ಯೋಜನೆ ನೆಚ್ಚಿಕೊಂಡ ಮಕ್ಕಳು ಅತಂತ್ರ

7
‘ಪ್ರತಿಷ್ಠಿತ ಶಾಲೆಗಳಲ್ಲಿ ಸಫಾಯಿ ಕರ್ಮಚಾರಿ ಮಕ್ಕಳು’ ಯೋಜನೆ ಅನುಷ್ಠಾನಕ್ಕೆ ತಾತ್ಸಾರ

ಯೋಜನೆ ನೆಚ್ಚಿಕೊಂಡ ಮಕ್ಕಳು ಅತಂತ್ರ

Published:
Updated:

ದಾವಣಗೆರೆ: ಸಫಾಯಿ ಕರ್ಮಚಾರಿಗಳನ್ನು ಮುಖ್ಯವಾಹಿನಿಗೆ ತರಬೇಕು ಎಂಬ ಆಶಯದಿಂದ ಜಾರಿಗೆ ಬಂದ ಯೋಜನೆಯೇ ಅವರ ಮಕ್ಕಳನ್ನು ಅತಂತ್ರ ಸ್ಥಿತಿಗೆ ದೂಡಿದೆ.

ಎಚ್‌. ಆಂಜನೇಯ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಸಫಾಯಿ ಕರ್ಮಚಾಯಿಗಳ ಪುನರ್ವಸತಿಗಾಗಿ ‘ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ’ ಸ್ಥಾಪಿಸಲಾಗಿತ್ತು. ನಿಗಮದ ಮೂಲಕ ಹಲವು ಸೌಲಭ್ಯಗಳನ್ನು ಒದಗಿಸಲು ಅರ್ಜಿಗಳನ್ನೂ ಆಹ್ವಾನಿಸಲಾಗಿತ್ತು. ಅವುಗಳಲ್ಲಿ ಒಂದಾದ ‘ಪ್ರತಿಷ್ಠಿತ ಶಾಲೆಗಳಲ್ಲಿ ಸಫಾಯಿ ಕರ್ಮಚಾರಿಗಳ ಮಕ್ಕಳು’ ಯೋಜನೆಯನ್ನು ನೆಚ್ಚಿಕೊಂಡಿದ್ದ ಕರ್ಮಚಾರಿಗಳ ಮಕ್ಕಳು ಸೌಲಭ್ಯದಿಂದ ವಂಚಿತರಾಗಿದ್ದಾರೆ.

‘ಸಮಾಜ ಕಲ್ಯಾಣ ಇಲಾಖೆ ಮೂಲಕ ಪ್ರತಿ ಜಿಲ್ಲೆಯಲ್ಲೂ ಪ್ರತಿಷ್ಠಿತ ಶಾಲೆಗಳನ್ನು ಗುರುತಿಸಿ, ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರವೇಶ ಕಲ್ಪಿಸಿಕೊಡಲಾಗುವುದು. ಈ ಶಾಲೆಗಳಲ್ಲಿ ಪ್ರವೇಶ ಪಡೆಯುವ ಪ್ರತಿ ಮಗುವಿಗೂ ವರ್ಷಕ್ಕೆ ₹ 50,000 ನೀಡಲಾಗುವುದು ಎಂದು ನಿಗಮ ಪ್ರಕಟಣೆ ಹೊರಡಿಸಿತ್ತು. ಅದರಂತೆ ನಗರದ ಎಂಇಎಸ್‌, ಎಸ್‌ಆರ್‌ಪಿ, ಪಿಇಎಸ್‌, ಕೆಎಸ್‌ಎಸ್‌ ಮತ್ತು ಮಾಡರ್ನ್‌ ಶಾಲೆಗಳನ್ನು ಗುರುತಿಸಲಾಗಿತ್ತು. ಆದರೆ, ಮಕ್ಕಳಿಗೆ ದಾಖಲಾತಿ ಕಲ್ಪಿಸಲು ಶಾಲೆಗಳು ತಯಾರಿದ್ದರೂ ನಿಗಮವೇ ಪತ್ರ ವ್ಯವಹಾರ ಮಾಡಿಲ್ಲ’ ಎಂದು  ಸಫಾಯಿ ಕರ್ಮಚಾರಿ ಎಚ್‌. ಹುಲಿಗೇಶಿ ಆರೋಪಿಸಿದರು.

‘ನಿಗಮದ ಯೋಜನೆಯಡಿ ಪ್ರತಿಷ್ಠಿತ ಶಾಲೆಗಳಲ್ಲಿ ಓದಲು ಅವಕಾಶ ಸಿಗಲಿದೆ ಎಂಬ ವಿಶ್ವಾಸದಿಂದ ನಮ್ಮ ಮಕ್ಕಳನ್ನು ಬೇರೆ ಶಾಲೆಗೂ ದಾಖಲು ಮಾಡಲಿಲ್ಲ. ಯೋಜನೆಯಡಿ ಅವಕಾಶ ಸಿಗಲಿದೆ ಎಂಬ ಭರವಸೆಯಿಂದಲೇ ದಿನದೂಡಿದೆವು. ನಿಗಮದ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದರೂ ಅವರು ಸರಿಯಾಗಿ ಸ್ಪಂದಿಸಲಿಲ್ಲ. ಯೋಜನೆ ಬಗ್ಗೆ ಸ್ಪಷ್ಟ ಮಾಹಿತಿಯನ್ನೂ ನೀಡುತ್ತಿಲ್ಲ. ಈಗ ಸಮಯ ಮೀರಿದೆ. ನಮ್ಮ ಮಕ್ಕಳಿಗೆ ಬೇರೆ ಶಾಲೆಗಳಲ್ಲೂ ಪ್ರವೇಶ ಸಿಗದಂತಾಗಿದೆ’ ಎಂದು ಹುಲಿಗೇಶಿ ಅಳಲು ತೋಡಿಕೊಂಡರು.

‘ಜಿಲ್ಲೆಯಲ್ಲಿರುವ ಸಫಾಯಿ ಕರ್ಮಚಾರಿಗಳ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಗುರಿ ನಿಗದಿಪಡಿಸಿ, ಅವರನ್ನು ಶಾಲೆಗಳಿಗೆ ದಾಖಲಿಸಲು ಕ್ರಮ ಕೈಗೊಳ್ಳುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಕ್ರಿಯಾ ಯೋಜನೆಯನ್ನೂ ಸಿದ್ಧಪಡಿಸಿತ್ತು. ಆದರೆ, ಯೋಜನೆಯನ್ನು ಸರಿಯಾಗಿ ಅನುಷ್ಠಾನಗೊಳಿಸದ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧಿಕಾರಿಗಳು ಶೋಷಿತ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ’ ಎನ್ನುವುದು ಅವರ ಆರೋಪ.

‘ರಾಜ್ಯದಲ್ಲಿ ಕನಿಷ್ಠ 400 ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಶಿಕ್ಷಣ ನೀಡುವ ಉದ್ದೇಶ ನಿಗಮಕ್ಕಿತ್ತು. ಜಿಲ್ಲೆಯಲ್ಲಿ 11 ಮಕ್ಕಳನ್ನು ಗುರುತಿಸಲಾಗಿತ್ತು. ಆದರೆ, ಯಾವ ಮಕ್ಕಳಿಗೂ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ ಸಿಕ್ಕಿಲ್ಲ. ಅಧಿಕಾರಿಗಳನ್ನು ಕೇಳಿದರೆ ಈಗ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಕೊಡಿಸುವುದಾಗಿ ಹೇಳುತ್ತಾರೆ. ಹಾಗಾದರೆ, ನಮ್ಮ ಸಮುದಾಯಕ್ಕೆ ವಿಶೇಷ ಒತ್ತು ಕೊಡುವುದಕ್ಕಾಗಿ ಯೋಜನೆಯನ್ನು ಏಕೆ ಸಿದ್ಧಪಡಿಸಬೇಕಿತ್ತು? ಅರ್ಜಿಗಳನ್ನು ಏಕೆ ಆಹ್ವಾನಿಸಬೇಕಿತ್ತು? ಇದು ಸಫಾಯಿ ಕರ್ಮಚಾರಿಗಳಿಗೆ ಮಾಡುತ್ತಿರುವ ಅನ್ಯಾಯ’ ಎಂದು ಹುಲಿಗೇಶಿ ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !