ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂತರಾಜ್ ವರದಿ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

ವರದಿ ಸಾರ್ವಜನಿಕವಾಗಿ ಬಿಡುಗಡೆ ಮಾಡಲಿ: ಅಹಿಂದ ಮುಖಂಡರ ಆಗ್ರಹ
Published 28 ಡಿಸೆಂಬರ್ 2023, 5:10 IST
Last Updated 28 ಡಿಸೆಂಬರ್ 2023, 5:10 IST
ಅಕ್ಷರ ಗಾತ್ರ

ಹೊನ್ನಾಳಿ: ‘ಪಟ್ಟಭದ್ರಾ ಹಿತಾಸಕ್ತಿಗಳು ಶೈಕ್ಷಣಿಕ, ಸಾಮಾಜಿಕ, ಹಾಗೂ ಜಾತಿ ಜನಗಣತಿ ವರದಿ ಮಂಡನೆಗೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ಈ ವರದಿ ಇನ್ನೂ ಯಾರ ಕೈಗೂ ಸೇರಿಲ್ಲ. ಆದರೂ ಅದನ್ನು ಹತ್ತಿಕ್ಕುವ ಪ್ರಯತ್ನಗಳು ಕೆಲ ಮೇಲ್ವರ್ಗದವರಿಂದ ನಡೆಯುತ್ತಿರುವುದು ಸರಿಯಲ್ಲ’ ಎಂದು ತಾಲ್ಲೂಕು ಅಹಿಂದ ಒಕ್ಕೂಟದ ಅಧ್ಯಕ್ಷ ಈಶ್ವರನಾಯ್ಕ ಹೇಳಿದರು.

ಹೊನ್ನಾಳಿ ತಾಲ್ಲೂಕು ಅಹಿಂದ ಒಕ್ಕೂಟದಿಂದ ಕಾಂತರಾಜ್ ವರದಿ ಜಾರಿಗೆ ಆಗ್ರಹಿಸಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಕಾಂತರಾಜ್ ವರದಿ ಬಿಡುಗಡೆ ಹತ್ತಿಕ್ಕುವ ಪ್ರಯತ್ನ ಮಾಡಿದರೆ ಮುಂದಿನ ದಿನಗಳಲ್ಲಿ ರಾಜ್ಯದ ಅಹಿಂದ ವರ್ಗವನ್ನು ಸಂಘಟಿಸಿ ಬೃಹತ್ ಪ್ರಮಾಣದ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

‘ಸಾಮಾಜಿಕ, ಶೈಕ್ಷಣಿಕ ವರದಿ ಯಾವುದೇ ರಾಜಕೀಯ ಹಿತಾಸಕ್ತಿಗಲ್ಲ ಮತ್ತು ಮೀಸಲಾತಿ ಪಡೆಯುವ ಉದ್ದೇಶವನ್ನು ಹೊಂದಿಲ್ಲ’ ಎಂದು ರಾಜ್ಯ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎ. ಉಮಾಪತಿ ಹೇಳಿದರು.

‘ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 80ರಷ್ಟಿರುವ ಅಹಿಂದ ವರ್ಗಗಳು, ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ನ್ಯಾಯ ಸಿಗದೇ ಅವಕಾಶಗಳಿಂದ ವಂಚಿತವಾಗಿವೆ. ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೇ ವರದಿಯನ್ನು ಅಂಗೀಕರಿಸಿ ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು’ ಎಂದು ಅವರು ಆಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ನಾಗಪ್ಪ ಮಾತನಾಡಿದರು. ತಾಲ್ಲೂಕು ಕುರುಬ ಸಮಾಜದವರು, ಮುಸ್ಲಿಂ ಸಮಾಜದ ಮುಖಂಡರು, ಬಂಜಾರ ಸಮಾಜದ ಮುಖಂಡು, ಮಡಿವಾಳ ಸಮಾಜ, ಮಾದಿಗ ಸಮಾಜ, ಉಪ್ಪಾರ ಸಮಾಜ ಸೇರಿ ಅನೇಕ ಸಮಾಜದ ಮುಖಂಡರು ಪ್ರತಿಭಟನೆ ಹಾಗೂ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಕರವೇ ಅಧ್ಯಕ್ಷ ಎಸ್.ಎಸ್. ಶ್ರೀನಿವಾಸ್, ಎಂ.ಎಸ್. ಫಾಲಾಕ್ಷಪ್ಪ, ಎಚ್.ಎ.ರಂಜಿತ್, ವಕೀಲರಾದ ಚಂದ್ರಪ್ಪ, ಮಾರಿಕೊಪ್ಪ ಮಂಜು, ಬೆನಕನಹಳ್ಳಿ ಪರಮೇಶ್, ತಾಲ್ಲೂಕು ಬಂಜಾರ್ ಸಂಘದ ಅಧ್ಯಕ್ಷ ಅಂಜುನಾಯ್ಕ, ರಾಜು ಕಡಗಣ್ಣಾರ್ ಸೇರಿ ನೂರಾರು ಜನ ಹಾಜರಿದ್ದರು. ನಂತರ ತಾಲ್ಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

3 : ಹೊನ್ನಾಳಿ ಉಪ ವಿಭಾಗಾಧಿಕಾರಿ ಹುಲ್ಮನಿ ತಿಮ್ಮಣ್ಣ ಅವರಿಗೆ ಅಹಿಂದ ಮುಖಂಡರು ಮನವಿ ಸಲ್ಲಿಸಿದರು. 
3 : ಹೊನ್ನಾಳಿ ಉಪ ವಿಭಾಗಾಧಿಕಾರಿ ಹುಲ್ಮನಿ ತಿಮ್ಮಣ್ಣ ಅವರಿಗೆ ಅಹಿಂದ ಮುಖಂಡರು ಮನವಿ ಸಲ್ಲಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT