ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ ಕ್ಷೇತ್ರದ ಅಭ್ಯರ್ಥಿ ಗುಟ್ಟು ಬಿಟ್ಟುಕೊಡದ ಬಿಜೆಪಿ, ಕಾಂಗ್ರೆಸ್‌

Published 17 ಜನವರಿ 2024, 21:09 IST
Last Updated 17 ಜನವರಿ 2024, 21:09 IST
ಅಕ್ಷರ ಗಾತ್ರ

ದಾವಣಗೆರೆ: ಲೋಕಸಭೆ ಚುನಾವಣೆಗೆ ನಾಲ್ಕು ತಿಂಗಳಷ್ಟೇ ಉಳಿದಿದ್ದು, ದಾವಣಗೆರೆ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾರು ಕಣಕ್ಕಿಳಿಯಬಹುದು ಎಂಬ ಚರ್ಚೆಗಳು ಮತದಾರರ ವಲಯದಲ್ಲಿ ಆರಂಭವಾಗಿವೆ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಅಭ್ಯರ್ಥಿ ಕುರಿತು ಗುಟ್ಟು ಬಿಟ್ಟುಕೊಡುತ್ತಿಲ್ಲ.

ಸತತ ನಾಲ್ಕು ಬಾರಿ ಆಯ್ಕೆಯಾಗಿರುವ ಹಾಲಿ ಸಂಸದ, ಬಿಜೆಪಿಯ ಜಿ.ಎಂ. ಸಿದ್ದೇಶ್ವರ ತಮಗೇ ಮತ್ತೆ ಸ್ಪರ್ಧೆಗೆ ಅವಕಾಶ ದೊರೆಯಬಹುದು ಎಂಬ ಸಂಪೂರ್ಣ ವಿಶ್ವಾಸದಲ್ಲಿದ್ದಾರೆ. ‘70 ವರ್ಷ ದಾಟಿರುವ ಹಿನ್ನೆಲೆಯಲ್ಲಿ ಒಂದೊಮ್ಮೆ ನನ್ನನ್ನು ಪರಿಗಣಿಸದಿದ್ದರೆ, ಪುತ್ರ ಅನಿತ್‌ಕುಮಾರ್‌ ಅಥವಾ ಸೋದರ ಜಿ.ಎಂ. ಲಿಂಗರಾಜ್‌ ಅವರಿಗಾದರೂ ಟಿಕೆಟ್‌ ಕೊಡಿ’ ಎಂಬ ಬೇಡಿಕೆ ಇರಿಸಿದ್ದಾರೆ ಎಂದು ತಿಳಿದುಬಂದಿದೆ.

‌ಸಮೀಕ್ಷೆ ಆಧರಿಸಿ ನಿರ್ಧರಿಸಿ:

‘ಲೋಕಸಭೆ ಚುನಾವಣೆಯ ಟಿಕೆಟ್‌ ಹಂಚಿಕೆಗೆ ಮುನ್ನ ಕ್ಷೇತ್ರದಾದ್ಯಂತ ಸಮೀಕ್ಷೆ ನಡೆಸಿ, ಯಾರಿಗೆ ಮತದಾರ ಒಲಿಯಬಹುದು ಎಂಬುದನ್ನು ತಿಳಿದು ಟಿಕೆಟ್‌ ಹಂಚಿಕೆ ಮಾಡಿ’ ಎಂದು ಪ್ರಮುಖ ಆಕಾಂಕ್ಷಿ, ವಿಧಾನಸಭೆ ಚುನಾವಣೆಯಲ್ಲಿ ಹೊನ್ನಾಳಿ ಕ್ಷೇತ್ರದಿಂದ ಪರಾಜಿತರಾಗಿರುವ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಬಹಿರಂಗವಾಗಿ ಮನವಿ ಮಾಡಿದ್ದಾರೆ.

‘ಜಿ.ಎಂ. ಸಿದ್ದೇಶ್ವರ ಅವರ ಬದಲಿಗೆ ನನ್ನನ್ನೇ ಪ‍ರಿಗಣಿಸಿ’ ಎಂದೂ ವಿಧಾನಸಭೆ ಚುನಾವಣೆಯ ಸೋಲಿನ ಕೆಲವೇ ದಿನಗಳ ನಂತರ ಬೇಡಿಕೆ ಸಲ್ಲಿಸುತ್ತಲೇ ಬಂದಿರುವ ರೇಣುಕಾಚಾರ್ಯ, ಇತ್ತೀಚೆಗೆ ದಾವಣಗೆರೆಯಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರು ಟಿಕೆಟ್‌ ಕೋರಿದ್ದಕ್ಕೆ ತಮ್ಮ ಅಸಮಾಧಾನ ಹೊರಹಾಕಿದ್ದ ಸಿದ್ದೇಶ್ವರ, ‘ಅವರು ಇಲ್ಲಿಗೆ ಬರಲಿ. ನಾನು ಹೊನ್ನಾಳಿಗೆ ಹೋಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ’ ಎಂದು ಸವಾಲು ಎಸೆದಿದ್ದರು.

ಜಗಳೂರಿನ ಮಾಜಿ ಶಾಸಕ ಗುರುಸಿದ್ದನಗೌಡ ಅವರ ಪತ್ರ ಡಾ.ಟಿ.ಜಿ. ರವಿಕುಮಾರ್‌, ಪಕ್ಷದ ಮುಖಂಡ ಕೆ.ಜಿ. ಕೊಟ್ರೇಶ್‌ ಮತ್ತಿತರರು ಬಿಜೆಪಿಯ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.

‘ಇಂಥವರಿಗೇ ಬಿಜೆಪಿ ಟಿಕೆಟ್‌ ಸಿಗಲಿದೆ’ ಎಂಬುದನ್ನು ಖಚಿತವಾಗಿ ಹೇಳಲಾಗದು ಎಂಬುದಕ್ಕೆ ಮೂರು ದಿನಗಳ ಹಿಂದಷ್ಟೇ ಪ್ರಕಟವಾದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ನೇಮಕದಿಂದ ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಗಳಲ್ಲಿ ನಿರಾಸೆ ಮೂಡಿಸಿತ್ತು.‌

2019ರಲ್ಲಿ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದ ಸಂಘ ಪರಿವಾರ ಮೂಲದ ಎನ್‌.ರಾಜಶೇಖರ್‌ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಿರುವುದು ಲೋಕಸಭೆ ಚುನಾವಣೆಯಯ ಟಿಕೆಟ್‌ ಆಕಾಂಕ್ಷಿಗಳಲ್ಲೂ ಆಸೆ ಮೂಡಿಸಿದೆ. ‘ಪಕ್ಷ ಯಾರನ್ನಾದರೂ ಪರಿಗಣಿಸಬಹುದು’ ಎಂಬುದೇ ಸ್ಫರ್ಧಾಕಾಂಕ್ಷೆ ಚಿಗುರೊಡೆಯಲು ಪ್ರೇರಣೆ ಆಗಿದೆ.

ಕಾಂಗ್ರೆಸ್‌ ಟಿಕೆಟ್‌ಗೂ ಸ್ಪರ್ಧೆ:

ಕಾಂಗ್ರೆಸ್‌ ವಲಯದಲ್ಲೂ ಟಿಕೆಟ್‌ಗೆ ತೀವ್ರ ಬೇಡಿಕೆ ಇದ್ದು, ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ತಮ್ಮ ಕುಟುಂಬ ಸದಸ್ಯರಿಗೇ ಟಿಕೆಟ್‌ ಗಿಟ್ಟಿಸಿಕೊಳ್ಳಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಈ ಬಾರಿಯೂ ತಮಗೆ ಅವಕಾಶ ದೊರೆಯಬಹುದು ಎಂಬ ಆಶಾಭಾವ ಹೊಂದಿದ್ದಾರಾದರೂ, ಈವರೆಗೆ ಸ್ಫರ್ಧಾಕಾಂಕ್ಷೆಯ ಕುರಿತು ಬಹಿರಂಗ ಹೇಳಿಕೆ ನೀಡಿಲ್ಲ.

ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್ ಅವರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಶಾಮನೂರು ಶಿವಶಂಕರಪ್ಪ ಮನಸು ಮಾಡಿದ್ದಾರೆ. ಅಂತೆಯೇ ಡಾ.ಪ್ರಭಾ ಅವರು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರೊಂದಿಗೆ ಸಂಪರ್ಕದೊಂದಿಗೆ ಇದ್ದಾರೆ. ಸಭೆ– ಸಮಾರಂಭಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.

‘ನನ್ನ ಸ್ಪರ್ಧೆಯ ವಿಚಾರವಾಗಿ ಮನೆಯಲ್ಲಿ ಚರ್ಚೆ ನಡೆದಿಲ್ಲ. ಪತಿ ಸಚಿವರಾಗಿದ್ದು, ಮಾವ  ಶಾಸಕರಾಗಿರುವುದರಿಂದ ಸಾಮಾಜಿಕ ಕೆಲಸ ನಿರ್ವಹಿಸಬೇಕಿದೆ. ಆರೋಗ್ಯ ಸೇವೆ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇನೆಯೇ ಹೊರತು ಚುನಾವಣೆ ದೃಷ್ಟಿಯಿಂದಲ್ಲ. ಚುನಾವಣೆ ಪ್ರತಿ ಐದು ವರ್ಷಕ್ಕೊಮ್ಮೆ ಬರುತ್ತದೆ. ನಮ್ಮ ಎಸ್.ಎಸ್. ಕೇರ್ ಟ್ರಸ್ಟ್‌ನ ಸೇವೆ ನಿರಂತರ’ ಎಂದು ಡಾ.ಪ್ರಭಾ ಹೇಳಿದ್ದು, ಅವರ ಸ್ಪರ್ಧೆಯ ಬಗ್ಗೆ ಸ್ಪಷ್ಟತೆ ಮೂಡಿಲ್ಲ.

ವಿನಯ ಪಾದಯಾತ್ರೆ:

ಇನ್ನೊಂದೆಡೆ ಇನ್‌ಸೈಟ್ಸ್‌ ಐಎಎಸ್‌ ಸಂಸ್ಥೆಯ ಸಂಸ್ಥಾಪಕ, ದಾವಣಗೆರೆ ತಾಲ್ಲೂಖಿನ ಕಕ್ಕರಗೊಳ್ಳ ಮೂಲಕ ಬಿ.ಜಿ. ವಿನಯಕುಮಾರ್‌ ಕಾಂಗ್ರೆಸ್‌ ಟಿಕೆಟ್‌ ಕೋರಿದ್ದು, ಕಳೆದ ಒಂದು ವರ್ಷದಿಂದ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಲೋಕಸಭೆ ಕ್ಷೇತ್ರದಾದ್ಯಂತ ಒಂದು ತಿಂಗಳಿಂದ ‘ವಿನಯ ನಡಿಗೆ’ ಹೆಸರಿನ ಪಾದಯಾತ್ರೆಯನ್ನೂ ಆರಂಭಿಸಿ ಜನರನ್ನು ಭೇಟಿ ಮಾಡುತ್ತಿದ್ದಾರೆ. ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲ ಇರುವುದರಿಂದ ಟಿಕೆಟ್‌ ದೊರೆಯಲಿದೆ ಎಂಬ ಸಂಪೂರ್ಣ ವಿಶ್ವಾಸವೂ ವಿನಯಕುಮಾರ್‌ ಅವರಲ್ಲಿದೆ’ ಎಂಬ ಮಾತು ಕಾಂಗ್ರೆಸ್‌ ವಲಯದಲ್ಲಿ ಕೇಳಿಬರುತ್ತಿದೆ.

ವಿನಯಕುಮಾರ್‌ ಅವರ ಸಂಬಂಧಿ ಶಿವಕುಮಾರ್‌ ಒಡೆಯರ್‌ ಸಹ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಇತರ ಕೆಲವರೂ ತಮ್ಮ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

ಡಾ.ಪ್ರಭಾ ಮಲ್ಲಿಕಾರ್ಜುನ್
ಡಾ.ಪ್ರಭಾ ಮಲ್ಲಿಕಾರ್ಜುನ್
ಎಂ.ಪಿ. ರೇಣುಕಾಚಾರ್ಯ
ಎಂ.ಪಿ. ರೇಣುಕಾಚಾರ್ಯ
ವಿನಯ್‌ ಕುಮಾರ್‌ ಜಿ.ಬಿ.
ವಿನಯ್‌ ಕುಮಾರ್‌ ಜಿ.ಬಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT