ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಬಸವಣ್ಣನನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಿ’

ವೀರಶೈವ–ಲಿಂಗಾಯತ ಒಳ ಪಂಗಡಗಳನ್ನು ಒಬಿಸಿ ಪಟ್ಟಿಗೆ ಶಿಫಾರಸು ಸೇರಿ 8 ನಿರ್ಣಯಗಳ ಮಂಡನೆ
Published 24 ಡಿಸೆಂಬರ್ 2023, 21:45 IST
Last Updated 24 ಡಿಸೆಂಬರ್ 2023, 21:45 IST
ಅಕ್ಷರ ಗಾತ್ರ

ದಾವಣಗೆರೆ: ‘ರಾಜ್ಯ ಸರ್ಕಾರವು ಬಸವಣ್ಣ ಅವರನ್ನು ರಾಜ್ಯದ ‘ಸಾಂಸ್ಕೃತಿಕ ನಾಯಕ’ ಎಂದು ಅಧಿಕೃತವಾಗಿ ಘೋಷಿಸಬೇಕು. ವೀರಶೈವ–ಲಿಂಗಾಯತ ಸಮುದಾಯದ ಎಲ್ಲಾ ಒಳ ಪಂಗಡಗಳನ್ನೂ ಒಬಿಸಿ ಪಟ್ಟಿಗೆ ಸೇರಿಸಬೇಕು. ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಅವರ ನಿವಾಸದ ಸ್ಥಳದಲ್ಲಿ ಸ್ಮಾರಕ ನಿರ್ಮಿಸಬೇಕು’ ಎಂಬುದು ಸೇರಿದಂತೆ ಒಟ್ಟು 8 ನಿರ್ಣಯಗಳನ್ನು ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನದಲ್ಲಿ ಮಂಡಿಸಲಾಯಿತು.

ನಗರದ ಬಾಪೂಜಿ ಎಂ.ಬಿ.ಎ. ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಮಹಾಧಿವೇಶನದ ಸಮಾರೋಪ ಸಮಾರಂಭಕ್ಕೂ ಮುನ್ನಾ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನಿರ್ಣಯಗಳನ್ನು ಓದಿದರು. ಆಗ ನೆರೆದಿದ್ದವರೆಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಅನುಮೋದಿಸಿದರು. 

‘ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ಸಮುದಾಯದ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ನೀಡಲಾಗುತ್ತಿಲ್ಲ ಎಂಬ ಮಾತು ಕೇಳಿ ಬಂದಿದೆ. ಸಮಾಜದ ಅಧಿಕಾರಿಗಳು ಕಾಯಕವೇ ಕೈಲಾಸ ತತ್ವದಲ್ಲಿ ನಂಬಿಕೆ ಇಟ್ಟವರು. ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಸರ್ಕಾರಕ್ಕೆ ಒಳ್ಳೆ ಹೆಸರು ತಂದಿದ್ದಾರೆ. ಅವರಿಗೆ ಸೂಕ್ತ ಸ್ಥಾನಮಾನ ದೊರಕಿಸಿಕೊಡಲು ಸಚಿವರು ಪ್ರಯತ್ನಿಸಬೇಕು’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಸಲಹೆ ನೀಡಿದರು. 

‘ನಾವೆಲ್ಲರೂ ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟಾಗಿ ಮುಂದೆ ಸಾಗಬೇಕು ಎಂಬ ಉದ್ದೇಶದಿಂದ ಶಾಮನೂರು ಶಿವಶಂಕರಪ್ಪನವರು ಈ ಪ್ರಯತ್ನ ಮಾಡಿದ್ದಾರೆ. ನಮ್ಮದು ಶಕ್ತಿಯುತ ಸಮಾಜ. ನಮ್ಮ ನೆಲೆ ಗಟ್ಟಿಯಾಗಿದೆ. ನಾವು ಇತರ ಸಮುದಾಯಗಳನ್ನೂ ಜೊತೆಗೆ ಕರೆದೊಯ್ಯುವ ಮೂಲಕ ಇನ್ನಷ್ಟು ಪ್ರಬಲವಾಗಬೇಕು. ವೀರಶೈವ– ಲಿಂಗಾಯತರನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕೆಂಬ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ’ ಎಂದರು.

‘ಸಚಿವ ಸ್ಥಾನದಲ್ಲಿ ಇದ್ದುಕೊಂಡು ಮಹಾ ಅಧಿವೇಶನದ ನಿರ್ಣಯಗಳನ್ನು ಬೆಂಬಲಿಸುತ್ತೇನೆ. ಸಮಾಜದ ಎಲ್ಲಾ ಒಳ ಪಂಗಡಗಳೂ ಒಗ್ಗೂಡುವ ಕಾಲ ಸನ್ನಿಹಿತವಾಗಿದೆ. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ನಾವೆಲ್ಲ ಒಂದಾಗಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಹೇಳಿದರು.

‘ಸಮುದಾಯದ ಒಳ ಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡುವಂತೆ ರಾಜ್ಯ ಸರ್ಕಾರ ಕೂಡಲೇ ಶಿಫಾರಸು ಮಾಡಬೇಕು. ಇದನ್ನು ಅಂಗೀಕರಿಸುವಂತೆ ಯಡಿಯೂರಪ್ಪನವರು ಕೇಂದ್ರದ ಮೇಲೆ ಒತ್ತಡ ಹೇರಬೇಕು’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.  

ಮಹಾ ಅಧಿವೇಶನದ ನಿರ್ಣಯಗಳು

1. ದೇಶದ ಅಖಂಡತೆ ಏಕತೆ ಸಮಗ್ರತೆ ಭದ್ರತೆಯ ರಕ್ಷಣೆಗೆ ‘ಮಹಾಸಭೆ’ ಹಾಗೂ ಸಮುದಾಯ ಕಟಿಬದ್ಧವಾಗಿದೆ. ಇದಕ್ಕೆ ಸಂಬಂಧಿಸಿದ ಹೋರಾಟ ಪ್ರಯತ್ನಗಳಿಗೆ ಪ್ರೋತ್ಸಾಹ ಬೆಂಬಲ ನೀಡುತ್ತದೆ.

2. ಜಗಜ್ಯೋತಿ ಬಸವೇಶ್ವರರ ಚಿಂತನೆ ಅನುಭಾವ ಸಾರ್ವಕಾಲಿಕವಾಗಿದ್ದು ಅವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಬೇಕು.

3. ವೀರಶೈವ -ಲಿಂಗಾಯತ ಸಮುದಾಯದಲ್ಲಿ ಲಕ್ಷಾಂತರ ಕಡು ಬಡವರಿದ್ದಾರೆ. ಹೀಗಾಗಿ ಎಲ್ಲಾ ಒಳಪಂಗಡಗಳನ್ನೂ ಒಬಿಸಿ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಕೇಂದ್ರ ಅದನ್ನು ಅಂಗೀಕರಿಸಬೇಕು.

4. ಜಾತಿ ಗಣತಿಯು 8 ವರ್ಷಗಳಷ್ಟು ಹಳೆಯದ್ದು. ಅಧಿಕೃತವಾಗಿ ಅಂಗೀಕಾರವಾಗುವ ಮೊದಲೇ ಅದರಲ್ಲಿನ ಅಂಶಗಳು ಸೋರಿಕೆಯಾಗಿವೆ. ಕಾಂತರಾಜು ಆಯೋಗದ ವರದಿಯನ್ನು ಸರ್ಕಾರ ಒಪ್ಪಿಕೊಳ್ಳದೆ ವಾಸ್ತವಿಕತೆ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಯ ಆಧಾರದ ಮೇಲೆ ಹೊಸದಾಗಿ ಜಾತಿ ಜನಗಣತಿ ಕೈಗೊಳ್ಳಬೇಕು.

5. ಸರ್ಕಾರ ಮುಂದಿನ ದಿನಗಳಲ್ಲಿ ನಡೆಸುವ ಜನ ಗಣತಿಯ ವೇಳೆ ಸಮಾಜದವರು ಧರ್ಮದ ಕಾಲಂನಲ್ಲಿ ವೀರಶೈವ–ಲಿಂಗಾಯತ ಎಂದೇ ಬರೆಸಬೇಕು.

6. ರೈತರ ಹಿತದೃಷ್ಟಿಯಿಂದ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು.

7. ಎಸ್.ನಿಜಲಿಂಗಪ್ಪನವರು ವಾಸವಿದ್ದ ಚಿತ್ರದುರ್ಗದ ಅವರ ನಿವಾಸವನ್ನು ಸರ್ಕಾರ ಖರೀದಿಸಿ ಶಾಶ್ವತ ಸ್ಮಾರಕ ನಿರ್ಮಿಸಬೇಕು. ಅವರ ಪುಣ್ಯ ಸ್ಮರಣೆಯ ದಿನವಾದ ಆಗಸ್ಟ್ 8 2024ರೊಳಗೆ ಈ ಕಾರ್ಯ ಪೂರ್ಣಗೊಳಿಸಬೇಕು.

8. ಸಮ್ಮೇಳನಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಮರ್ಪಣೆ.

ದಾವಣಗೆರೆಯಲ್ಲಿ ನಡೆದ ಮಹಾ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ಮಾತನಾಡಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯಲ್ಲಿ ನಡೆದ ಮಹಾ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ಮಾತನಾಡಿದರು –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT