ಧರ್ಮ ಒಡೆಯಲು ಬಿಡೆವು: ಧರ್ಮ ಸಮಾವೇಶದ ಸಮಾರೋಪದಲ್ಲಿ ಒಕ್ಕೊರಲ ಪ್ರತಿಪಾದನೆ

7

ಧರ್ಮ ಒಡೆಯಲು ಬಿಡೆವು: ಧರ್ಮ ಸಮಾವೇಶದ ಸಮಾರೋಪದಲ್ಲಿ ಒಕ್ಕೊರಲ ಪ್ರತಿಪಾದನೆ

Published:
Updated:

ದಾವಣಗೆರೆ: ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳಲಿ. ಆದರೆ, ಜನರ ಮನಸ್ಸಿನಲ್ಲಿ ವೀರಶೈವ–ಲಿಂಗಾಯತ ಎರಡೂ ಒಂದೇ ಭಾವನೆ ಇದೆ. ಹಾಗಾಗಿ, ಧರ್ಮ ಒಡೆಯಲು ಯಾರೇ ಮುಂದಾದರೂ ಪ್ರಯತ್ನ ಸಫಲವಾಗುವುದಿಲ್ಲ ಎಂದು ರಂಭಾಪುರಿ ಸ್ವಾಮೀಜಿ ಅವರ ಆಷಾಢ ಮಾಸದ ಇಷ್ಟಲಿಂಗ ಪೂಜೆ ಹಾಗೂ ಜನಜಾಗೃತಿ ಧರ್ಮ ಸಮಾವೇಶದ ಸಮಾರೋಪದಲ್ಲಿ ಪ್ರತಿಪಾದಿಸಲಾಯಿತು.

ನಗರದ ರೇಣುಕ ಮಂದಿರದಲ್ಲಿ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದ ಸ್ವಾಮೀಜಿಗಳು, ಜನಪ್ರತಿನಿಧಿಗಳು ಹಾಗೂ ಅತಿಥಿಗಳು ಕೂಡ ಇದನ್ನೇ ಪುನರ್‌ ಉಚ್ಚರಿಸಿದರು.

ರಂಭಾಪುರಿ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ವೀರಶೈವ ಧರ್ಮದ ಇತಿಹಾಸ ಮತ್ತು ಪರಂಪರೆ ಅಪೂರ್ವವಾದುದು. ಧರ್ಮ, ಜಾತಿ ಹೆಸರಿನಲ್ಲಿ ವೀರಶೈವ ಧರ್ಮವನ್ನು ಒಡೆಯುವ ಕೆಲಸವನ್ನು ಯಾರೂ ಮಾಡಬಾರದು’ ಎಂದು ಹೇಳಿದರು.

ಕಳೆದ ಸರ್ಕಾರದಲ್ಲಿ ಧರ್ಮ ವಿಭಜನೆಯ ಪ್ರಯತ್ನಗಳು ನಡೆದವು. ಆದರೆ, ಜನರು ಇದನ್ನು ಪ್ರಬಲವಾಗಿ ವಿರೋಧಿಸಿದ್ದರಿಂದ ಅಂತಹ ಪ್ರಯತ್ನಗಳಿಗೆ ಯಶಸ್ಸು ಸಿಗಲಿಲ್ಲ ಎಂದರು.

ಧರ್ಮ ಕೆಡಿಸುವುದು ಸುಲಭ. ಆದರೆ, ಧರ್ಮ ಕಟ್ಟಿ ಬೆಳೆಸುವುದು ಬಲು ಕಷ್ಟ ಎಂದು ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ದಾವಣಗೆರೆ–ಹರಿಹರ ಕೋ ಆಫ್ ಬ್ಯಾಂಕ್ ಅಧ್ಯಕ್ಷ ಎನ್‌.ಎ. ಮುರುಗೇಶ್, ‘ವೀರಶೈವ ಧರ್ಮ ಎಲ್ಲ ಧರ್ಮಗಳನ್ನು ನೀರಿನಂತೆ ಒಳಗೊಳ್ಳುತ್ತದೆ. ಈ ಧರ್ಮವನ್ನು ಇನ್ನಷ್ಟು ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದರು.

ಬಿಜೆಪಿ ಮುಖಂಡ ಎಚ್‌.ಎಸ್‌. ನಾಗರಾಜ್, ‌‘ಜನರ ಭಾವನೆಗಳಿಗೆ ಬೆಲೆ ಕೊಟ್ಟಾಗ ಮಾತ್ರ ಯಾವುದೇ ಸರ್ಕಾರಕ್ಕೆ ಭವಿಷ್ಯ ಇದೆ. ಧರ್ಮವನ್ನು ಲಾಭಕ್ಕಾಗಿ ಉಪಯೋಗಿಸಿಕೊಳ್ಳುವುದು ಸಲ್ಲದು’ ಎಂದು ಹೇಳಿದರು.

ಧಾರ್ಮಿಕ ಕಾರ್ಯಕ್ರಮಗಳು ಕೇವಲ ಹಿರಿಯರಿಗೆ ಎಂಬ ಭಾವನೆ ಸಮಾಜದಲ್ಲಿ ಮೂಡಿದೆ. ಆದರೆ, ಧರ್ಮ ಜಾಗೃತಿ ಕಾರ್ಯಕ್ರಮವನ್ನು ಇಂದಿನ ಯುವಕರಿಗೆ ಅಗತ್ಯವಾಗಿದೆ. ಅವರಿಗೆ ಧರ್ಮ, ಗುರು–ಹಿರಿಯರ ಬಗ್ಗೆ ಅರಿವು ಮೂಡಿಸುವ ಪ್ರಯತ್ನಗಳು ಹೆಚ್ಚು ನಡೆಯಬೇಕು ಎಂದು ಸಲಹೆ ನೀಡಿದರು.

ರಂಭಾಪುರಿ ಮಠದ ಆರ್ಶಿವಾದದಿಂದ ಭದ್ರಾ ಅಣೆಕಟ್ಟು ತುಂಬುತ್ತಿದೆ. ಇದಕ್ಕಾಗಿ ದಾವಣಗೆರೆ ಜನತೆ ಗುರುಗಳಿಗೆ ಕೃತಜ್ಞತರಾಗಿರಬೇಕು ಎಂದು ಹೇಳಿದರು.

ವಿನಾಯಕ ರೈಸ್‌ ಮಿಲ್‌ ಮಾಲೀಕ ಜೆ. ವೇದಮೂರ್ತ್ಯಪ್ಪ ಅವರಿಗೆ ಜನಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಜಿ. ಶಿವಯೋಗಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್‌.ಜಿ. ಪುಟ್ಟಸ್ವಾಮಿ, ಎನ್‌.ಎಂ. ಆಂಜನೇಯ, ಮಾಜಿ ಶಾಸಕ ಎಚ್‌.ಎಂ. ಚಂದ್ರಶೇಖರಪ್ಪ ಉಪಸ್ಥಿತರಿದ್ದರು. ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಿಗಿ ರಾಧೇಶ್‌ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !