ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಸಾಲಕ್ಕೆ ಸಬ್ಸಿಡಿ ಹಣ ವಜಾಕ್ಕೆ ಖಂಡನೆ, ಪ್ರತಿಭಟನೆ

Published 21 ಮೇ 2024, 5:13 IST
Last Updated 21 ಮೇ 2024, 5:13 IST
ಅಕ್ಷರ ಗಾತ್ರ

ದಾವಣಗೆರೆ: ಸಾಲದ ಹಣಕ್ಕೆ ಸಾಮಾಜಿಕ ಭದ್ರತೆ ಸೇರಿದಂತೆ ವಿವಿಧ ಸಬ್ಸಿಡಿ ಹಣ ಜಮೆ ಮಾಡಿಕೊಂಡಿದ್ದ ಬ್ಯಾಂಕ್‌ಗಳ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ತಹಶೀಲ್ದಾರ್‌ ಕಚೇರಿ ಎದುರು ಸೋಮವಾರ ಪ್ರತಿಭಟನೆ‌ ನಡೆಸಲಾಯಿತು.

‘ದಾವಣಗೆರೆ ತಾಲ್ಲೂಕಿನ ಹೊನ್ನೂರು ಗ್ರಾಮದ ನಾಗಮ್ಮ ಅಂಗವಿಕಲರ ಕಲ್ಯಾಣ ಇಲಾಖೆಯಿಂದ ₹35 ಸಾವಿರ  ಸಹಾಯಧನ, ₹65,000 ಸಾಲ ಸೇರಿದಂತೆ ₹1 ಲಕ್ಷ ಪಡೆದಿದ್ದು, ಈಗಾಗಲೇ ₹ 50,000 ಸಾಲ ಮರುಪಾವತಿ ಮಾಡಿದ್ದಾರೆ. ಕಾರಣಾಂತರದಿಂದ ಉಳಿದ ಹಣ ಕಟ್ಟಿಲ್ಲ. ಬ್ಯಾಂಕ್‌ಗಳು ಈ ಹಣಕ್ಕೆ ಉದ್ಯೋಗ ಖಾತ್ರಿ, ಗೃಹಲಕ್ಷ್ಮಿ,  ಅಂಗವಿಕಲರ ವೇತನದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸಾಲ ಕಟ್ಟುವುದಾಗಿ ತಿಳಿಸಿದರೂ ಬ್ಯಾಂಕ್‌ನ ಮ್ಯಾನೇಜರ್ ಸ್ಪಂದಿಸಿಲ್ಲ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಆರೋಪಿಸಿದರು.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಎಂ.ಬಿ.ಅಶ್ವತ್ಥ್‌ ಲೀಡ್‌ ಬ್ಯಾಂಕ್ ವ್ಯವಸ್ಥಾಪಕರನ್ನು ಧರಣಿ ಸ್ಥಳಕ್ಕೆ ಕರೆಯಿಸಿ ಕೂಡಲೇ ‌ಮುಟ್ಟು ಗೋಲು‌ ಹಾಕಿಕೊಂಡಿರುವ ಹಣವನ್ನು ನಾಗಮ್ಮ ಅವರ ಖಾತೆಗೆ ಜಮಾ ಮಾಡುವಂತೆ ತಾಕೀತು ಮಾಡಿದರು.

ಬ್ಯಾಂಕ್ ವ್ಯವಸ್ಥಾಪಕ ಸ್ಥಳಕ್ಕೆ ಬಂದು‌‌ ತಹಶೀಲ್ದಾರ್ ಕಚೇರಿ ಮುಂದೆಯೇ ನಾಗಮ್ಮ ಅವರಿಗೆ ಹಣ ನೀಡಬೇಕು ಎಂದು ಪ್ರತಿಭಟನಕಾರರು ಪಟ್ಟು ‌ಹಿಡಿದರು. ಇದಕ್ಕೆ ಒಪ್ಪಿದ ಬ್ಯಾಂಕ್ ಮ್ಯಾನೇಜರ್ ಆಗಮಿಸಿ ₹35 ಸಾವಿರ ಆಗಮಿಸಿ ನಾಗಮ್ಮ ಅವರಿಗೆ ನೀಡಿದರು.

ಆಲೂರು ಪರಶುರಾಂ, ಗಂಡುಗಲಿ, ಯರವನಾಗತಿಹಳ್ಳಿ ಪೂಜಾರ ಪರಮೇಶ್ವರಪ್ಪ, ಗುಮ್ಮನೂರು ರುದ್ರೇಶ್, ಭೀಮೇಶ್, ಶಿವಪುರ ಕೃಷ್ಣಮೂರ್ತಿ, ಚಿಕ್ಕಮಲ್ಲನಹೊಳೆ ಚಿರಂಜೀವಿ  ಭಾಗವಹಿಸಿದ್ದರು

 ಬರ ಪರಿಹಾರ ಕಾಮಗಾರಿ ತುರ್ತಾಗಿ ಆರಂಭಿಸಲು ಒತ್ತಾಯ

ಬರದಿಂದ ತತ್ತರಿಸಿರುವ ರಾಜ್ಯದ ರೈತರಿಗೆ ಸರ್ಕಾರ ಯುದ್ಧೋಪಾದಿಯಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್‍ಎಸ್) ಸೋಮವಾರ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿತು.

‘ರಾಜ್ಯದ 223 ತಾಲೂಕುಗಳಲ್ಲಿ ಬರವಿದ್ದು ಜನ-ಜಾನುವಾರುಗಳಿಗೆ ನೀರು, ಮೇವಿಗಾಗಿ ಪರದಾಟ 29 ಜಿಲ್ಲೆಗಳ 149 ತಾಲೂಕುಗಳ 1,920 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ಕೊಳವೆ ಬಾವಿಗಳು ಬತ್ತಿ ಹೋಗಿವೆ. ಕೆರೆಗಳಲ್ಲ್ಲಿ ನೀರಿಲ್ಲ. ಜಿಲ್ಲಾಡಳಿತದಿಂದ ನೀರಿನ ಸರಬರಾಜು ಸಮರ್ಪಕವಾಗಿ ನಡೆಯುತ್ತಿಲ್ಲ. ಕೂಡಲೇ ಬರ ಪರಿಹಾರ ನೀಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

‘ಎಲ್ಲಾ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕು, ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಕೃಷಿ ಕಾರ್ಮಿಕರಿಗೆ ಉದ್ಯೋಗವನ್ನು ಖಚಿತಪಡಿಸಬೇಕು. ಕೊಳವೆ ಬಾವಿ ಕೊರೆಸುವ ವೆಚ್ಚವನ್ನು ವಿಪರೀತವಾಗಿ ಹೆಚ್ಚಿಸಿದ್ದು, ಅದನ್ನು ತಡೆಯಬೇಕು. ಬಲವಂತವಾಗಿ ಸಾಲ ವಸೂಲಿ ಮಾಡುವ ಮೈಕ್ರೊ ಫೈನಾನ್ಸ್ ಮೇಲೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ರೈತರಿಂದ ಖರೀದಿ ಮಾಡಿದ ಬೆಳೆಯ ಹಣವನ್ನು ಕೂಡಲೇ ಪಾವತಿಸಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಅಖಿಲ ಭಾರತ ಉಪಾಧ್ಯಕ್ಷ ಬಿ.ಎಸ್. ಸುನಿತ್ ಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ಮಧು ತೊಗಲೇರಿ, ಜಿಲ್ಲಾ ಕಾರ್ಯದರ್ಶಿ ನಾಗಸ್ಮಿತಾ, ಮಂಜುನಾಥ್ ರೆಡ್ಡಿ, ಚೌಡಪ್ಪ ಹುಣಸಕಟ್ಟೆ‌, ರುದ್ರಪ್ಪ, ಭೀಮಣ್ಣ, ಮಾಯಕೊಂಡ ನಾಗರಾಜ್ ಶಿವಲಿಂಗಪ್ಪ ನಲ್ಕುಂದ ಇದ್ದರು.

ಬರಗಾಲದಿಂದ ತತ್ತರಿಸಿರುವ ರೈತರಿಗೆ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಸದಸ್ಯರು ದಾವಣಗೆರೆಯ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ
ಬರಗಾಲದಿಂದ ತತ್ತರಿಸಿರುವ ರೈತರಿಗೆ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಸದಸ್ಯರು ದಾವಣಗೆರೆಯ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT