ಮರವಂಜಿ: ‘ಅನಾಥೆ’ಯಾದ ತಾಯಿ

7
ಯುವತಿ ಅನುಮಾನಾಸ್ಪದ ಸಾವು: ಅಜ್ಜಿ, ತಂದೆ ಬಂಧನ

ಮರವಂಜಿ: ‘ಅನಾಥೆ’ಯಾದ ತಾಯಿ

Published:
Updated:

ಚನ್ನಗಿರಿ: ಇತ್ತ ಮಗಳೂ ಇಲ್ಲ; ಬಾಳಿಗೆ ದಾರಿ ದೀಪವಾದ ಗಂಡ, ಮಾತೃ ಸಮಾನರಾದ ಅತ್ತೆಯೂ ಇಲ್ಲ. ಮುಂದೆ ಏನು ಮಾಡಬೇಕು ಎಂದು ತೋಚದೆ, ‘ಎಂತಹ ಪರಿಸ್ಥಿತಿ ತಂದಿಟ್ಟೆ ದೇವರೇ’ ಎಂದು ಮನೆಯ ಮೂಲೆಯಲ್ಲಿ ಕುಳಿತು ಕಣ್ಣೀರು ಸುರಿಸುತ್ತಿದ್ದಾರೆ ತಾಲ್ಲೂಕಿನ ಮರವಂಜಿ ಗ್ರಾಮದ ಮಹಿಳೆ.

ಜೂನ್‌ 26ರಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಯುವತಿಯ ಮನೆಗೆ ಮಂಗಳವಾರ ಭೇಟಿ ನೀಡಿದಾಗ, ತಾಯಿ ಎದುರಿಸುತ್ತಿರುವ ದಾರುಣ ಸ್ಥಿತಿ ಕಂಡು ಬಂತು.  ಯುವತಿಯ ಕೊಲೆ ಮಾಡಿರುವ ಆರೋಪದಡಿ ಆಕೆಯ ಅಜ್ಜಿ ದಾಕ್ಷಾಯಣಮ್ಮ ಹಾಗೂ ತಂದೆ ಪರಮೇಶ್ವರಪ್ಪ ಇದೀಗ ಜೈಲು ಸೇರಿದ್ದು, ಎಲ್ಲವನ್ನೂ ಕಳೆದುಕೊಂಡ ತಾಯಿಗೆ ‘ಅನಾಥ ಪ್ರಜ್ಞೆ’ ಕಾಡುತ್ತಿದೆ. ಅವರ ಮನೆಯಲ್ಲಿ ಈಗ ವೃದ್ಧ ಮಾವ, ಹದಿನಾರು ವರ್ಷದ ಮಗ ಮಾತ್ರ ಇದ್ದಾರೆ. ಕುಟುಂಬ ಮುನ್ನಡೆಸುವ ಜವಾಬ್ದಾರಿ ತಾಯಿಯ ಹೆಗಲೇರಿದೆ.

‘ಮಣಿಪಾಲ ಆಸ್ಪತ್ರೆಯಿಂದ ಮನೆಗೆ ಬಂದಾಗ ಮಗಳು ವಿಷ ಕುಡಿದು ಸಾವನ್ನಪ್ಪಿದ್ದಾಳೆ ಎಂದು ನನ್ನ ಗಂಡ ಹೇಳಿದ. ಆದರೆ, ಆಕೆಯ ಕುತ್ತಿಗೆಯ ಬಳಿ ಹಗ್ಗದ ಗುರುತು ಇರುವುದನ್ನು ಕಂಡು ಮಗಳನ್ನು ಯಾರೋ ಕೊಲೆ ಮಾಡಿದ್ದಾರೆ ಎಂಬ ಶಂಕೆಯಿಂದ ಚನ್ನಗಿರಿ ಠಾಣೆಗೆ ದೂರು ನೀಡಿದೆ. ಆಗ ಅತ್ತೆ ಹಾಗೂ ನನ್ನ ಗಂಡ ಸೇರಿಕೊಂಡು ಕೊಲೆ ಮಾಡಿರಬಹುದು ಎಂಬ ಬಗ್ಗೆ ಸ್ವಲ್ಪವೂ ಶಂಕೆ ಬರಲಿಲ್ಲ. ಅವರನ್ನು ಪೊಲೀಸರು ಬಂಧಿಸಲು ಬಂದಾಗ ನನಗೆ ಅಘಾತವಾಯಿತು’ ಎನ್ನುವಾಗ ಮಹಿಳೆ ಗದ್ಗದಿತರಾದರು.

‘ಈಗ ಮಗಳು, ಅತ್ತೆ ಹಾಗೂ ಗಂಡ ಇಲ್ಲದೇ ಏನು ಮಾಡುವುದು ಎಂದು ತಿಳಿಯದಾಗಿದೆ. ನನ್ನ ಗಂಡ ಹಾಗೂ ಅತ್ತೆ ಇಲ್ಲದೆ ಮಗಳ ಅಂತ್ಯಕ್ರಿಯೆ ವಿಧಿ–ವಿಧಾನಗಳನ್ನು ನಡೆಸಬೇಕಾದ ಪರಿಸ್ಥಿತಿ ಬಂದಿದೆ. ಮನಸ್ಸಿಗೆ ತುಂಬಾ ಅಘಾತವಾಯಿತು’ ಎಂದು ಅವರು ನೋವಿನಿಂದ ನುಡಿದರು.

ಮರ್ಯಾದೆಗೇಡು ಹತ್ಯೆ ಶಂಕೆ: ಸಾರ್ವಜನಿಕ ವಲಯದಲ್ಲಿ ಚರ್ಚೆ

ಯುವತಿಯು ಅದೇ ಗ್ರಾಮದ ಅನ್ಯ ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದಳು. ಇದಕ್ಕೆ ಆಕೆಯ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು. ಪ್ರೇಮಿಗಳಿಬ್ಬರೂ ಓಡಿ ಹೋಗಿ ವಿವಾಹವಾಗಿದ್ದರು. ಯುವತಿಯ ಪೋಷಕರು ಪೋಕ್ಸೊ ಕಾಯ್ದೆಯಡಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರೇಮಿಗಳನ್ನು ಪತ್ತೆ ಮಾಡಿ ಕರೆತಂದಿದ್ದರು. ಹುಡುಗನನ್ನು ಜೈಲಿಗೆ ಕಳುಹಿಸಲಾಗಿತ್ತು. ಇದರಿಂದ ಬೇಸತ್ತಿದ್ದ ಯುವತಿಯು ಈ ಹಿಂದೆ ಕೆಲ ಬಾರಿ ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದಳು.

‘ಜೂನ್‌ 26ರಂದು ರಾತ್ರಿ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದನ್ನು ಗಮನಿಸಿದ ಅಜ್ಜಿ ದಾಕ್ಷಾಯಣಮ್ಮ, ಚಿಕಿತ್ಸೆಗಾಗಿ ಮಣಿಪಾಲಕ್ಕೆ ತೆರಳಿದ್ದ ಪರಮೇಶ್ವರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ. ಈ ಬೆಳವಣಿಗೆಯಿಂದ ಸಿಟ್ಟಿಗೆದ್ದ ಪರಮೇಶ್ವರಪ್ಪ, ಮಗಳ ಕಾಟ ತುಂಬಾ ಹೆಚ್ಚಾಯಿತು. ಅವಳ ಕುತ್ತಿಗೆ ಹಿಸುಕಿ ಸಾಯಿಸಿ ಬಿಡು ಎಂದು ಸೂಚನೆ ನೀಡಿದ. ಅದರಂತೆ ಅಜ್ಜಿ ಹಗ್ಗದಿಂದ ಆಕೆಯ ಕುತ್ತಿಗೆ ಬಿಗಿದು ಸಾಯಿಸಿದ್ದಾಳೆ ಎಂಬುದು ವೈದ್ಯಕೀಯ ವರದಿ ಬಂದ ಬಳಿಕ ನಡೆಸಿದ ವಿಚಾರಣೆಯಿಂದ ಗೊತ್ತಾಯಿತು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅನ್ಯ ಜಾತಿಯ ಹುಡುಗನನ್ನು ಪ್ರೀತಿಸಿದ್ದ ಯುವತಿಯ ಕೊಲೆ ಪ್ರಕರಣದಲ್ಲಿ ಅಜ್ಜಿ ಹಾಗೂ ತಂದೆ ಬಂಧನಕ್ಕೆ ಒಳಗಾಗಿದ್ದು, ಇದು ‘ಮರ್ಯಾದೆಗೇಡು ಹತ್ಯೆ’ ಇರಬಹುದೇ ಎಂಬ ಬಗ್ಗೆ ಇದೀಗ ಚರ್ಚೆ ನಡೆಯುತ್ತಿದೆ. ಆದರೆ, ಪೊಲೀಸ್‌ ಅಧಿಕಾರಿಗಳು ಮಾತ್ರ, ‘ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಸಿದ ಬಳಿಕವೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯ. ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !