ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಮಾರ್ಚ್ 11ರಿಂದ 31ನೇ ರಾಘವೇಂದ್ರ ಸಪ್ತಾಹ

Published 23 ಡಿಸೆಂಬರ್ 2023, 6:10 IST
Last Updated 23 ಡಿಸೆಂಬರ್ 2023, 6:10 IST
ಅಕ್ಷರ ಗಾತ್ರ

ದಾವಣಗೆರೆ: 2024ರ ಮಾರ್ಚ್ 11ರಿಂದ 17ರವರೆಗೆ ದಾವಣಗೆರೆಯಲ್ಲಿ 31ನೇ ರಾಘವೇಂದ್ರ ಸಪ್ತಾಹ ಅವಿಸ್ಮರಣೀಯವಾಗುವಂತೆ ನಡೆಸಬೇಕು ಎಂದು ಮಂತ್ರಾಲಯ ದಾಸ ಸಾಹಿತ್ಯ ಯೋಜನೆಯ ಗೌರವ ನಿರ್ದೇಶಕ ಅಪ್ಪಣ್ಣಾಚಾರ್ ಆಶಿಸಿದರು.

ಸಪ್ತಾಹದ ಅಂಗವಾಗಿ ಗುರುವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಎಲ್ಲ ಜಾತಿಯ ಭಕ್ತರು ನಡೆದುಕೊಳ್ಳುವುದರಿಂದ ಅವರದು ಜಾತ್ಯತೀತ ವ್ಯಕ್ತಿತ್ವ. 30 ವರ್ಷಗಳಿಂದ ವೈಭವದೊಂದಿಗೆ ರಾಘವೇಂದ್ರ ಸಪ್ತಾಹವು ನಡೆಯುತ್ತ ಬಂದಿದೆ. ದಾವಣಗೆರೆಯಲ್ಲಿ ನಡೆಯುವ ಕಾರ್ಯಕ್ರಮವೂ ಅವಿಸ್ಮರಣೀಯವಾಗಲಿ ಎಂದರು.

‘ವಿವಿಧ ಸಮುದಾಯದವರು ಸಮಾವೇಶಗಳನ್ನು ನಡೆಸುತ್ತಿದ್ದಾರೆ. ನಾವೂ ನಮ್ಮ ಸಂಘಟನೆಯನ್ನು ಬಲಪಡಿಸಿಕೊಳ್ಳಬೇಕು. ಮಹಿಳೆಯರು, ಯುವಕರು, ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ದೇಶ ಉಳಿಯಬೇಕು. ಎಲ್ಲ ವರ್ಗದ ಜನರಿಗೂ ರಾಯರ ಅನುಗ್ರಹವಾಗಬೇಕು. ರಾಘವೇಂದ್ರ ಸಪ್ತಾಹದ ಮೂಲಕ ಭಾರತೀಯರನ್ನು ಬೆಸೆಯುವ ಕೆಲಸವಾಗಬೇಕು’ ಎಂದು ಪಂಡಿತ ಕೊರ್ಲಳ್ಳಿ ವೆಂಕಟೇಶಾಚಾರ್ ಸಲಹೆ ನೀಡಿದರು.

‘ರಾಘವೇಂದ್ರ ಸಪ್ತಾಹದಲ್ಲಿ ಲಕ್ಷ್ಮೀ ಶೋಭಾನ, ಶ್ರೀನಿವಾಸ ಕಲ್ಯಾಣ, ರಾಯರ ಪಟ್ಟಾಭಿಷೇಕ ಜತೆಗೆ ಸುಪ್ರಭಾತ ಕಾರ್ಯಕ್ರಮಗಳಿಗೆ ಹೆಚ್ಚು ಜನರನ್ನು ಕರೆ ತರಬೇಕು’ ಎಂದು ಅಷ್ಟಾವಧಾನಿ ಡಾ. ಸದಾನಂದ ಶಾಸ್ತ್ರಿಗಳು ತಿಳಿಸಿದರು.

ವಿವಿಧ ಕಾರ್ಯಕ್ರಮ:

‘ರಾಘವೇಂದ್ರ ಸಪ್ತಾಹದ ಅಂಗವಾಗಿ 7 ದಿನಗಳ ಕಾಲ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವೈವಿಧ್ಯಮಯವಾಗಿ ನಡೆಯಲಿವೆ’ ಎಂದು ಮಂತ್ರಾಲಯದ ಮೂಲ ಅರ್ಚಕ ಪರಿಮಳಾಚಾರ್ ಹೇಳಿದರು.

‘ಪ್ರತಿ ದಿನವೂ ಒಂದು ಹೋಮ, ರಾಯರ ಅಷ್ಟಾಕ್ಷರ ಮಂತ್ರ ಜಪ ಮಾಡಲಾಗುವುದು. ಉಡುಪಿಯ ಮೂವರು ಪಂಡಿತರು ವಿಶೇಷ ಉಪನ್ಯಾಸ ನೀಡುವರು. ಪ್ರತಿ ದಿನ ಬೆಳಗ್ಗೆ 6 ಗಂಟೆಗೆ ಸುಪ್ರಭಾತ ಕಾರ್ಯಕ್ರಮ ವೈಶಿಷ್ಟೃಪೂರ್ಣವಾಗಿ ನಡೆಯಲಿದೆ’ ಎಂದು ಹೇಳಿದರು.

‘ಮಧ್ಯಾಹ್ನ ಭಜನಾ ಮಂಡಳಿಗಳ ಕಾರ್ಯಕ್ರಮ, ಶುಕ್ರವಾರ ಲಕ್ಷ್ಮೀ ಶೋಭಾನ, ಮಾರ್ಚ್ 12ರಂದು ಶೋಭಾಯಾತ್ರೆ ಮತ್ತು ಪಟ್ಟಾಭಿಷೇಕ ನೆರವೇರಲಿವೆ. ಒಂದು ದಿನ ಮಹಿಳಾ ಗೋಷ್ಠಿ ಹಮ್ಮಿಕೊಳ್ಳಲಾಗುವುದು. ಕಲಾವಿದರಿಂದ ದಾಸವಾಣಿಯೂ ಇರಲಿದೆ. ಶ್ರೀನಿವಾಸ ಕಲ್ಯಾಣದೊಂದಿಗೆ ಸಪ್ತಾಹ ಮುಕ್ತಾಯವಾಗಲಿದೆ’ ಎಂದು ತಿಳಿಸಿದರು.

ಸರಯು ಮುತಾಲಿಕ್, ಡಾ. ಶಾಂತಾ ಭಟ್, ಗೋಪಾಲಾಚಾರ್, ರಾಘವೇಂದ್ರ ಸಪ್ತಾಹ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಸಂಪನ್ನ ಮುತಾಲಿಕ್ ಮಾತನಾಡಿದರು. ಕಂಪ್ಲಿ ಗುರುರಾಜಾಚಾರ್ ಸ್ವಾಗತಿಸಿದರು. ಆನಂದ ತೀರ್ಥಾಚಾರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT