ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಮಳೆ ಕೊರತೆ: ಬಿತ್ತನೆಗೆ ಹಿನ್ನಡೆ

ಮೊಳಕೆಯೊಡೆಯದ ಮೆಕ್ಕೆಜೋಳ: ಮರುಬಿತ್ತನೆಗೆ ಮುಂದಾದ ರೈತರು
Last Updated 28 ಜೂನ್ 2022, 4:33 IST
ಅಕ್ಷರ ಗಾತ್ರ

ಸಂತೇಬೆನ್ನೂರು:ಆರಿದ್ರಾ ಮಳೆ ಅಂತ್ಯಗೊಳ್ಳುತ್ತಾ ಬಂದರೂ ಬಿತ್ತನೆಗೆ ಪೂರಕ ಮಳೆ ಬಿದ್ದಿಲ್ಲ. ಬಿತ್ತನೆಗೆ ಬೀಜ, ಗೊಬ್ಬರ ಸಂಗ್ರಹಿಸಿಕೊಂಡು ರೈತರು ಮಳೆಗಾಗಿ ನಿತ್ಯ ಮುಗಿಲು ನೋಡುತ್ತಿದ್ದಾರೆ.

ಹೋಬಳಿಯಲ್ಲಿಮೋಡ ಕವಿದ ವಾತಾವರಣ, ರಭಸದ ಗಾಳಿ, ಆಗೊಮ್ಮೆ, ಈಗೊಮ್ಮೆ ಬಂದು ಹೋಗುವ ತುಂತುರು ಮಳೆ ಬಿಟ್ಟರೆ ಕೃಷಿ ಚಟುವಟಿಕೆಗೆ ಅನುಕೂಲವಾಗುವ ಮಳೆ ಬೀಳುತ್ತಿಲ್ಲ. ಮಳೆಗಾಗಿ ರೈತರು ವಿಶೇಷ ಪೂಜೆಗೆ ಮೊರೆ ಹೋಗಿದ್ದಾರೆ.

ಹೋಬಳಿ ವ್ಯಾಪ್ತಿಯಲ್ಲಿ ಈಗಾಗಲೇ ಶೇ 40ರಷ್ಟು ಬಿತ್ತನೆ ಮಾಡಲಾಗಿದೆ. ಇನ್ನೂ ಶೇ 60ರಷ್ಟು ಪ್ರದೇಶದಲ್ಲಿ ಬಿತ್ತನೆ ಮಾಡಲು ರೈತರು ಮಳೆಗಾಗಿ ಕಾಯುತ್ತಿದ್ದಾರೆ. 2,000 ಹೆಕ್ಟೇರ್ ಬಿತ್ತನೆ ಆಗಿದೆ. ಇನ್ನೂ 4,000 ಹೆಕ್ಟೇರ್ ಬಿತ್ತನೆ ಆಗಬೇಕಿದೆ. ಮುಂಗಾರು ಆರಂಭಕ್ಕೆ ಮೆಕ್ಕೆಜೋಳವನ್ನು ಕೆಲವೆಡೆ ಬಿತ್ತನೆ ಮಾಡಲಾಗಿದೆ. ಉಳಿದಂತೆ ಎಲ್ಲೆಡೆ ಖಾಲಿ ಜಮೀನುಗಳು ಭಣಗುಡುತ್ತಿವೆ ಎಂದು ಕೃಷಿ ಅಧಿಕಾರಿ ಮೆಹತಬ್ ಅಲಿ ಹೇಳಿದರು.

‘ಸಮರ್ಪಕವಾಗಿ ಮೊಳಕೆ ಒಡೆಯದ ಕಾರಣ ಈಗಾಗಲೇ ಮೂರು ಎಕರೆಯಲ್ಲಿ ಬಿತ್ತನೆ ಮಾಡಿದ್ದನ್ನು ನಾಶ ಮಾಡಿದ್ದೇನೆ. ಪ್ರತಿ ಎಕರೆಗೆ ₹ 10,000 ಖರ್ಚು ಆಗಿದೆ. ಇನ್ನೂ ಮೂರು ಎಕರೆ ನಾಶ ಮಾಡಲು ಚಿಂತಿಸಿ‌ದ್ದೇನೆ. ಕುಳೇನೂರು ಭಾಗದಲ್ಲಿ 50 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದನ್ನು ರೈತರು ನಾಶಮಾಡಿದ್ದಾರೆ’ ಎಂದು ರೈತ ಓಂಕಾರಪ್ಪ ಬೇಸರಿಸಿದರು.

‘ಗ್ರಾಮದ ಸುತ್ತಲಿನ ಪ್ರದೇಶಗಳಲ್ಲಿ ಶೇ 10ರಷ್ಟು ಭಾಗವೂ ಬಿತ್ತನೆ ಆಗಿಲ್ಲ. ಬಿತ್ತನೆ ಮಾಡಿದ ಮೆಕ್ಕೆಜೋಳ ಸೊರಗುತ್ತಿದೆ. ಮಳೆ ಇಲ್ಲದೆ ಸುಳಿಯಲ್ಲಿ ರೋಗಾಣುಗಳು ಕಾಣಿಸುತ್ತಿವೆ. ಆರಿದ್ರಾ ಮಳೆ ಅಂತ್ಯಗೊಳ್ಳುವವರೆಗೆ ಬಿತ್ತನೆಗೆ ಸೂಕ್ತ ಕಾಲ. ಮೆಕ್ಕೆಜೋಳ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೊಳಕೆಯೊಡೆದ ಮೆಕ್ಕೆಜೋಳ ಗರಿ ಬಿಚ್ಚಿ ಬೆಳೆಯುತ್ತಿಲ್ಲ. ಮರು ಬಿತ್ತನೆ ನಡೆಸಲು ರೈತರು ಯೋಜಿಸಿದ್ದಾರೆ’ ಎಂದು ಚಿಕ್ಕಬೆನ್ನೂರು ಗ್ರಾಮದ ರೈತ ಚಂದ್ರು ಹೇಳಿದರು.

ನೀರಾವರಿ ಜಮೀನುಗಳಲ್ಲಿ ಮೆಕ್ಕೆಜೋಳ ಬಿತ್ತನೆ ಆಗಿದೆ. ಉಳಿದೆಡೆ ಮಳೆ ಆಗದ ಕಾರಣ ಬಿತ್ತನೆಯಾಗಿಲ್ಲ. ಸೋಯಾಬೀನ್ ಬಿತ್ತನೆ ಮಾಡಿದ್ದು, ಈಗ ಮಳೆ ಬಂದರೆ ಅನುಕೂಲ ಎನ್ನುತ್ತಾರೆ ಭೀಮನೆರೆಯ ರೈತ ವಿಶ್ವನಾಥ್.

*

ಈಗಾಗಲೇ 6 ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದೆ. ಮಳೆ ಕೊರತೆಯಿಂದ ಕೆಲವು ಬೀಜಗಳು ಮಾತ್ರ ಮೊಳಕೆ ಒಡೆದಿವೆ.
–ಓಂಕಾರಪ್ಪ, ರೈತ, ಸಂತೇಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT