ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಡರನಾಯ್ಕನಹಳ್ಳಿ | ತಂಗುದಾಣದ ತುಂಬೆಲ್ಲಾ ಚಿತ್ತಾರ

ಸೈನಿಕನ ಪರಿಶ್ರಮದಿಂದ ಮದುವಣಗಿತ್ತಿಯಂತೆ ಸಿಂಗಾರ
Published 11 ಮೇ 2024, 6:35 IST
Last Updated 11 ಮೇ 2024, 6:35 IST
ಅಕ್ಷರ ಗಾತ್ರ

ಕಡರನಾಯ್ಕನಹಳ್ಳಿ: ದೇಶ ಕಾಯುವ ಸೈನಿಕರೊಬ್ಬರು ಸಮಾಜ ಸೇವೆಗೂ ಸೈ ಎನಿಸಿಕೊಂಡಿದ್ದಾರೆ. ಅನೈತಿಕ ಚಟುವಟಿಕೆಗಳ ತಾಣವಾಗಿದ್ದ ಇಲ್ಲಿನ ಪ್ರಯಾಣಿಕರ ತಂಗುದಾಣವನ್ನು ಮದುವಣಗಿತ್ತಿಯಂತೆ ಸಿಂಗಾರಗೊಳಿಸಿ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾರೆ.

ಇಲ್ಲಿಗೆ ಸಮೀಪದ ಡಾ.ವೈ.ನಾಗಪ್ಪ ಬಡಾವಣೆಯ ಶಾಂತಕುಮಾರ್ ಅವರು ಉತ್ತರ ಪ್ರದೇಶದಲ್ಲಿ ಸೈನಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಜೆಯ ಮೇಲೆ ಊರಿಗೆ ಬಂದ ಅವರು ತಂಗುದಾಣದ ದುಃಸ್ಥಿತಿ ಗಮನಿಸಿ, ಅದಕ್ಕೆ ಕಾಯಕಲ್ಪ ಕೊಡುವ ಸಂಕಲ್ಪ ಮಾಡಿದರು. ಬಡಾವಣೆಯ ನಿವಾಸಿ, ಚಿತ್ರಕಲಾವಿದ ಪಿ.ಟಿ. ಬಸವರಾಜ್ ಅವರು ಶಾಂತಕುಮಾರ್ ಅವರ ಕನಸಿಗೊಂದು ರೂಪು ನೀಡಿದರು.

ತಂಗುದಾಣದ ಒಂದು ಬದಿಯ ಗೋಡೆಗೆ ನೇಗಿಲು ಹೊತ್ತ ರೈತ ಮತ್ತು ಹೊಲ–ಗದ್ದೆಗಳ ಚಿತ್ರ, ಇನ್ನೊಂದು ಬದಿಯ ಗೋಡೆಗೆ ರಾಷ್ಟ್ರಧ್ವಜ ಮತ್ತು ಬಂದೂಕು ಹಿಡಿದ ಸೈನಿಕರ ಚಿತ್ರ, ಮತ್ತೊಂದು ಬದಿಯ ಗೋಡೆಗೆ ಕ್ರೀಡೆಗೆ ಸಂಬಂಧಿಸಿದ ಚಿತ್ರವನ್ನು ರಚಿಸಲಾಗಿದೆ. ಬಲಭಾಗದಲ್ಲಿ ಮದ್ಯ ನಿಷೇಧ ಬಿಂಬಿಸುವ ಚಿತ್ರ ಬಿಡಿಸಲಾಗಿದೆ. ಕಂಬಗಳಿಗೂ ಅತ್ಯಾಕರ್ಷಕ ಪೇಂಟಿಂಗ್ ಮಾಡಲಾಗಿದೆ. ಚಿತ್ತಾಕರ್ಷಕ ರಚನೆಯ ಬಳಿಕ ತಂಗುದಾಣದ ಮೂಲ ಸ್ವರೂಪವೇ ಬದಲಾಗಿ ಆಕರ್ಷಣೆ ಪಡೆದುಕೊಂಡಿತು.

ತಂಗುದಾಣದ ಗೋಡೆಗಳ ಮೇಲೆ ಯಾರೂ ಪೋಸ್ಟರ್ ಹಚ್ಚುವಂತಿಲ್ಲ ಮತ್ತು ಗಲೀಜು ಮಾಡಬಾರದು ಎಂದು ಬರೆಯಲಾಗಿದೆ. ಒಳಭಾಗದಲ್ಲಿ ಗೋಡೆಗಳ ಮೇಲೆ ನುಡಿಗಟ್ಟುಗಳನ್ನು ಬರೆಯಲಾಗಿದೆ. ‘ಶಾಲೆಯಲ್ಲಿ ಗುರುಗಳು ಹೊಡೆದು ಕಲಿಸುವುದು ಕಡಿಮೆ ಆಗಿದ್ದರಿಂದ ಪೊಲೀಸ್ ಠಾಣೆಗಳಲ್ಲಿ ಹೊಡೆಯುವುದು ಹೆಚ್ಚಾಗಿದೆ’ ಎಂಬುದು ಈ ಪೈಕಿ ಒಂದು. 

ತಂಗುದಾಣದೊಳಗೆ ವಾಹನಗಳು ಅಥವಾ ಜಾನುವಾರುಗಳು ಪ್ರವೇಶಿಸದಂತೆ ಕಬ್ಬಿಣದ ರಾಡುಗಳನ್ನು ಅಳವಡಿಸಲಾಗಿದೆ. ಬಸ್‌ಗಾಗಿ ಕಾಯುವ ಪ್ರಯಾಣಿಕರು ತಂಗುದಾಣದ ಅಂದ ಹೆಚ್ಚಿಸಿರುವ ಕೆಲಸವನ್ನು ಶ್ಲಾಘಿಸಿದ್ದಾರೆ. 

‘ನಾಗಪ್ಪ ಬಡಾವಣೆಯಲ್ಲಿ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿವೆ. ನೂರಾರು ವಿದ್ಯಾರ್ಥಿಗಳು ಸೇರುವ ತಂಗುದಾಣವನ್ನು ಸ್ವಚ್ಛ ಮತ್ತು ಆಕರ್ಷವಾಗಿ ಇಟ್ಟುಕೊಳ್ಳಬೇಕು. ಮಕ್ಕಳು ಸೇರಿದಂತೆ ಎಲ್ಲರೂ ತುಸು ಹೊತ್ತು ಇರುವ ಈ ತಾಣ, ಮುಜುಗರ ತರಿಸುವಂತಿರಬಾರದು’ ಎಂದು ಸೈನಿಕ ಶಾಂತಕುಮಾರ್ ಅಭಿಪ್ರಾಯಪಟ್ಟಿದ್ದಾರೆ. 

‘ಈಗಾಗಲೇ ನಿರ್ಮಾಣವಾಗಿದ್ದ ತಂಗುದಾಣವನ್ನು ₹20,000 ವೆಚ್ಚದಲ್ಲಿ ಬಣ್ಣ ಹಾಗೂ ಚಿತ್ರಗಳಿಂದ ಸುಂದರಗೊಳಿಸಿದ್ದೇವೆ. ಯಾರಿಂದಲೂ ವಂತಿಗೆ ಪಡೆದಿಲ್ಲ. ನನ್ನ ಸ್ವಂತ ಖರ್ಚಿನಲ್ಲಿ ನವೀಕರಣ ಮಾಡಿದ್ದೇನೆ. ಕಲಾವಿದ ಪಿ.ಟಿ. ಬಸವರಾಜ್, ಸ್ನೇಹಿತರಾದ ರಂಗನಾಥ್, ಎಚ್.ಎಸ್.ಸುರೇಶ್, ಹೇಮಂತ್, ಉಪೇಂದ್ರ ಮತ್ತು ಬಳಗ ಈ ಕಾರ್ಯಕ್ಕೆ ನೆರವಾಗಿದೆ. ಪ್ರತಿ ಗ್ರಾಮದಲ್ಲೂ ಇಂತಹ ಕಾರ್ಯಗಳು ಆಗಬೇಕು’ ಎಂದು ಅವರು ಆಶಿಸಿದ್ದಾರೆ. 

ಶಾಂತಕುಮಾರ್
ಶಾಂತಕುಮಾರ್
ನಮ್ಮ ಗ್ರಾಮ ನಮ್ಮ ಆಸ್ತಿ. ಬೀದಿಗಳು ತಂಗುದಾಣ ಶಾಲೆಗಳನ್ನು ಕಾಪಾಡಿಕೊಳ್ಳಬೇಕು. ಸಮಾಜಕ್ಕೆ ನಮ್ಮಿಂದ ಸಾಧ್ಯವಿರುವ ಒಳ್ಳೆಯ ಕೆಲಸ ಮಾಡಬೇಕು ಮತ್ತು ಇತರರನ್ನೂ ಪ್ರೇರೇಪಿಸಬೇಕು
ಶಾಂತಕುಮಾರ್ ಸೈನಿಕ ಕಡರನಾಯ್ಕನಹಳ್ಳಿ
ತಂಗುದಾಣದ ಒಳಗಡೆ ಕಾಲಿಟ್ಟೊಡನೆ ಗೋಡೆಗಳ ಮೇಲೆ ಚಿತ್ರಿಸಲ್ಪಟ್ಟ ರೈತ ಸೈನಿಕ ಕ್ರೀಡೆಯ ಚಿತ್ರಗಳು ಮನಸೂರೆಗೊಳ್ಳುತ್ತವೆ. ಸೈನಿಕ ಶಾಂತಕುಮಾರ್ ಇತರರಿಗೂ ಮಾದರಿಯಾಗಿದ್ದಾರೆ
ಕುಂದೂರು ಮಂಜಪ್ಪ ರೈತ ಹೊಳೆ ಸಿರಿಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT