ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಗಳಿಕೆಯ ಜೊತೆಗೆ ನೆರವು ಮುಖ್ಯ: ಆರ್. ಗಿರೀಶ್

ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ ಆರ್. ಗಿರೀಶ್
Published 10 ಡಿಸೆಂಬರ್ 2023, 5:06 IST
Last Updated 10 ಡಿಸೆಂಬರ್ 2023, 5:06 IST
ಅಕ್ಷರ ಗಾತ್ರ

ದಾವಣಗೆರೆ: ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಭವಿಷ್ಯ ರೂಪಿಸಿಕೊಳ್ಳುವುದು ವಿದ್ಯಾರ್ಥಿಗಳ ಕೈಯಲ್ಲಿದ್ದು, ಬದುಕಿನ ಯಶಸ್ಸು ಕೇವಲ ಹಣ ಗಳಿಕೆಯಲ್ಲಿ ಇಲ್ಲ. ಜನರಿಗೆ ನಾವು ಎಷ್ಟು ನೆರವಾಗುತ್ತೇವೆ ಎಂಬುದು ಮುಖ್ಯವಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ ಆರ್. ಗಿರೀಶ್ ಹೇಳಿದರು.

ನಗರದ ಬಿಐಇಟಿ ಕಾಲೇಜಿನಲ್ಲಿ ಶನಿವಾರ ಹಿರಿಯ ವಿದ್ಯಾರ್ಥಿಗಳ ಅಂತರ ರಾಷ್ಟ್ರೀಯ ಸಮ್ಮಿಲನ ‘ಸವಿನೆನಪು’ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಬದುಕು ಕಟ್ಟಿಕೊಂಡಿರುವ ನಾವೆಲ್ಲ ಸಮಾಜಕ್ಕೆ ಮರಳಿ ಕೊಡುಗೆ ನೀಡಬೇಕು. ಕಾಲೇಜಿನ ಹಳೆಯ ವಿದ್ಯಾರ್ಥಿಗಳು ತಾಂತ್ರಿಕ ವಿಷಯದಲ್ಲಿ ತಜ್ಞರಿದ್ದು ಜತೆಗೆ ಅನುಭವವೂ ಇದೆ. ಇದರ ಲಾಭ ಸಮುದಾಯಕ್ಕೆ ಆಗಬೇಕು. ರಾಜ್ಯದ ಅಭಿವೃದ್ಧಿಗೆ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಒಂದು ಪೋರ್ಟಲ್ ರೂಪಿಸಬೇಕು ಎಂದು ಸಲಹೆ ನೀಡಿದರು.

ಬಿಐಇಟಿ ಕಾಲೇಜಿನಲ್ಲಿ 1988ರಿಂದ 1992 ರವರೆಗೆ ತಾವು ಬಿಐಇಟಿಯಲ್ಲಿ ಓದಿದ ದಿನಗಳನ್ನು ಗಿರೀಶ್ ನೆನಪಿಸಿಕೊಂಡರು. ತಮ್ಮ ಯಶಸ್ಸಿನಲ್ಲಿ ಕಾಲೇಜಿನ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.

‘ಭಾರತದ ಬೆಳವಣಿಗೆಯಾಗಬೇಕಾದರೆ ಮಾಹಿತಿ ತಂತ್ರಜ್ಞಾನದ ಜತೆಗೆ ಮೂಲ ಇಂಜಿನಿಯರಿಂಗ್‌ನ ಕೊಡುಗೆಯೂ ಮಹತ್ವದ್ದಾಗಿದೆ. ಚೀನಾದ ಜತೆಗೆ ಸ್ಪರ್ಧಿಸಬೇಕಾದರೆ, ನಮ್ಮ ದೇಶದ ಜಿಡಿಪಿ ಹೆಚ್ಚಾಗಬೇಕಾದರೆ ಇದು ಬಹಳ ಮುಖ್ಯ ಎಂದು ಹೈದರಾಬಾದ್‌ನ ಅರಬಿಂದೋ ಫಾರ್ಮಾ ಲಿಮಿಟೆಡ್‌ನ ನಿರ್ದೇಶಕ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ಸತಕರ್ಣಿ ಮಕ್ಕಪತಿ ಹೇಳಿದರು.

‘ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಆ್ಯಂಟಿಬಾಡಿಗಳ ಉತ್ಪಾದನೆಯಲ್ಲಿ ಭಾರತ ಹೆಚ್ಚಿನ ಪ್ರಗತಿ ಸಾಧಿಸಬೇಕು. ವಿದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಅಷ್ಟು ಸಾಧನೆ ಆಗಿಲ್ಲ ಎಂದು ಹೇಳಿದರು.

ಬಿಐಇಟಿ ಕಾಲೇಜು ತಮ್ಮ ಬದುಕನ್ನು ರೂಪಿಸುವಲ್ಲಿ ವಹಿಸಿದ ಪಾತ್ರವನ್ನು ವಿವರಿಸಿದ ಅವರು, ಬದುಕಿನಲ್ಲಿ ಉದ್ದೇಶ ಇಟ್ಟುಕೊಂಡು ಬೆಳೆಯಬೇಕು ಎಂದು ಯುವ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

‘ಜೀವನದಲ್ಲಿ ವೈಫಲ್ಯಗಳೇ ಯಶಸ್ಸಿನ ಮೆಟ್ಟಿಲುಗಳಾಗಿವೆ. ವಿದ್ಯಾರ್ಥಿಗಳು ನಾಚಿಕೆ ಸ್ವಭಾವ ಬಿಟ್ಟು ಜನರೊಂದಿಗೆ ಬೆರೆಯುವುದನ್ನು ಕಲಿಯಬೇಕು, ಅದರಿಂದ ಬಹಳಷ್ಟು ವಿಷಯಗಳು ತಿಳಿಯುತ್ತವೆ’ ಅಮೆರಿಕದ ಸ್ಯಾಪ್ ಲಿಮೋಸ್ ಎಂಟರ್‌ಪ್ರೈಸಸ್ ಸಂಸ್ಥೆಯ ನಿರ್ದೇಶಕ ಎನ್.ಎಸ್. ಆನಂದ ಕುಮಾರ್ ತಿಳಿಸಿದರು.

ಕನಸು ದೊಡ್ಡದಿರಬೇಕು, ಬದುಕಿಗೆ ಉದ್ದೇಶವಿರಬೇಕು. ನಕಾರಾತ್ಮಕ ಶಕ್ತಿಗಳಿಂದ ದೂರವಿರಬೇಕು. ಆರೋಗ್ಯದ ಕಡೆಗೆ ಗಮನವಿರಬೇಕು ಎಂದು ಕಿವಿಮಾತು ಹೇಳಿದರು.

ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಪ್ರಾಚಾರ್ಯ ಡಾ. ಎಚ್.ಬಿ. ಅರವಿಂದ್, ಹಳೆಯ ವಿದ್ಯಾರ್ಥಿಗಳಾದ ಬಿ.ವಿ. ಜಗದೀಶ್, ಎಚ್.ಎಂ.ಆರ್. ಸಿದ್ದೇಶ್ ಇದ್ದರು. ಡಾ. ಜಿ.ಪಿ. ದೇಸಾಯಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT