ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ, ಜೀವನಶೈಲಿ ಉತ್ತಮವಾಗಿದ್ದರೆ ಚಿಕಿತ್ಸೆಯ ಅಗತ್ಯವಿಲ್ಲ: ಆರ್. ರಾಜಶೇಖರ್

Published 25 ಫೆಬ್ರುವರಿ 2024, 5:08 IST
Last Updated 25 ಫೆಬ್ರುವರಿ 2024, 5:08 IST
ಅಕ್ಷರ ಗಾತ್ರ

ದಾವಣಗೆರೆ: ‘ಜೀವನ ಶೈಲಿಯಿಂದ ಮನುಷ್ಯನಿಗೆ ಕಾಯಿಲೆಗಳು ಬರುತ್ತಿದ್ದು, ಉತ್ತಮ ಆಹಾರ ಹಾಗೂ ಶಿಸ್ತುಬದ್ಧ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ಆರೋಗ್ಯ ಸುಧಾರಣೆ ಸಾಧ್ಯ’ ಎಂದು ಆಹಾರ ತಜ್ಞ ಆರ್. ರಾಜಶೇಖರ್ ಅಭಿಪ್ರಾಯಪಟ್ಟರು.

ಭಾರತ ವಿಕಾಸ ಪರಿಷದ್, ಸ್ವಾಮಿ ವಿವೇಕಾನಂದ ಶಾಖೆಯಿಂದ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಆಹಾರ ಚಿಕಿತ್ಸೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು.

‘ಭಾರತದಲ್ಲಿ 10 ಕೋಟಿ ಜನರು ಮಧುಮೇಹ ಹಾಗೂ 40 ಕೋಟಿ ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ನಾಲ್ಕು ದಶಕಗಳ ಹಿಂದೆ ಜನನ ಹಾಗೂ ಮರಣಗಳೆರಡು ಮನೆಯಲ್ಲಿ ಸಂಭವಿಸುತ್ತಿದ್ದವು. ಈಗ ಆಸ್ಪತ್ರೆಯಲ್ಲಿ ಆಗುತ್ತಿವೆ. ಆಹಾರ ಹಾಗೂ ಜೀವನ ಶೈಲಿಯಲ್ಲಿ ಆಗಿರುವ ಏರುಪೇರುಗಳು ಇವುಗಳಿಗೆ ಕಾರಣವಾಗಿವೆ’ ಎಂದು ವಿಶ್ಲೇಷಿಸಿದರು.

‘ನಮಗೆ ಊಟದ ತಟ್ಟೆಯಲ್ಲಿ ಕೇವಲ ಸಿಕ್ಕುತ್ತಿರುವುದು ಶೇ20ರಷ್ಟು ಆಹಾರ ಮಾತ್ರ. ಉಳಿದ ಶೇ 80ರಷ್ಟು ಆಹಾರವು ಗಾಳಿ, ಬಿಸಿಲು, ನೀರು ಹಾಗೂ ಉಪವಾಸದಿಂದ ಸಿಗುತ್ತಿವೆ. ಊಟದ ತಟ್ಟೆಯಿಂದ ಸಿಗುವ ಆಹಾರವೂ ಈಗ ಅಸ್ತವ್ಯವಸ್ಥವಾಗಿವೆ. ಕೆಲವು ಅತಿಯಾದರೆ, ಕೆಲವು ಕೊರತೆಯಾಗಿವೆ. ಇದರಿಂದಾಗಿ ಆರೋಗ್ಯದಲ್ಲಿ ಏರುಪೇರುಗಳಾಗುತ್ತಿವೆ’ ಎಂದರು.

‘ಆಹಾರದಲ್ಲಿ ಶಕ್ತಿ ನೀಡುವ, ದೇಹದ ಬೆಳವಣಿಗೆ ಹಾಗೂ ಜೀವ ರಕ್ಷಕ ಆಹಾರಗಳು ಇವೆ. ಈ ಮೂರು ವರ್ಗದ ಆಹಾರಗಳಲ್ಲಿ ಏರುಪೇರಾಗಿವೆ. ಹತ್ತಾರು ಧಾನ್ಯಗಳು ಲಭ್ಯವಿದ್ದರೂ ಒಂದೆರಡರ ಬಳಕೆ ಜಾಸ್ತಿಯಾಗಿವೆ. ಅತಿಯಾಗಿ ಪಾಲಿಶ್ ಮಾಡಿದ ಅಕ್ಕಿಯ ಜೊತೆಗೆ ಅಡುಗೆ ಎಣ್ಣೆ ಸೇರುತ್ತಿದೆ. ಅಡುಗೆ ಎಣ್ಣೆಯನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ಮಧುಮೇಹ ಬರುತ್ತಿದ್ದು, ಅಡುಗೆ ಎಣ್ಣೆಯನ್ನು ಆದಷ್ಟು ಕಡಿಮೆ ಬಳಸಬೇಕು’ ಎಂದು ಸಲಹೆ ನೀಡಿದರು.

‘ವೃದ್ಯಾಪ್ಯದಲ್ಲಿ ಬರುತ್ತಿದ್ದ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಕಾಯಿಲೆಗಳು ಇಂದು 25 ವರ್ಷಗಳಿಗೆ ಕಾಣಿಸಿಕೊಳ್ಳುತ್ತಿದ್ದು, ಮಕ್ಕಳಿಗೂ ಡಯಾಬಿಟಿಸ್ ಬರುತ್ತಿದೆ. ಧಾನ್ಯಗಳ ಜೊತೆ ಅಡುಗೆ ಎಣ್ಣೆ ಸೇರುತ್ತಿರುವುದು ಶೇ 90ರಷ್ಟು ಮಧುಮೇಹಕ್ಕೆ ಕಾರಣವಾಗಿದೆ’ ಎಂದರು.

‘ಮನುಷ್ಯ ಅತಿಯಾಗಿ ಆಹಾರ ತಿನ್ನುತ್ತಿದ್ದು, ಕಡಿಮೆ ಕೆಲಸ ಮಾಡುತ್ತಿದ್ದಾನೆ. ಪ್ರಕೃತಿಯಿಂದ ದೂರವಾಗಿರುವುದರಿಂದ ಕಾಯಿಲೆಗೆ ಹತ್ತಿರವಾಗುತ್ತಿದ್ದಾನೆ. ಹಸಿದಾಗ ತಿನ್ನಬೇಕೇ ಹೊರತು ಸಿಕ್ಕಿದ್ದನ್ನೆಲ್ಲಾ ತಿನ್ನಬಾರದು. ಮನುಷ್ಯನಿಗೆ ರೋಗ ನಿರೋಧಕ ಶಕ್ತಿ ಅಧಿಕವಾಗಿದ್ದು, ಆಹಾರ, ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಚಿಕಿತ್ಸೆ ಅಗತ್ಯವಿಲ್ಲ’ ಎಂದು ಹೇಳಿದರು.

ಭಾರತ ವಿಕಾಸ ಪರಿಷದ್ ಅಧ್ಯಕ್ಷ ನಾಗಾನಂದ ಎಲ್‌.ವಿ. ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಿವಶಂಕರ್ ಕೆ., ಕೋಶಾಧ್ಯಕ್ಷ ನವೀನ್‌ ಬಿ. ಗಡ್ಡದಗೂಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT