ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರದ ಸಮಗ್ರ ಅಭಿವೃದ್ಧಿಗೆ ಒತ್ತು

ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಭರವಸೆ
Published 3 ಏಪ್ರಿಲ್ 2024, 5:19 IST
Last Updated 3 ಏಪ್ರಿಲ್ 2024, 5:19 IST
ಅಕ್ಷರ ಗಾತ್ರ

ಹರಿಹರ: ‘ಹರಿಹರ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ’ ಎಂದು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಭರವಸೆ ನೀಡಿದರು.

ನಗರದ ಎಚ್.ಕೆ.ವೀರಪ್ಪ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಇಲ್ಲಿನ ಕಾಂಗ್ರೆಸ್ ಮುಖಂಡರ ಸಹಕಾರದಿಂದ ಹರಿಹರ ಕ್ಷೇತ್ರದ ನನೆಗುದಿಗೆ ಬಿದ್ದಿರುವ ಭೈರನಪಾದ ಏತ ನೀರಾವರಿ ಯೋಜನೆ ಅನುಷ್ಠಾನ, ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸುವುದು, ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಸೇರಿದಂತೆ ಹರಿಹರವನ್ನು ಮತ್ತೆ ಕೈಗಾರಿಕಾ ನಗರವಾಗಿ ರೂಪಿಸಲಾಗುವುದು’ ಎಂದು ತಿಳಿಸಿದರು.

ಹರಿಹರ ತವರು ಮನೆ:

‘ನನ್ನ ತಂದೆ ಬಿರ್ಲಾ ಕಂಪನಿ ನೌಕರರಾಗಿದ್ದಾಗ 25 ವರ್ಷಗಳ ಹಿಂದೆ ಹರಿಹರದಲ್ಲೇ ಹಲವು ವರ್ಷ ವಾಸವಿದ್ದೆ. ಇಲ್ಲಿನ ಬಾಲಾಜಿ ಬೇಕರಿಯ ಹನಿ ಕೇಕ್ ಎಂದರೆ ನನಗಾಗ ಬಹಳ ಇಷ್ಟವಾಗಿತ್ತು. ಎಸ್.ಬಿ.ಡ್ರೆಸ್ ಲ್ಯಾಂಡ್ ಟೈಲರ್ ಅಂಗಡಿಯಲ್ಲೇ ಬಟ್ಟೆ ಹೊಲಿಸುತ್ತಿದ್ದೆ. ಹರಿಹರ ನನಗೆ ತವರು ಮನೆ ಇದ್ದಂತೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ. ಆಶ್ವಾಸನೆ ನೀಡಿದಂತೆ 5 ಗ್ಯಾರಂಟಿಗಳನ್ನು ಜಾರಿ ಮಾಡಿ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಮಾತ್ರ ನಾಡಿನಲ್ಲಿ, ದೇಶದಲ್ಲಿ ಎಲ್ಲ ಜಾತಿ, ಧರ್ಮದವರು ಸಾಮರಸ್ಯದಿಂದ ಬದುಕುವ ವಾತಾವರಣ ಇರುತ್ತದೆ’ ಎಂದರು.

‘ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆಯಾದಂದಿನಿಂದ ಡಾ.ಪ್ರಭಾ ಅವರು ತಾಲ್ಲೂಕಿನ ಡಿಬಿ ಕೆರೆ ಕಾಲುವೆಗಳಿಗೆ, ನದಿಗೆ ನೀರು ಹರಿಸುವ ವಿಚಾರವಾಗಿ ಶ್ರಮಿಸಿದ್ದಾರೆ. ಆದರೆ, ಹರಿಹರದಲ್ಲಿ ಎಥೆನಾಲ್ ಹಾಗೂ ಯುರಿಯಾ ಕಾರ್ಖಾನೆ ಆರಂಭಿಸುವಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ವಿಫಲರಾದರು’ ಎಂದು ಮುಖಂಡ ನಂದಿಗಾವಿ ಶ್ರೀನಿವಾಸ್ ಹೇಳಿದರು.

‘ಪ್ರಧಾನಿ ಮೋದಿಯವರ ಬಿಜೆಪಿ ಪಕ್ಷವು ಚುನಾವಣಾ ಬಾಂಡುಗಳ ಮೂಲಕ ಉದ್ಯಮಿಗಳಿಂದ ಸಾವಿರಾರು ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿರುವುದು ಭ್ರಷ್ಟಾಚಾರವಲ್ಲದೆ ಮತ್ತೇನು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ನಾಗೇಂದ್ರಪ್ಪ ಪ್ರಶ್ನಿಸಿದರು.

‘ತಮ್ಮ ಸಕ್ಕರೆ ಕಾರ್ಖಾನೆಗೆ ಅನುಕೂಲವಾಗಲಿ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಅವರು ಹೊಸಪೇಟೆ-ಶಿವಮೊಗ್ಗ ಹೆದ್ದಾರಿ ಅಭಿವೃದ್ಧಿಗೆ ಇದ್ದ ಅನುದಾನವನ್ನು ಹೊನ್ನಾಳಿ ರಾಣೆಬೆನ್ನೂರು ರಸ್ತೆ ಅಭಿವೃದ್ಧಿಗೆ ಬಳಸಿಕೊಂಡರು. ದಾವಣಗೆರೆಗೆ ವಿಮಾನ ನಿಲ್ದಾಣ ಮಂಜೂರು ಮಾಡಿಸಲಾಗಲಿಲ್ಲ’ ಎಂದು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಿ.ಕುಮಾರ್ ಆರೋಪಿಸಿದರು.

ಮಾಜಿ ಶಾಸಕ ಎಸ್.ರಾಮಪ್ಪ, ಮುಖಂಡರಾದ ಎಚ್.ಬಿ.ಮಂಜಪ್ಪ, ಎ.ಗೋವಿಂದರೆಡ್ಡಿ, ಎಚ್.ಕೆ.ಕನ್ನಪ್ಪ ಭಾನುವಳ್ಳಿ, ರಾಮಚಂದ್ರ ಕಲಾಲ್, ಟಿ.ಜೆ.ಮುರುಗೇಶ್, ಶಂಕರ್ ಖಟಾವ್‌ಕರ್, ಎಲ್.ಬಿ.ಹನುಮಂತಪ್ಪ, ಎಂ.ಬಿ.ಆಬಿದ್ ಅಲಿ, ಮೊಹ್ಮದ್ ಫೈರೋಜ್, ಹರಳಹಳ್ಳಿ ಜಬ್ಬಾರ್, ಸಮರ್ಥ್ ಶಾಮನೂರು, ರೇವಣಸಿದ್ದಪ್ಪ, ವೈ.ಎನ್.ಮಹೇಶ್, ಡಿ.ವೈ.ಇಂದಿರಾ, ಎಚ್.ಕೆ.ಕೊಟ್ರಪ್ಪ, ಬಾಂಬೆ ರೆಹಮಾನ್, ಸೈಯದ್ ಸನಾಉಲ್ಲಾ, ಮಲ್ಲೇಶ್, ಸಿ.ಎನ್.ಹುಲಿಗೇಶ್, ಆಪ್ ಪಕ್ಷದ ಮುಖಂಡರಾದ ಗಣೇಶ್ ದುರ್ಗದ, ಹಲಸಬಾಳು ಬಸವರಾಜಪ್ಪ ಇದ್ದರು.

- ‘ಅಭಿವೃದ್ಧಿ: ಸಾರ್ವಜನಿಕ ಚರ್ಚೆಗೆ ಸಿದ್ಧ’

‘ಶಾಮನೂರು ಶಿವಶಂಕರಪ್ಪ ಕುಟುಂಬದವರು ಸಚಿವರಾಗಿದ್ದಾಗಲೇ ಜಿಲ್ಲೆ ಅಭಿವೃದ್ಧಿ ಕಂಡಿದೆ. ಜಿಲ್ಲೆಯಲ್ಲಿ 60 ಸಾವಿರ ಆಶ್ರಯ ಮನೆ ನಿರ್ಮಿಸಿದ ಶ್ರೇಯಸ್ಸು ಶಾಮನೂರು ಕುಟುಂಬಕ್ಕೆ ಸಲ್ಲುತ್ತದೆ. ಬಿಜೆಪಿಯವರು ಸ್ವಂತ ಲಾಭಕ್ಕೆ ಮಾತ್ರ ಆದ್ಯತೆ ನೀಡುತ್ತಾರೆ. ಜವಳಿ ಪಾರ್ಕಿಗೆಂದು ಮೀಸಲಾಗಿದ್ದ 12 ಎಕರೆ ಜಮೀನು ಆ ಪಕ್ಷದ ಕುಟುಂಬದ ಸದಸ್ಯರ ವಶಕ್ಕೆ ಹೋಗಿದೆ. ಅಭಿವೃದ್ಧಿ ಬಗ್ಗೆ ಸಾರ್ವಜನಿಕ ಚರ್ಚೆಗೆ ನಾವು ಸಿದ್ಧ’ ಎಂದು ಕಾಂಗ್ರೆಸ್ ವಕ್ತಾರ ಡಿ.ಬಸವರಾಜ್ ಬಿಜೆಪಿಗೆ ಪಂಥಾಹ್ವಾನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT