ಸುರಹೊನ್ನೆ ಬಾಗಿಲು ತೆಗೆಯದ ಸಾರ್ವಜನಿಕ ಶೌಚಾಲಯ

7

ಸುರಹೊನ್ನೆ ಬಾಗಿಲು ತೆಗೆಯದ ಸಾರ್ವಜನಿಕ ಶೌಚಾಲಯ

Published:
Updated:
ನ್ಯಾಮತಿ ತಾಲ್ಲೂಕು ಸುರಹೊನ್ನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮುದಾಯ ಶೌಚಾಲಯ ಬಾಗಿಲು ಮುಚ್ಚಿರುವುದು

ನ್ಯಾಮತಿ: ತಾಲ್ಲೂಕಿನ ಸುರಹೊನ್ನೆ ಗ್ರಾಮ ಪಂಚಾಯಿತಿ ಆಡಳಿತ ವೈಫಲ್ಯದಿಂದ ಸಾರ್ವಜನಿಕರು ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸ್ ನಿಲ್ದಾಣದಲ್ಲಿ ನಿರ್ಮಾಣ ಆಗಿರುವ ಸಾರ್ವಜನಿಕರ ಸಮುದಾಯ ಶೌಚಾಲಯ ಆರಂಭಗೊಂಡ ಕೆಲವು ದಿನ ಮಾತ್ರ ಸಾರ್ವಜನಿಕರಿಗೆ ಲಭ್ಯವಾಗಿದ್ದು, ನಂತರ ಬಾಗಿಲು ಮುಚ್ಚಿರುವುದರಿಂದ ಈ ಭಾಗದ ಪ್ರಯಾಣಿಕರು, ಸಾರ್ವಜನಿಕರು, ಮಹಿಳೆಯರು, ವಯೋವೃದ್ಧರು ಶೌಚಾಲಯ ಇಲ್ಲದೇ ಪರದಾಡುವಂತಾಗಿದೆ.

ಪ್ರತಿದಿನ ನೂರಾರು ಬಸ್‌ಗಳು ಇಲ್ಲಿ ಸಂಚರಿಸುತ್ತವೆ. ಸುತ್ತಮುತ್ತಲ ಗ್ರಾಮಗಳಿಂದ ಇಲ್ಲಿಗೆ ಬರುವ ಪ್ರಯಾಣಿಕರ ಸಂಖ್ಯೆ ಹಾಗೂ ಈ ಭಾಗದ ಪವಿತ್ರ ಕ್ಷೇತ್ರ ತೀರ್ಥರಾಮೇಶ್ವರಕ್ಕೆ ಈ ಗ್ರಾಮದ ಮೂಲಕ ಹಾದು ಹೋಗಬೇಕಿದೆ. ಪ್ರಯಾಣಿಕರು, ಯಾತ್ರಿಕರು ಸಹ ಶೌಚಾಲಯ ವ್ಯವಸ್ಥೆ ಇಲ್ಲದೇ ಗ್ರಾಮಾಡಳಿತಕ್ಕೆ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಿದ್ದಾರೆ.

ಕುಮಟಾ-ಕಾರಮಡಗಿ ಹೆದ್ದಾರಿ ರಸ್ತೆ ಅಭಿವೃದ್ಧಿ ಸಮಯದಲ್ಲಿ ನೆಲಸಮವಾದ ಬಸ್ ತಂಗುದಾಣ ಇದುವರೆಗೂ ನಿರ್ಮಾಣವಾಗಿಲ್ಲ. ಮಳೆ-ಬಿಸಿಲು ಎನ್ನದೇ ರಸ್ತೆಯ ಅಕ್ಕ–ಪಕ್ಕ, ಅಂಗಡಿ ಮುಂಗಟ್ಟುಗಳ ಮುಂದೆ ಪ್ರಯಾಣಿಕರು ನಿಲ್ಲಬೇಕಿದೆ. ಬಸ್ ತಂಗುದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕಾದ ಶಾಸಕರು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರು ಗಮನಹರಿಸಿಲ್ಲ ಎಂದು ಜೆಡಿಎಸ್ ಮುಖಂಡ ಜಿ.ಎಸ್. ಜಯಪ್ಪ ಹೇಳುತ್ತಾರೆ.

ಸುರಹೊನ್ನೆ ಗ್ರಾಮ ಪಂಚಾಯಿತಿಗೆ ಸೇರಿದ ಸುಮಾರು 30ರಿಂದ 35 ವಾಣಿಜ್ಯ ಮಳಿಗೆಗಳು ಇದ್ದು, ಬಾಡಿಗೆದಾರರಿಂದ ಬಾಡಿಗೆ ಮಾತ್ರ ವಸೂಲು ಮಾಡುತ್ತಾರೆ. ಆದರೆ ಬೇಕಾದ ಶೌಚಾಲಯ, ಕುಡಿಯುವ ನೀರು ಮೂಲ ಸೌಲಭ್ಯ ಒದಗಿಸಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಬಾಡಿಗೆದಾರರು ಗ್ರಾಮಾಡಳಿತಕ್ಕೆ ಮನವಿ ಮಾಡಿದರು ಏನು ಉಪಯೋಗವಾಗಿಲ್ಲ ಎಂದು ದೂರಿದ್ದಾರೆ.

ಸಂಬಂಧಪಟ್ಟ ಶಾಸಕರು, ಗ್ರಾಮಾಡಳಿತ ಮತ್ತು ಜನಪ್ರತಿನಿಧಿಗಳು ಗಮನಹರಿಸಿ, ಹೈಟೆಕ್ ಸಾರ್ವಜನಿಕರ ಶೌಚಾಲಯ ಮತ್ತು ಸಾರ್ವಜನಿಕ ಬಸ್ ತಂಗುದಾಣ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸವಿತಾ ಸಮಾಜದ ಕಾರ್ಯದರ್ಶಿ ಎನ್.ಆರ್. ರಾಮು, ಕೃಷ್ಣಪ್ಪ, ಫೈನಾನ್ಸ್ ಬಸವರಾಜಪ್ಪ, ಬೀಡಾ ಅಂಗಡಿ ಲೋಕೇಶಪ್ಪ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !