ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ವಿಳಂಬಕ್ಕೆ ಸಿರಿಗೆರೆ ಶ್ರೀ ಅಸಮಾಧಾನ

ಸಿರಿಗೆರೆ ಮಠದಲ್ಲಿ 57 ಕೆರೆ ಏತನೀರಾವರಿ ಕಾಮಗಾರಿ ಪ್ರತಿಪರಿಶೀಲನಾ ಸಭೆ
Published 1 ಜುಲೈ 2023, 8:08 IST
Last Updated 1 ಜುಲೈ 2023, 8:08 IST
ಅಕ್ಷರ ಗಾತ್ರ

ಜಗಳೂರು: ತುಂಗಭಧ್ರಾ ನದಿಯಿಂದ ಜಗಳೂರು ತಾಲ್ಲೂಕಿನ 57 ಕೆರೆ ತುಂಬಿಸುವ ಕಾಮಗಾರಿಯ ಪ್ರಸ್ತುತ ಸ್ಥಿತಿಗತಿ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ವಾಸ್ತವಿಕ ವರದಿ ಸಲ್ಲಿಸಬೇಕು ಎಂದು ಸಿರಿಗೆರೆ ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸೂಚಿಸಿದರು.

ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಬೃಹನ್ಮಠದಲ್ಲಿ ಶುಕ್ರವಾರ ನಡೆದ 57 ಕೆರೆ ತುಂಬಿಸುವ ಯೋಜನೆಗಳ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘6 ವರ್ಷಗಳ‌ ಹಿಂದೆ ಪ್ರಾರಂಭವಾದ 57 ಕೆರೆ ತುಂಬಿಸುವ ಯೋಜನೆ ಪೈಪ್‌ಲೈನ್ ಕಾಮಗಾರಿ ವಿಳಂಬವಾಗಿದೆ. ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಕೊನೆಯಲ್ಲಿ ಆರಂಭವಾಗಿದ್ದರೂ ತ್ವರಿತಗತಿಯಲ್ಲಿ ಕಾಮಗಾರಿ ನಡೆದು ಮುಕ್ತಾಯದ ಹಂತದಲ್ಲಿದೆ. ಕೂಡಲೇ ಅಧಿಕಾರಿಗಳು ಗುತ್ತಿಗೆದಾರರು ಕಾಮಗಾರಿಯ ಬಗ್ಗೆ ಸಮಗ್ರವಾಗಿ ವರದಿ ತಯಾರಿಸಿ ಸಂಸದರು, ಶಾಸಕರು ಹಾಗೂ ಹಾಗೂ ಸಿರಿಗೆರೆ ನ್ಯಾಯಪೀಠಕ್ಕೆ ತಲುಪಿಸಬೇಕು’ ಎಂದು ಸೂಚನೆ ನೀಡಿದರು.

‘ತುಪ್ಪದಹಳ್ಳಿ ಕೆರೆಯಲ್ಲಿ ನೀರಿನ ಚಿಲುಮೆಯನ್ನು ಭರಮಸಾಗರ ಕೆರೆಯ ಮಾದರಿಯಲ್ಲಿ ನಿರ್ಮಾಣ ಮಾಡಬೇಕು. ಉಳಿದ ಕೆರೆಗಳಿಗೆ ಶೀಘ್ರ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸಿ. ಮಾರ್ಗಮಧ್ಯೆ ಅಡೆತಡೆಗಳು ಬಂದರೆ ಸ್ಥಳೀಯ ಶಾಸಕರ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು. ಕಾಮಗಾರಿ ವಿಳಂಬ ಮಾಡಿದರೆ ದಂಡ ಹಾಗೂ ನೋಟಿಸ್ ಜಾರಿಮಾಡಿ’ ಎಂದು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ್ ಬಸಪ್ಪ ಗುಂಗೆ ಅವರಿಗೆ ಸ್ವಾಮೀಜಿ ಸೂಚಿಸಿದರು.

‘ತುಪ್ಪದಹಳ್ಳಿ ಕೆರೆಗೆ ಪ್ರಾಯೋಗಿಕವಾಗಿ ನೀರು ಹರಿಸಿದಾಗ ಕ್ಷೇತ್ರದ ರೈತರಲ್ಲಿ ಅಪಾರ ಸಂತಸ ತಂದಿತ್ತು. ಆದರೆ, ನಂತರ ಗುತ್ತಿಗೆದಾರ ಹಾಗೂ ಎಂಜಿನಿಯರ್‌ಗಳ ನಿರ್ಲಕ್ಷ್ಯದಿಂದ ಪೈಪ್‌ಲೈನ್ ಕಾಮಗಾರಿ ವಿಳಂಬವಾಗಿದೆ. ರೈತರು ನೀರು ಹರಿಯುವ ನಿರೀಕ್ಷೆಯಲ್ಲಿ ಕಾದುಕುಳಿತಿದ್ದಾರೆ. ಜಗಳೂರು ಕೆರೆಗೆ ನೀರು ಹರಿಸಿದರೆ 30 ಕೆರೆಗಳು ಭರ್ತಿಯಾಗಲಿವೆ. ಸಬೂಬು ಹೇಳುವುದು ಬಿಟ್ಟು ಕೆಲಸಮಾಡಿ’ ಎಂದು ಶಾಸಕ ಬಿ.ದೆವೇಂದ್ರಪ್ಪ ತಾಕೀತು ಮಾಡಿದರು.

‘ತುಪ್ಪದಹಳ್ಳಿ ಕೆರೆಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಶೀಘ್ರ 11 ಕೆರೆಗಳಿಗೆ ನೀರು ಹರಿಸಲು ಸಿದ್ಧತೆ ನಡೆಸಲಾಗಿದೆ. ದೀಟೂರು ಬಳಿ ಜಾಕ್‌ವೆಲ್, ಪಂಪ್ ಹೌಸ್, ನಿಯಂತ್ರಣಾ ಕೊಠಡಿ, ಸ್ಟ್ರೀಮಿಂಗ್, ಚಟ್ನಹಳ್ಳಿ ಡಿಲೆವರಿ ಚೇಂಬರ್ ಕಾಮಗಾರಿ ಮುಕ್ತಾಯವಾಗಿದೆ. ಅಗತ್ಯ ಪೈಪ್‌ಗಳು ಪೂರೈಕೆಯಾಗಿದ್ದು, 18 ಕಿ.ಮೀ. ಪೈಪ್‌ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. 7 ಕಿ.ಮೀ. ಪೈಪ್‌ಲೈನ್ ಕಾಮಗಾರಿಗೆ 1.5 ಮೀ. ಸುತ್ತಳತೆಯ ಪೈಪ್‌ಗಳು ಪೂರೈಕೆಯಾಗಿಲ್ಲ. ವಾರದೊಳಗೆ ಸರಿಪಡಿಸಲಾಗುವುದು’ ಎಂದು ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಧನಂಜಯ್ ಮಾಹಿತಿ ನೀಡಿದರು.

‘ಜಗಳೂರು ಕೆರೆ ತುಂಬಿಸುವ ಕಾಮಗಾರಿ ಪ್ರಗತಿ ವರದಿ ಪಡೆಯಲಾಗುವುದು. ಎಲ್ಲ ಅಡಚಣೆಗಳನ್ನು ಬಗೆಹರಿಸಿಕೊಂಡು ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು. ವಿಳಂಬನೀತಿ ಅನುಸರಿಸಿದರೆ ನಿಗಮದ ನಿಯಮಾವಳಿಯಂತೆ ಗುತ್ತಿಗೆದಾರರಿಗೆ ದಂಡ ಹಾಗೂ ನೋಟಿಸ್ ಜಾರಿ ಮಾಡಲಾಗುವುದು’ ಎಂದು ಕರ್ನಾಟಕ ನೀರಾವರಿ ನಿಗಮ‌ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ್ ಬಸಪ್ಪ ಗುಂಗೆ ಎಚ್ಚರಿಕೆ ನೀಡಿದರು.

ಸಂಸದ ಜಿ.ಎಂ.ಸಿದ್ದೇಶ್ವರ, ಚನ್ನಗಿರಿ ಶಾಸಕ ಶಿವಗಂಗಾ, ಮಾಯಕೊಂಡ ಶಾಸಕ ಬಸವಂತಪ್ಪ, ಶಿವಮೊಗ್ಗ ನೀರಾವರಿ ನಿಗಮ ಮುಖ್ಯ ಎಂಜಿನಿಯರ್ ಪ್ರಶಾಂತ್, ಭದ್ರಾ ಮೇಲ್ದಂಡೆ ಇಲಾಖೆಯ ಮುಖ್ಯ ಎಂಜಿನಿಯರ್ ಶಿವಾನಂದ ಬಣಕಾರ್, ಗುತ್ತಿಗೆದಾರ ದಯಾನಂದ, ಕಾಂಗ್ರೆಸ್ ಮುಖಂಡರಾದ ಕಲ್ಲೇಶ್ ರಾಜ್ ಪಟೇಲ್, ಷಂಷೀರ್ ಅಹಮ್ಮದ್, ಓಮಣ್ಣ, ಶೇಖರಪ್ಪ, ಪ್ರಕಾಶ್ ರೆಡ್ಡಿ, ಸುಧೀರ್ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT