ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ: ಕಾಂಗ್ರೆಸ್‌ಗೆ ನಿರಾಸಕ್ತಿ, ಜೆಡಿಎಸ್‌ಗೆ ಆಸಕ್ತಿ

ಈ ಚುನಾವಣೆಯಲ್ಲಿ ಜಾತ್ಯತೀತ ಜನತಾದಳಕ್ಕೆ ಬೆಂಬಲ ನೀಡಲಿ: ಟಿಕೆಟ್‌ ಆಕಾಂಕ್ಷಿ ಎಚ್‌.ಎಸ್‌. ಶಿವಶಂಕರ್‌
Last Updated 23 ಫೆಬ್ರುವರಿ 2019, 12:59 IST
ಅಕ್ಷರ ಗಾತ್ರ

ದಾವಣಗೆರೆ: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಜಿಲ್ಲೆಯಲ್ಲಿ ಕಾಂಗ್ರೆಸ್‌ ನಿರಾಸಕ್ತಿ ತೋರುತ್ತಿದೆ. ಆದರೆ, ಜೆಡಿಎಸ್‌ಗೆ ಆಸಕ್ತಿಯಿದೆ. ಬಿಜೆಪಿಗೆ ಪ್ರಬಲ ಸ್ಪರ್ಧೆ ಒಡ್ಡಲು ಜೆಡಿಎಸ್‌ ಸಮರ್ಥವಾಗಿದೆ. ಹೀಗಾಗಿ, ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ ಪಕ್ಷವು ಜೆಡಿಎಸ್‌ಗೆ ಬಿಟ್ಟುಕೊಡಬೇಕು ಎಂದು ಹರಿಹರದ ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌ ಆಗ್ರಹಿಸಿದರು.

ಜಾತ್ಯತೀತ ಶಕ್ತಿಗಳು ಒಗ್ಗೂಡಿ ಚುನಾವಣೆ ಎದುರಿಸಿದರೆ ಬಿಜೆಪಿ ವಿರುದ್ಧ ಗೆಲ್ಲಬಹುದು ಎಂಬ ವಾತಾವರಣ ಜಿಲ್ಲೆಯಲ್ಲಿದೆ. ಆದರೆ, ಕಾಂಗ್ರೆಸ್‌ನಲ್ಲಿ ಸ್ಪರ್ಧಿಸುವ ಉತ್ಸಾಹವೇ ಕಂಡುಬರುತ್ತಿಲ್ಲ. ಜಾತಿ ಲೆಕ್ಕಾಚಾರ ಗಮನಿಸಿದರೆ ಬಿಜೆಪಿ–ಜೆಡಿಎಸ್‌ ನಡುವೆ ನೇರ ಪೈಪೋಟಿ ಸೃಷ್ಟಿಯಾಗುವುದು ಕಂಡುಬರುತ್ತದೆ. ಜೆಡಿಎಸ್‌ ಅಭ್ಯರ್ಥಿ ಸ್ಪರ್ಧಿಸಿದರೆ ಅಹಿಂದ ಮತಗಳ ಜತೆಗೆ ವೈಯಕ್ತಿಕ ಮತಗಳ ಸಮೀಕರಣ ಆಗುತ್ತದೆ. ಇದರಿಂದ ಜೆಡಿಎಸ್‌ ಗೆಲ್ಲಲು ಸಾಧ್ಯವಿದೆ ಎಂದು ಟಿಕೆಟ್‌ ಆಕಾಂಕ್ಷಿಯೂ ಆದ ಶಿವಶಂಕರ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ ಸತತವಾಗಿ ಮೂರು ಬಾರಿ ಪರಾಭವಗೊಂಡಿದೆ. 2009ರಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್‌ ಬೆಂಬಲ ನೀಡಿತ್ತು. ಇಷ್ಟಾದರೂ ಕಾಂಗ್ರೆಸ್‌ಗೆ ಗೆಲ್ಲಲು ಆಗಲಿಲ್ಲ. ಆಗ ನಾವು ಬೆಂಬಲ ಕೊಟ್ಟಿದ್ದೆವು. ಈಗ ನಮಗೆ ಕಾಂಗ್ರೆಸ್‌ ಅವಕಾಶ ಮಾಡಿಕೊಡಲಿ’ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ ಮುಖಂಡರಾದ ಶೀಲಾ ಕುಮಾರ್‌, ಎ.ಕೆ. ನಾಗಪ್ಪ, ತಿಮ್ಮಣ್ಣ, ಸಿರಿಗೆರೆ ಪರಮೇಶ್‌, ವೀರೇಶ್‌ ಆಚಾರ್‌, ಜಿಗಳಿ ರಂಗಪ್ಪ, ದುಗ್ಗೇಶ್‌, ಬಸವನಗೌಡ, ಹನೀಫ್‌, ಧನಂಜಯ್ಯ, ಮಹದೇವಣ್ಣ ಅವರೂ ಇದ್ದರು.

24ರಂದು ನಿಯೋಗ

ಮೈತ್ರಿಯನ್ನು ಲೋಕಸಭಾ ಚುನಾವಣೆಯಲ್ಲೂ ಮುಂದುವರಿಸಿರುವ ಕಾಂಗ್ರೆಸ್‌–ಜೆಡಿಎಸ್‌ ನಡುವೆ ಸೀಟುಗಳ ಹಂಚಿಕೆ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಿದೆ. ಕಾಂಗ್ರೆಸ್‌ 12 ಸೀಟುಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕು. ಅದರಲ್ಲಿ ದಾವಣಗೆರೆ ಒಂದು ಕ್ಷೇತ್ರವಾಗಿರಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಜತೆ ಮಾತುಕತೆ ನಡೆಸುವಂತೆ ಒತ್ತಾಯಿಸಲು ಇಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳ ಮುಖಂಡರ, ಪದಾಧಿಕಾರಿಗಳ ನಿಯೋಗ ಫೆ. 24ರಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರನ್ನು ಭೇಟಿ ಮಾಡಲಿದೆ ಎಂದು ಶಿವಶಂಕರ್‌ ತಿಳಿಸಿದರು.

* * *

ಮಾರ್ಚ್‌ 3ರಂದು ಸಮಾವೇಶ

ಜೆಡಿಎಸ್‌ ಜಿಲ್ಲಾ ಘಟಕದ ಕಾರ್ಯಕರ್ತರ ಸಮಾವೇಶವನ್ನು ಮಾರ್ಚ್‌ 3ರಂದು ದಾವಣಗೆರೆಯಲ್ಲಿ ಏರ್ಪಡಿಸಲಾಗಿದೆ. ‌ಈಗಾಗಲೇ ಅಭ್ಯರ್ಥಿಯ ಆಯ್ಕೆ ಬಗ್ಗೆ ಚರ್ಚಿಸಲು ಮುಖಂಡರ ಸಭೆ ನಡೆಸಲಾಗಿದ್ದು, ಕಾರ್ಯಕರ್ತರ ಸಮಾವೇಶ ನಡೆಸಿ, ಚುನಾವಣೆ ಎದುರಿಸುವ ಬಗ್ಗೆ ಸಮಾಲೋಚನೆ ನಡೆಸಲಾಗುವುದು ಎಂದು ಶಿವಶಂಕರ್‌ ತಿಳಿಸಿದರು.

* * *

‘ಸರ್ವಾನುಮತದಿಂದ ಶಿವಶಂಕರ್ ಆಯ್ಕೆ’

ವಿಧಾನ ಪರಿಷತ್‌ ಸದಸ್ಯ, ಶಾಸಕರಾಗಿ ಕೆಲಸ ಮಾಡಿರುವ ಅನುಭವ ಎಚ್‌.ಎಸ್‌. ಶಿವಶಂಕರ್‌ಗೆ ಇದೆ. ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಸಾಮರ್ಥವೂ ಇದೆ. ಹೀಗಾಗಿ, ಜಿಲ್ಲೆಯ ಮುಖಂಡರ ಜತೆ ಸಮಾಲೋಚನೆ ನಡೆಸಿ ಸರ್ವಾನುಮತದಿಂದ ಶಿವಶಂಕರ್‌ ಅವರನ್ನು ಜೆಡಿಎಸ್‌ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಚಿದಾನಂದಪ್ಪ, ಎಸ್‌ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಹೊದಿಗೆರೆ ರಮೇಶ್‌ ತಿಳಿಸಿದರು.

ಜಿಲ್ಲೆಯ ಮುಖಂಡರ ತೀರ್ಮಾನದ ಬಗ್ಗೆ ಪಕ್ಷದ ವರಿಷ್ಠರಿಗೆ ಮಾಹಿತಿ ನೀಡಲಾಗುವುದು. ಅವರ ನಿರ್ಧಾರದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT