ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ಕ್ಷೇತ್ರದ ಹುಟ್ಟಿಗೆ ನೆಹರೂ ಕಾರಣ

ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಚಾಲನೆ ನೀಡಿದ ಜೆ.ಆರ್. ಷಣ್ಮುಖಪ್ಪ
Last Updated 15 ನವೆಂಬರ್ 2022, 4:36 IST
ಅಕ್ಷರ ಗಾತ್ರ

ದಾವಣಗೆರೆ: ಸಹಕಾರ ಮಹಾಮಂಡಲದ ಆಶ್ರಯದಲ್ಲಿ ಜಿಲ್ಲಾ ಸಹಕಾರ ಯೂನಿಯನ್‌ಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ದಾವಣಗೆರೆ-ಹರಿಹರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್ ತಿಳಿಸಿದರು.

ವಿವಿಧ ಸಹಕಾರ ಸಂಘಗಳ ಆಶ್ರಯದಲ್ಲಿ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಸೋಮವಾರ ಆರಂಭಗೊಂಡ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಗರದಲ್ಲಿ ಜಿಲ್ಲಾ ಸಹಕಾರ ಯೂನಿಯನ್‍ಗೆ ಧೂಡಾದಿಂದ 4 ಸಾವಿರ ಚದರ ಅಡಿಯ ನಿವೇಶನ ನೀಡಲಾಗಿದೆ. ಇಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗುವುದು ಎಂದರು.

ದೇಶದಲ್ಲಿ ಸಹಕಾರ ಕ್ಷೇತ್ರದ ಹುಟ್ಟು ಮತ್ತು ಬೆಳವಣಿಗೆಗೆ ಮೊದಲ ಪ್ರಧಾನಿ ಪಂಡಿತ್ ಜವಾಹರ ಲಾಲ್ ನೆಹರೂ ನೀಡಿರುವ ಕೊಡುಗೆ ಅವಿಸ್ಮರಣೀಯ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಡಾ.ಜೆ.ಆರ್. ಷಣ್ಮುಖಪ್ಪ ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದಾಗ ದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ. ಇದನ್ನು ಮನಗಂಡು ನೆಹರೂ ತಮ್ಮ ಜನ್ಮ ದಿನವಾದ ನ.14ರಿಂದ ದೇಶದ ಅಭಿವೃದ್ಧಿಗಾಗಿ ಸಹಕಾರ ಸಪ್ತಾಹವನ್ನಾಗಿ ಆಚರಿಸಿ ಎಂದು ಕರೆ ನೀಡಿದರು. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಈ ದಿನದಂದು ಸಹಕಾರ ಸಪ್ತಾಹ ನಡೆದುಕೊಂಡು ಬರುತ್ತಿದೆ ಎಂದರು.

ಕೃಷಿ ಆಧಾರಿತ ಭಾರತದ ಎಲ್ಲ ರಾಜ್ಯಗಳಲ್ಲಿ ಸಹಕಾರ ಸಂಘಗಳನ್ನು ಸ್ಥಾಪಿಸಿ ಸಹಕಾರ ಚಳವಳಿಗೆ ನೆಹರೂ ಉತ್ತೇಜನ ನೀಡಿದರು. ನಂತರ ಪ್ರಧಾನಿ ಆಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಹಸಿರು ಕ್ರಾಂತಿಯ ಜೊತೆಗೆ ಕ್ಷೀರಕ್ರಾಂತಿಗೆ ಮುನ್ನುಡಿ ಬರೆದರು ಎಂದು ನೆನಪು ಮಾಡಿಕೊಂಡರು.

ಸಹಕಾರ ಕ್ಷೇತ್ರ ಇಲ್ಲದ ಸಮಾಜದ ಯಾವ ರಂಗವನ್ನು ನೋಡಲು ಸಾಧ್ಯವಿಲ್ಲ. ಕೃಷಿ, ಆಹಾರ ಪದಾರ್ಥಗಳ ವಿತರಣೆ, ನೂಲಿನ ಗಿರಣಿ, ಮೊದಲಾದ ಕ್ಷೇತ್ರಗಳಲ್ಲು ಸಹಕಾರದ ಪಾತ್ರ ಇದೆ. ಆರೋಗ್ಯ ಕ್ಷೇತ್ರಕ್ಕೂ ಕೂಡ ಕಾಲಿಟ್ಟಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 1,456 ಸಹಕಾರ ಸಂಘಗಳು ಜಿಲ್ಲೆಯಲ್ಲಿದ್ದು, 420 ಹಾಲು ಉತ್ಪಾದಕರ ಸಂಘಗಳಿವೆ. 83 ಬಳಕೆದಾರರ ಸಹಕಾರ ಸಂಘಗಳಿವೆ ಎಂದು ಜಿಲ್ಲಾ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪನಿರ್ದೇಶಕ ಕೆ.ಮಹೇಶ್ವರಪ್ಪ ಮಾಹಿತಿ ನೀಡಿದರು.

ಶಿವಮೊಗ್ಗ-ದಾವಣಗೆರೆ-ಚಿತ್ರದುರ್ಗ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಜಗದೀಶಪ್ಪ ಬಣಕಾರ್, ಕನ್ನಿಕಾ ಪರಮೇಶ್ವರಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಆರ್.ಜಿ. ಶ್ರೀನಿವಾಸ ಮೂರ್ತಿ ಮಾತನಾಡಿದರು. ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬೇತೂರು ರಾಜಣ್ಣ, ವಿವಿಧ ಸಹಕಾರ ಬ್ಯಾಂಕ್‌ಗಳ ಅಧ್ಯಕ್ಷರಾದ ಲೋಕಿಕೆರೆ ಸಿದ್ದಪ್ಪ, ಕೆ.ಎನ್. ಸೋಮಶೇಖರಪ್ಪ, ಎಚ್. ಬಸವರಾಜಪ್ಪ, ಡಿ.ಎಂ. ಮುರಿಗೇಂದ್ರಯ್ಯ, ಅನ್ನಪೂರ್ಣ, ನಿರ್ಮಲಾ ಸುಭಾಷ್, ಗೋಪನಾಳು ಕರಿಬಸಪ್ಪ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT