ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಮೋದಿ ಭೇಟಿ ಹಿನ್ನೆಲೆ ಬಿಗಿ ಭದ್ರತೆ; ಸಾರ್ವಜನಿಕರಿಗೆ ತಟ್ಟಿದ ಬಿಸಿ

ಹೆಜ್ಜೆ ಹೆಜ್ಜೆಗೂ ಬ್ಯಾರಿಕೇಡ್‌ಗಳ ಅಳವಡಿಕೆ; ಕಾಂಗ್ರೆಸ್‌, ಎನ್‌ಎಸ್‌ಯುಐ ಕಾರ್ಯಕರ್ತರ ಪ್ರತಿಭಟನೆ
Published 29 ಏಪ್ರಿಲ್ 2024, 4:49 IST
Last Updated 29 ಏಪ್ರಿಲ್ 2024, 4:49 IST
ಅಕ್ಷರ ಗಾತ್ರ

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಒದಗಿಸುವ ನೆಪದಲ್ಲಿ ಸಾರ್ವಜನಿಕರಿಗೆ ಸಾಕಷ್ಟು ಅನಾನುಕೂಲ ಉಂಟುಮಾಡಿದರು.

ಪ್ರಧಾನಿ ಮೋದಿ ಸಾಗುವ ಮಾರ್ಗ ಮಾತ್ರವಲ್ಲದೇ ವೇದಿಕೆ ಕಾರ್ಯಕ್ರಮ ನಡೆದ ಹೈಸ್ಕೂಲ್‌ ಮೈದಾನದ ಸುತ್ತಮುತ್ತಲೂ ಹೆಜ್ಜೆ ಹೆಜ್ಜೆಗೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಸಾರ್ವಜನಿಕರು ಯಾವ ಮಾರ್ಗದಲ್ಲಿ ಸಾಗಬೇಕು ಎಂಬುದು ತಿಳಿಯದೇ ಗೊಂದಲಕ್ಕೀಡಾದ ವಾತಾವರಣ ಸೃಷ್ಟಿಯಾಗಿತ್ತು.

ಪಿ.ಬಿ.ರಸ್ತೆಗೆ ಬ್ಯಾರಿಕೇಡ್‌ ಅಡ್ಡ ಹಾಕಿ ವಾಹನ ಸಂಚಾರವನ್ನು ಬಂದ್‌ ಮಾಡಿದ್ದರಿಂದ ವಾಹನ ಸವಾರರು, ಪ್ರಯಾಣಿಕರು ಸುಡುಬಿಸಿಲಿನಲ್ಲಿ ಸಾಕಷ್ಟು ಸಮಸ್ಯೆ ಅನುಭವಿಸಿದರು. ಸದಾ ವಾಹನಗಳಿಂದ ತುಂಬಿರುತ್ತಿದ್ದ ಪಿ.ಬಿ.ರಸ್ತೆಯು ವಾಹನಗಳ ಸಂಚಾರವಿಲ್ಲದೇ, ಬಿಕೋ ಎನ್ನುತ್ತಿತ್ತು.

ಪಿ.ಬಿ.ರಸ್ತೆ, ರಾಮ್‌ ಆ್ಯಂಡ್‌ ಕೋ ಸರ್ಕಲ್‌, ಎ.ವಿ.ಕೆ. ರಸ್ತೆ, ಜಯದೇವ ಸರ್ಕಲ್‌, ಪ್ರವಾಸಿ ಮಂದಿರ ರಸ್ತೆಗಳಲ್ಲಿ ಸಂಚರಿಸುವುದೇ  ದುಸ್ತರವಾಗಿತ್ತು. ಈ ಮಾರ್ಗಗಳಲ್ಲಿನ ಎಲ್ಲ ಅಂಗಡಿಗಳನ್ನೂ ಬಂದ್‌ ಮಾಡಲಾಗಿತ್ತು. ಕಾರ್ಯಕ್ರಮ ಸ್ಥಳದ ಪಕ್ಕದಲ್ಲೇ ಇದ್ದ ಗ್ರಂಥಾಲಯಕ್ಕೂ ಬೀಗ ಹಾಕಲಾಗಿತ್ತು. ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ ಈ ಗ್ರಂಥಾಲಯ ಭಾನುವಾರವೂ ತೆರೆದಿರುತ್ತದೆ. ಮೋದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗ್ರಂಥಾಲಯವನ್ನು ಮುಚ್ಚಲಾಗಿತ್ತು. ಇದರಿಂದ ವಿದ್ಯಾರ್ಥಿಗಳಿಗೂ ಸಮಸ್ಯೆಯಾಯಿತು.

ಎಲ್ಲಿಯೂ ಸಂಚರಿಸದ ಸ್ಥಿತಿ:

ಮೋದಿ ಭೇಟಿ ಹಿನ್ನೆಲೆಯಲ್ಲಿ ಪ್ರಮುಖ ವೃತ್ತಗಳು, ಮಾರ್ಗಗಳಲ್ಲಿ ಸಂಚರಿಸುವುದೇ ಸಾಹಸವಾಗಿತ್ತು. ಎಲ್ಲೆಂದರಲ್ಲಿ ರಸ್ತೆಗಳಲ್ಲಿ ನಿಂತಿದ್ದ ಪೊಲೀಸರು, ಅರೆ ಸೇನಾ ಪಡೆ ಯೋಧರು ಬೇರೆ ಮಾರ್ಗದಲ್ಲಿ ತೆರಳಿ ಎಂದು ಮಾರ್ಗ ಬದಲಾವಣೆಗೆ ಸೂಚಿಸುತ್ತಿದ್ದರು. ವೇದಿಕೆ ಕಾರ್ಯಕ್ರಮದ ಬಳಿ ವರದಿಗಾರಿಕೆಗೆ ತೆರಳಲು ಮಾಧ್ಯಮದವರೂ ಪರದಾಡಿದ ದೃಶ್ಯ ಕಂಡುಬಂತು. ಹೆಲಿಪ್ಯಾಡ್‌ನಿಂದ ಕಾರ್ಯಕ್ರಮದ ವೇದಿಕೆಯವರೆಗೆ ಪ್ರಧಾನಿ ಮೋದಿ ಅವರು ಸಾಗಿದ ರಸ್ತೆಗಳಲ್ಲಿನ ಎಲ್ಲ ಅಂಗಡಿಗಳನ್ನು ಮುಚ್ಚಲಾಗಿತ್ತು.

‘ನಗರದ ಮಧ್ಯ ಭಾಗದಲ್ಲಿ ಇಷ್ಟು ದೊಡ್ಡ ಕಾರ್ಯಕ್ರಮ ಮಾಡಿದ್ದರಿಂದ ನಮಗೆ ಮಾತ್ರವಲ್ಲದೇ ಸಾರ್ವಜನಿಕರಿಗೂ ಸಮಸ್ಯೆಯಾಗುತ್ತಿದೆ’ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದರು. 

‘ನಗರದಲ್ಲಿ ವಾಹನ ದಟ್ಟಣೆ ಸೇರಿದಂತೆ ಹಲವು ಸಮಸ್ಯೆಗಳನ್ನು ತಡೆಯುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಸಾಧ್ಯವಾದಷ್ಟು ನಗರದ ಹೊರಗಡೆ ಆಯೋಜಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದರು.

ದಾವಣಗೆರೆಯ ಎ.ವಿ.ಕೆ. ರಸ್ತೆಯಲ್ಲಿನ ಅಕ್ಕಮಹಾದೇವಿ ಕಲ್ಯಾಣ ಮಂಟಪಕ್ಕೆ ಪೊಲೀಸರು ಬೀಗ ಹಾಕಿದ್ದರಿಂದ ಮದುವೆಗೆ ಬಂದಿದ್ದವರು ಒಳಗಡೆಯೇ ಕಾಯಬೇಕಾಯಿತು
ದಾವಣಗೆರೆಯ ಎ.ವಿ.ಕೆ. ರಸ್ತೆಯಲ್ಲಿನ ಅಕ್ಕಮಹಾದೇವಿ ಕಲ್ಯಾಣ ಮಂಟಪಕ್ಕೆ ಪೊಲೀಸರು ಬೀಗ ಹಾಕಿದ್ದರಿಂದ ಮದುವೆಗೆ ಬಂದಿದ್ದವರು ಒಳಗಡೆಯೇ ಕಾಯಬೇಕಾಯಿತು

ವಿವಿಐಪಿ ಪಾಸ್ ಇದ್ರೂ ಪ್ರವೇಶ ಇಲ್ಲ!

ಬಿಜೆಪಿ ಕಾರ್ಯಕ್ರಮಕ್ಕೆ ತೆರಳಲು ವಿವಿಐಪಿ (ಅತೀ ಗಣ್ಯರು) ಪಾಸ್‌ ಪಡೆದು ಬಂದಿದ್ದವರಿಗೆ ನಿರಾಸೆ ಕಾದಿತ್ತು. ಮೀಸಲಿಟ್ಟಿದ್ದ ಆಸನಗಳಿಗಿಂತ ಹೆಚ್ಚಿನ ಪಾಸ್‌ಗಳನ್ನು ಹಂಚಿದ್ದರಿಂದ ವಿವಿಐಪಿ ಗ್ಯಾಲರಿ ಬಳಿ ಗೊಂದಲ ಉಂಟಾಯಿತು. ವಿವಿಐಪಿ ಪಾಸ್‌ ಹಿಡಿದು ಬಂದವರನ್ನು ಪೊಲೀಸರು ಪ್ರವೇಶ ದ್ವಾರದ ಬಳಿಯೇ ತಡೆದರು. ‘ಆಸನಗಳು ಭರ್ತಿಯಾಗಿದ್ದು ವಾಪಸ್‌ ಹೋಗಿ’ ಎಂದು ಹೇಳಿದ್ದರಿಂದ ಸಿಟ್ಟಾದ ಬಿಜೆಪಿ ಮುಖಂಡರು ಕಾರ್ಯಕರ್ತರು ‘ಇಂತಹ ಗೌರವಕ್ಕೆ ವಿವಿಐಪಿ ಪಾಸ್‌ ಯಾಕೆ ನೀಡಬೇಕಿತ್ತು’ ಎಂದು ಗೊಣಗತೊಡಗಿದರು.  ಗ್ಯಾಲರಿಯಲ್ಲಿ ಈಗಾಗಲೇ ಎಲ್ಲ ಆಸನಗಳು ಭರ್ತಿಯಾಗಿವೆ ಒಳಬಿಡಲು ಆಗುವುದಿಲ್ಲ ಎಂದು ಪೊಲೀಸರು ವಾಪಸ್ ಕಳಿಸಿದರು. ಸಂಸದ ಜಿ.ಎಂ.ಸಿದ್ದೇಶ್ವರ ಅವರ ಪುತ್ರಿ ಜಿ.ಎಸ್‌.ಅಶ್ವಿನಿ ಅವರಿಗೂ ಭದ್ರತೆಯ ಬಿಸಿ ತಟ್ಟಿತು. ವಿವಿಐಪಿ ಪಾಸ್‌ ಇಲ್ಲದ್ದರಿಂದ ಅವರನ್ನು ಪೊಲೀಸರು ಕೆಲ ಕಾಲ ತಡೆದಿದ್ದರು. ಬಳಿಕ ಒಳ ಹೋಗಲು ಅವಕಾಶ ನೀಡಿದರು.

ಕಲ್ಯಾಣ ಮಂಟಪದಲ್ಲೇ ಲಾಕ್‌!

ಎ.ವಿ.ಕೆ. ರಸ್ತೆಯಲ್ಲಿನ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಮದುವೆ ಸಂಭ್ರಮಕ್ಕೆ ಬಿಜೆಪಿ ಕಾರ್ಯಕ್ರಮದಿಂದಾಗಿ ಅಡ್ಡಿಯಾಯಿತು. ಅದೇ ಮಾರ್ಗದಲ್ಲಿ ಮೋದಿ ಸಂಚರಿಸಿದ್ದರಿಂದ ಕಲ್ಯಾಣ ಮಂಟಪಕ್ಕೆ ತೆರಳಲು ಸಂಬಂಧಿಕರು ಹರಸಾಹಸ ಪಡಬೇಕಾಯಿತು. ಬೆಳಿಗ್ಗೆಯೇ ಮುಹೂರ್ತ ನಿಗದಿಯಾಗಿದ್ದರಿಂದ ದೂರದ ಊರುಗಳಿಂದ ನಗರಕ್ಕೆ ಬಂದವರಿಗೆ ಕಲ್ಯಾಣ ಮಂಟಪದ ಬಳಿ ಹೋಗುವುದೇ ಸವಾಲಾಯಿತು. ಮಂಟಪದ ಮುಂಭಾಗ ಭಾರಿ ಭದ್ರತೆ ಒದಗಿಸಲಾಗಿತ್ತು. ಸುತ್ತಾಟದ ಬಳಿಕ ಕಲ್ಯಾಣ ಮಂಟಪದ ಒಳಗೆ ಹೋದವರಿಗೆ ಹೊರಗೆ ಬರುವುದು ಮತ್ತೊಂದು ಸಮಸ್ಯೆಯಾಯಿತು. ಬೆಳಿಗ್ಗೆ 10.30ರ ವೇಳೆಗೆ ಮುಹೂರ್ತ ಮುಗಿದರೂ ಹೊರಹೋಗಲು ಪೊಲೀಸರ ಅನುಮತಿಗಾಗಿ ಕಾಯಬೇಕಾದ ಸ್ಥಿತಿ ಉಂಟಾಯಿತು. ‘ಮೋದಿ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ ಹೀಗಾಗಿ ಯಾರನ್ನೂ ಹೊರಗಡೆ ಬಿಡಲು ಆಗಲ್ಲ’ ಎಂದು ಕಲ್ಯಾಣ ಮಂಟಪಕ್ಕೆ ಪೊಲೀಸರು ಬೀಗ ಹಾಕಿದ್ದರು. ಮೋದಿ ಅವರು ವೇದಿಕೆ ಕಾರ್ಯಕ್ರಮಕ್ಕೆ ತೆರಳಿದ ಬಳಿಕ ಬೀಗ ತೆಗೆದ ಪೊಲೀಸರು ಹೊರ ಹೋಗುವವರಿದ್ದರೆ ಈಗಲೇ ಹೊರಡಿ ಎಂದರು. ಒಂದಿಷ್ಟು ಜನ ಹೊರ ಹೋದ ಬಳಿಕ ಪೊಲೀಸರು ಮತ್ತೆ ಬೀಗ ಜಡಿದರು. ಮೋದಿ ಕಾರ್ಯಕ್ರಮ ಮುಗಿಸಿ ಹೊರಹೋಗುವವರೆಗೂ ಮದುವೆಗೆ ಬಂದವರು ಮಂಟಪದಲ್ಲೇ ಲಾಕ್‌ ಆಗಿದ್ದರು.

ಪ್ರತಿಭಟನಕಾರರು ಪೊಲೀಸರ ವಶಕ್ಕೆ

ಕಾಂಗ್ರೆಸ್‌ ಮುಖಂಡರು ನಗರಕ್ಕೆ ಮೋದಿ ಭೇಟಿ ವಿರೋಧಿಸಿ ಪ್ರತಿಭಟನೆ ನಡೆಸಿದರು. ‘ದ್ವೇಷ ಭಾಷಣ ಮಾಡುವ ಮೋದಿ ಭೇಟಿಯಿಂದ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ’ ಎಂದು ದೂರಿದ ಕಾಂಗ್ರೆಸ್ ಮುಖಂಡರು ಗೋ ಬ್ಯಾಕ್‌ ಮೋದಿ ಎಂದು ಘೋಷಣೆ ಕೂಗಿದರು.

ಕಪ್ಪು ಬಾವುಟ ಹಿಡಿದು ಶಾಮನೂರು ರಸ್ತೆಯಿಂದ ಹದಡಿ ರಸ್ತೆ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ಮೂಲಕ ಆಗಮಿಸಿದ ಮುಖಂಡರು ಬಿಜೆಪಿ ಕಾರ್ಯಕ್ರಮದ ಕಡೆಗೆ ಹೋಗಲು ಯತ್ನಿಸಿದಾಗ  ಪೊಲೀಸರು ಅವರನ್ನು ವಶಕ್ಕೆ ಪಡೆದರು. ವಿದ್ಯಾನಗರ ಪೊಲೀಸ್ ಠಾಣೆಗೆ ಕರೆದೊಯ್ದು ಬಳಿಕ ಬಿಡುಗಡೆಗೊಳಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಪಾಲಿಕೆಯ ಕಾಂಗ್ರೆಸ್‌ ಸದಸ್ಯರಾದ ಕೆ. ಚಮನ್ ಸಾಬ್ ಎ. ನಾಗರಾಜ್ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಅಲಿ ರಹಮತ್ ಪೈಲ್ವಾನ್ ಗಿರಿಧರ್ ಸತಾಲ್ ಕೆ.ಎಂ. ಮಂಜುನಾಥ್ ಜಮೀರ್ ಮಾರುತಿ ಹರಿಹರ ಡಿ.ಎಲ್. ನಾಗರಾಜ್ ತಾಹಿರ್ ಸಮೀರ್ ರೆಹಮಾನ್ ಹಾಗೂ ಎಎಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ್‌ ಪ್ರತಿಭಟನೆಯಲ್ಲಿದ್ದರು.

ರಾಜ್ಯಕ್ಕೆ ಕೇಂದ್ರದಿಂದ ಯಾವುದೇ ಸೌಲಭ್ಯ ನೀಡುತ್ತಿಲ್ಲ ಎಂದು ಆರೋಪಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅಂಬೇಡ್ಕರ್‌ ವೃತ್ತದಲ್ಲಿ ಪೊಲೀಸರು ಅವರನ್ನೂ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಕಾರ್ಯಕ್ರಮ ಮುಗಿದ ಬಳಿಕ ಬಿಡುಗಡೆಗೊಳಿಸಿದರು. ಸಂಘಟನೆಯ ಪ್ರಮುಖರಾದ ಪ್ರವೀಣಕುಮಾರ್‌ ಇಲಾನಿ ಗಿರಿಧರ ರಹಮತ್‌ ಇಮ್ತಿಯಾಜ್‌ ಕುಮಾರ್ ಆಲಂ ಸಾದಿಕ್ ಚಾಂದ್‌ ಮುಂತಾದವರು ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT