ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಉತ್ಪಾದನೆ ಲಾಭದಾಯಕವಾದರೆ ಬದುಕು ಹಸನು: ಎಲ್.ಎಚ್. ಮಂಜುನಾಥ್

ಯಾಂತ್ರೀಕೃತ ಭತ್ತದ ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಂಜುನಾಥ್
Last Updated 30 ನವೆಂಬರ್ 2020, 5:24 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಮಾಯಕೊಂಡ: ‘ಸಾಂಪ್ರದಾಯಿಕ ಬೇಸಾಯದಿಂದ, ಯಾಂತ್ರೀಕೃತ ಕೃಷಿಗೆ ಬದಲಾಗದಿರುವುದರಿಂದ ರೈತರ ಆದಾಯ ಹೆಚ್ಚುತ್ತಿಲ್ಲ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಲ್.ಎಚ್. ಮಂಜುನಾಥ್ ಪ್ರತಿಪಾದಿಸಿದರು.

ಸಮೀಪದ ದ್ಯಾಮೇನಹಳ್ಳಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭಾನುವಾರ ಹಮ್ಮಿಕೊಂಡ ಯಾಂತ್ರೀಕೃತ ಭತ್ತದ ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮೊದಲ ಹಸಿರು ಕ್ರಾಂತಿಯಿಂದ ದೇಶದಲ್ಲಿ ಕೆಲವರಿಗೆ ಮಾತ್ರ ಅನುಕೂ ಲವಾಗಿತ್ತು. ಈಗ ಅತಿ ಸಣ್ಣ ರೈತನಿಗೂ ಮುಟ್ಟುವ ಎರಡನೇ ಹಸಿರು ಕ್ರಾಂತಿ ನಡೆಸಬೇಕಿದೆ. ದೇಶದಲ್ಲಿ ಶೇ 50ರಷ್ಟು ಕೃಷಿಕರಿದ್ದರೂ ಜಿಡಿಪಿಗೆ ಬರುತ್ತಿರುವ ಕೊಡುಗೆ ಕೇವಲ ಶೇ 15 ಮಾತ್ರ. ರೈತ ಉತ್ಪನ್ನಗಳ ಮಾರಾಟ ವ್ಯವಸ್ಥಿತವಾದರೆ ಸಾಲದು. ಕೃಷಿ ಉತ್ಪಾದನೆಯೂ ಲಾಭದಾಯಕ ವಾಗಬೇಕು’ ಎಂದು ಸಲಹೆ ನೀಡಿದರು.

‘ಯಾಂತ್ರೀಕೃತ ಭತ್ತದ ಕೃಷಿ, ರೈತರ ಸಮಯ ಮತ್ತು ಹಣ ಉಳಿಸಿ ರೋಗಮುಕ್ತ ಭತ್ತ ಬೆಳೆಯಲು ಸಾಧ್ಯವಾಗಿಸಿದೆ. ಯಂತ್ರಶ್ರೀ ಯೋಜನೆ ಯಿಂದ ನಷ್ಟವಾದರೂ ರೈತರ ಹಿತ ಕಾಯಲು ಸಂಸ್ಥೆ ಬದ್ಧವಿದೆ’ ಎಂದರು.

ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್, ‘ಜಿಲ್ಲೆಯಲ್ಲಿ 65 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಹಸಿರೆಲೆ ಗೊಬ್ಬರದ ಬಳಕೆಯಿಂದ ನೆಲದ ಫಲವತ್ತತೆ ಸ್ಥಿರೀಕರಣವಾಗುತ್ತದೆ. ಕಳೆನಾಶಕ ತಯಾರಿಕೆಗೆ 25 ಸಾವಿರ ಟನ್ ಯೂರಿಯಾ ಬಳಕೆಯಾಗುತ್ತದೆ. ಭತ್ತ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಲ್ಲಿ ಸೇರದ ಕಾರಣ ಸಹಾಯಧನ ಸಿಗುವುದಿಲ್ಲ. ವಿಶೇಷ ಪ್ರಸ್ತಾವ ಸಲ್ಲಿಸಿ, ಸಹಾಯಧನ ಒದಗಿಸಲು ಯತ್ನಿಸುವೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಜಾ ಬಸವರಾಜ್ ಮಾತನಾಡಿ, ‘ರೈತರು ಸಂಪೂರ್ಣ ಯಾಂತ್ರೀಕೃತ ಕೃಷಿಯನ್ನೇ ಅವಲಂಬಿಸಬಾರದು. ಕಾರ್ಮಿಕರ ಸ್ಥಿತಿಗತಿ ಗಮನಿಸಬೇಕು. ಕೊರೊನಾ ಬಂದ ಮೇಲೆ ಯುವಕರು ಇಸ್ಪೀಟ್ ದಾಸರಾಗಿದ್ದು, ಹಾಳಾಗಿದ್ದಾರೆ. ಇವರು ಕೃಷಿಯಲ್ಲಿ ತೊಡಗಬೇಕಿದೆ’ ಎಂದು ಹೇಳಿದರು.

ಸೂರ್ಯ ಏಜೆನ್ಸೀಸ್ ಸುರೇಶ್ ಕಮಾರ್ ಮಾತನಾಡಿದರು. ಹಾಲೇಶ್ ರೈತಗೀತೆ ಹಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಮರುಳುಸಿದ್ದಪ್ಪ, ಧರ್ಮಸ್ಥಳ ಯೋಜನೆ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಪ್ರಗತಿಪರ ರೈತರಾದ ಚೇತನ್, ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT