎಂದು ಸಿಪಿಐ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ಅಭಿಪ್ರಾಯಪಟ್ಟರು.

ಭಾರತ ಕಮ್ಯುನಿಸ್ಟ್ ಪಕ್ಷ, ಕಾಂಗ್ರೆಸ್ ಹಾಗೂ ವಿವಿಧ ಪಕ್ಷಗಳ ನೇತೃತ್ವದಲ್ಲಿ ಸೋಮವಾರ ಆಯೋಜಿಸಿದ್ದ ಸಂವಿಧಾನ, ಪ್ರಜಾತಂತ್ರ, ಬಹುತ್ವ ಭಾರತ ಉಳಿಸಲು ರಾಜಕೀಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬಹುಭಾಷೆ, ಬಹುಧರ್ಮ, ಬಹುವರ್ಣಗಳಿರುವ ಭಾರತವನ್ನು ಬಿಜೆಪಿ ಅಧಿಕಾರಕ್ಕೆ ಬಂದರೆ ಒಂದು ದೇಶ, ಒಂದು ಚುನಾವಣೆ ಹಾಗೂ ಒಬ್ಬನೇ ನಾಯಕ ಎಂಬ ನೀತಿಯನ್ನು ಜಾರಿಗೊಳಿಸಲು ಹೊರಟಿದ್ದು, ಈ ಮೂರು ಅಪಾಯಗಳ ಬಗ್ಗೆ ಚರ್ಚಿಸಲು ಹಾಗೂ ಬಹುತ್ವ ಭಾರತ ಉಳಿಯಬೇಕಾದರೆ ಬಿಜೆಪಿ ಸೋಲಿಸಬೇಕು’ ಎಂದರು.

‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಶಿಬು ಸೊರೇನ್ ಅವರನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಿರುವುದು ಪ್ರಜಾಪ್ರಭುತ್ವದ ವಿರೋಧಿ ನೀತಿ. ಇದನ್ನು ನಿಲ್ಲಿಸಬೇಕಿದೆ’ ಎಂದು ಹೇಳಿದರು.

‘ಅಂಬೇಡ್ಕರ್ ಸಂವಿಧಾನದಿಂದ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿತ್ತು. ಆರ್‌ಎಸ್ಎಸ್‌ ಮೂಲ ಆಶಯಗಳನ್ನು ಜಾರಿಗೊಳಿಸುವುದು ಬಿಜೆಪಿಯ ಕರ್ತವ್ಯ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.  ಆದರೆ ಆರ್‌ಎಸ್ಎಸ್, ಬಿಜೆಪಿ ಅಂಬೇಡ್ಕರ್ ಸಂವಿಧಾನವನ್ನು ಒಪ್ಪಿರಲಿಲ್ಲ. ಬದಲಾಗಿ ಮನುಸ್ಮೃತಿಯನ್ನು ಒಪ್ಪಿದ್ದು, ಜಾತುರ್ವರ್ಣ ಜಾರಿಗೆ ನಿರಂತರ ಪ್ರಯತ್ನ ನಡೆಯುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರು, ಕಾರ್ಮಿಕರು, ಬಡವರು ಹಾಗೂ ಅಲ್ಪಸಂಖ್ಯಾತರು ಶೂದ್ರರಾಗಿ ದುಡಿಯಬೇಕಾಗುತ್ತದೆ. ಉದ್ಯೋಗ ಹಾಗೂ ಸ್ವಾಭಿಮಾನದ ಹಕ್ಕುಗಳನ್ನು ಕಸಿದುಕೊಳ್ಳುವ ನಿರಂತರ ಪ್ರಯತ್ನ ನಡೆಯುತ್ತಿದೆ’ ಎಂದು ಆರೋಪಿಸಿದರು.

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ‘ಮೋದಿಯವರು ಅಧಿಕಾರಕ್ಕೆ ಬಂದಾನಿಂದಲೂ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ ಹಿಜಾಬ್, ಹಲಾಲ್ ಕಟ್, ಶ್ರೀರಾಮ ಮುಂತಾದ ವಿಷಯಗಳ ಬಗ್ಗೆ ಮಾತನಾಡುವ ಮೂಲಕ ಯುವಕರ ಮನಸ್ಸನ್ನು ಬೇರೆ ಕಡೆಗೆ ತಿರುಗಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಸಂವಿಧಾನ ಬದಲಿಸುವ ನರೇಂದ್ರ ಮೋದಿಯವರ ಹಿಡನ್ ಅಜೆಂಡಾವನ್ನು ಅನಂತ್‌ಕುಮಾರ್ ಹೆಗಡೆ ಹೇಳಿದ್ದಾರೆ’ ಎಂದು ಆರೋಪಿಸಿದರು.

‘ದೇಶದ ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸುವವರನ್ನು ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಹಾಗೂ ಸಿಬಿಐಗಳ ಮೂಲಕ ಜೈಲಿಗೆ ಕಳುಹಿಸಲಾಗುತ್ತದೆ. ಭ್ರಷ್ಟಾಚಾರ ಮಾಡಿದವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಮೂಲಕ ಅವರಿಗೆ ಕ್ಲೀನ್‌ಚಿಟ್ ನೀಡಲಾಗುತ್ತಿದೆ. ಬಿಜೆಪಿ ಬಾಂಡ್ ಮೂಲಕ ₹6000 ಕೋಟಿ ಸಂಗ್ರಹ ಮಾಡಿದ್ದು, ಪ್ರಚಾರಕ್ಕಾಗಿ ಬಿಜೆಪಿಯವರು ಐಷಾರಾಮಿ ಕಾರುಗಳನ್ನು ಬಳಕೆ ಮಾಡುತ್ತಿದ್ದು, ಆದರೆ ಕಾಂಗ್ರೆಸ್‌ನವರು ಇದನ್ನು ಮಾಡುವ ಆಗಿಲ್ಲ. ಇಂತಹ ಹಿಟ್ಲರ್ ಸಂಸ್ಕೃತಿ ತೊಲಗಬೇಕು’ ಎಂದು ಹೇಳಿದರು.

‘ಬೇಲಿಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಜೈಲಿಗೆ ಹೋಗಬೇಕಿತ್ತು. ಎರಡು ತಿಂಗಳ ಹಿಂದೆ ಕಾರು ಚಾಲಕ ಹವಾಲಾ ದಂಧೆಯ ಪ್ರಕರಣ ದಾಖಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

‘ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಸಬ್‌ ಕಾ ಸಾತ್, ಸಬ್‌ ಕಾ ವಿಕಾಸ್ ಬದಲಿಗೆ ಸಬ್‌ಕಾ ವಿನಾಶ್ ಆಗಿದೆ. ಅಂಬಾನಿ, ಅದಾನಿ ಉದ್ಧಾರ ಮಾಡಿದ್ದಾರೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಂವಿಧಾನದ ಮೌಲ್ಯ ಜೀವಂತವಾಗಿ ಉಳಿಯುವುದಿಲ್ಲ’ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ ಹೇಳಿದರು.

ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ಆವರಗೆರೆ ಚಂದ್ರು ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಆನಂದರಾಜ್, ಚಿತ್ರದುರ್ಗ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಎಸ್.ಎಸ್. ಬಕ್ಕೇಶ್, ಮುಖಂಡರಾದ ಕೆ.ಜಿ. ಶಿವಕುಮಾರ್, ಅನಿತಾಬಾಯಿ ಮಾಲತೇಶ್, ಎ.ನಾಗರಾಜು, ಟಿ.ಉಮಾಪತಿ, ರವಿಕುಮಾರ್, ಗುಡಿಹಳ್ಳಿ ಹಾಲೇಶ್, ಎಂ.ಬಿ.ಶಾರದಮ್ಮ, ತುಂಬಿಗೆರೆ ನಾಗಣ್ಣ, ಲಕ್ಷ್ಮಣ, ನಾಗರಾಜು, ರಫೀಕ್, ಆವರೆಗೆರೆ ವಾಸು, ಅನೀಶ್ ಪಾಷ, ರಾಮಚಂದ್ರ ಕಲಾಲ್, ಕರಿಬಸಪ್ಪ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT