ಸೋಮವಾರ, ಏಪ್ರಿಲ್ 12, 2021
24 °C
22ರಿಂದ ಮುಕ್ತ ವಿವಿ ಪದವಿ ಪರೀಕ್ಷೆಗಳು ಆರಂಭ

ಹೆಸರಿಗೆ ಪ್ರಾದೇಶಿಕ ಕೇಂದ್ರ: ಪರೀಕ್ಷೆಗೆ ಅಲೆದಾಟ

ಚಂದ್ರಶೇಖರ ಆರ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 2018–19ನೇ ಸಾಲಿನ ಪದವಿ ಪರೀಕ್ಷೆಗಳು ಜುಲೈ 22ರಿಂದ ಆರಂಭವಾಗಲಿದೆ. ಆದರೆ ದಾವಣಗೆರೆಯಲ್ಲಿ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಇದ್ದರೂ ಪರೀಕ್ಷಾ ಕೇಂದ್ರ ಮಾತ್ರ ಶಿವಮೊಗ್ಗ ಹಾಗೂ ಧಾರವಾಡ ಜಿಲ್ಲೆಯಲ್ಲಿದೆ. ಇದರಿಂದ ಈ ಭಾಗದ ವಿದ್ಯಾರ್ಥಿಗಳು ತೊಂದರೆ ಎದುರಿಸುವಂತಾಗಿದೆ.

ಇಲ್ಲಿನ ಪ್ರಾದೇಶಿಕ ಕೇಂದ್ರಕ್ಕೆ ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆ ಒಳಪಡುತ್ತದೆ. ಈ ಸಾಲಿನ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ದೂರದ ಶಿವಮೊಗ್ಗ ಇಲ್ಲವೇ ಧಾರವಾಡಕ್ಕೆ ಹೋಗುವ ಸ್ಥಿತಿ ಎದುರಾಗಿದೆ. ಪರೀಕ್ಷೆಗಳು ಜುಲೈ 22ರಿಂದ ಆಗಸ್ಟ್ 25ರವರೆಗೆ ನಡೆಯಲಿವೆ. ಎಲ್ಲ ದಿನವೂ ವಿದ್ಯಾರ್ಥಿಗಳು ಇಲ್ಲಿಗೆ ಓಡಾಡುವಂತಾಗಿದೆ. ಇದರಿಂದ ಪ್ರಯಾಣ ವೆಚ್ಚವೂ ಹೆಚ್ಚು. ಅಲ್ಲದೇ ನಿಗದಿತ ಸಮಯಕ್ಕೆ ಪರೀಕ್ಷೆಗೆ ಹಾಜರಾಗಲು ಆಗುವುದಿಲ್ಲ ಎಂಬುದು ವಿದ್ಯಾರ್ಥಿಗಳ ಅಳಲು.

ಉನ್ನತ ಶಿಕ್ಷಣದ ಕನಸು ಹೊತ್ತು ಮುಕ್ತ ವಿವಿಯಲ್ಲಿ ವಿವಿಧ ಕೋರ್ಸ್‌ಗಳಿಗೆ ದಾಖಲಾಗುವವರ ಸಂಖ್ಯೆ ಹೆಚ್ಚು. ಇಲ್ಲಿ ಸರ್ಕಾರಿ ನೌಕರರು, ಗೃಹಿಣಿಯರು, ವಿದ್ಯಾರ್ಥಿಗಳು ಸೇರಿ ಹಲವರು ದಾಖಲಾಗಿದ್ದಾರೆ. ಪ್ರತಿದಿನ ದೂರದ ಶಿವಮೊಗ್ಗ, ಧಾರವಾಡಕ್ಕೆ ಹೋಗುವುದು ಕಷ್ಟ ಎಂಬುದು ವಿದ್ಯಾರ್ಥಿಗಳ ದೂರು.

‘ಬೆಳಿಗ್ಗೆ ಹಾಗೂ ಮಧ್ಯಾಹ್ನ ಪರೀಕ್ಷೆ ಇರುವುದರಿಂದ ಅಲ್ಲಿಗೆ ಹೋಗಿ ಬರುವುದಕ್ಕೆ ತೊಂದರೆಯಾಗುತ್ತದೆ. ಅಲ್ಲಿ ತಂಗಲು ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಇದೆಲ್ಲವೂ ಬಡ ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ. ಇಲ್ಲಿ ಪ್ರಾದೇಶಿಕ ಕೇಂದ್ರ ಇರುವ ಕಾರಣ ಕೋರ್ಸ್‌ಗೆ ಸೇರಿದ್ದೆವು. ಆದರೆ ಈಗ ದೂರದ ಊರಿಗೆ ಹೋಗಬೇಕಾಗಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಹರಿಹರದ ಕಿರಣ್‌.

‘ಮಹಿಳೆಯರು, ಹೆಣ್ಣು ಮಕ್ಕಳೂ ಕೋರ್ಸ್‌ಗೆ ಪ್ರವೇಶ ಪಡೆದಿದ್ದೇವೆ. ಕೆಲವರಿಗೆ ಚಿಕ್ಕ ಮಕ್ಕಳಿವೆ. ಹೀಗಿದ್ದಾಗ ದೂರದ ಪ್ರದೇಶಗಳಿಗೆ ಹೋಗಿ ಬರುವುದು ಕಷ್ಟ. ಮಧ್ಯಾಹ್ನದ ಪರೀಕ್ಷೆ ಬರೆದು ಮನೆ ತಲುಪುವುದು ರಾತ್ರಿಯಾಗುತ್ತದೆ. ಏನು ಮಾಡುವುದು ತೋಚದಾಗಿದೆ’ ಎಂದು ಗೃಹಿಣಿ ಸಿಂಚನಾ ಹೇಳಿದರು.

ಮೂರು ಜಿಲ್ಲೆಗೆ ಒಳಪಡುವ ಪ್ರಾದೇಶಿಕ ಕೇಂದ್ರ ಇದ್ದರೂ ಇಲ್ಲಿ ಪರೀಕ್ಷಾ ಕೇಂದ್ರ ಇಲ್ಲದಿರುವುದು ಸರಿಯಲ್ಲ. ರೆಗ್ಯುಲರ್‌ ಪದ್ಧತಿಯಲ್ಲಿ ಶಿಕ್ಷಣ ಪಡೆಯಲು ಆಗದ ಕಾರಣ ಮುಕ್ತ ವಿ.ವಿಗೆ ಸೇರುವವರೇ ಹೆಚ್ಚು. ಹೀಗಿದ್ದರೂ ಇಲ್ಲಿ ಕೇಂದ್ರ ತೆರೆಯದಿರುವುದು ಸರಿಯಲ್ಲ. ಈ ಬಗ್ಗೆ ಕುಲಪತಿಗಳು ಗಮನಹರಿಸಬೇಕು ಎಂಬುದು ವಿದ್ಯಾರ್ಥಿಗಳ ಒತ್ತಾಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.