ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಭವನ ನಿರ್ಮಾಣ‌ಕ್ಕೆ ಸ್ಥಳ ಮೀಸಲು

ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಕುಂದುಕೊರತೆ ಸಭೆಯಲ್ಲಿ ಜಿಲ್ಲಾಧಿಕಾರಿ
Published 14 ಮಾರ್ಚ್ 2024, 7:18 IST
Last Updated 14 ಮಾರ್ಚ್ 2024, 7:18 IST
ಅಕ್ಷರ ಗಾತ್ರ

ದಾವಣಗೆರೆ: ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣವಾಗಿದ್ದರೂ ದಾವಣಗೆರೆಯಲ್ಲಿ ಬಹು ವರ್ಷಗಳಿಂದಲೂ ನಿವೇಶನದ ಸಮಸ್ಯೆಯಿಂದ ಭವನ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಪರಿಶಿಷ್ಟ ಜಾತಿ ಮುಖಂಡರ ಒಕ್ಕೊರಲಿನ ಬೇಡಿಕೆ ಇದಾಗಿದ್ದು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಸರ್ಕೀಟ್‌ ಹೌಸ್ ಪಕ್ಕದಲ್ಲಿ ಒಂದು ಎಕರೆ ಜಾಗವನ್ನು ಭವನಕ್ಕೆ ನಿರ್ಮಾಣಕ್ಕೆ ಮೀಸಲಿಡಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು.

ಬುಧವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು–ಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಿ ನಂತರ ಮಾತನಾಡಿದರು.

‘ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಗರದ ಮಧ್ಯ ಭಾಗದಲ್ಲಿ ಜಾಗ ನೀಡಬೇಕು. ಜೊತೆಗೆ ಭವನ ನಿರ್ಮಾಣ ಮಾಡದಿದ್ದಲ್ಲಿ ಹೋರಾಟ ಮಾಡಲು ಹಿಂಜರಿಯುವುದಿಲ್ಲ’ ಎಂದು ಮುಖಂಡರು ಹೇಳಿದರು.

‘ಈ ವೇಳೆ ಜಿಲ್ಲಾಧಿಕಾರಿ ನಗರದೊಳಗೆ ಒಂದು ಎಕರೆ ಸರ್ಕಾರಿ ಜಾಗ ಸಿಗದ ಕಾರಣ ಮತ್ತು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಾಣ ಮಾಡಿದರೆ ವಾಹನಗಳ ಸಂಚಾರಕ್ಕೆ ಮತ್ತು ನಗರ ಬೆಳೆಯುತ್ತಿರುವುದರಿಂದ ಸರ್ಕೀಟ್ ಹೌಸ್ ಪಕ್ಕದ ಜಾಗ ಸೂಕ್ತವಾಗಿದ್ದು, ಅಲ್ಲಿ ಒಂದು ಎಕರೆ ಜಾಗವನ್ನು ಮೀಸಲಿಡಲಾಗುತ್ತದೆ’ ಎಂದರು.

ಭಾನುವಳ್ಳಿಯಲ್ಲಿ ಪ್ರತಿಮೆ ತೆರವು ಮಾಡಿರುವ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಮುಖಂಡರು ಒತ್ತಾಯಿಸಿದರು.

‘ಈ ವಿಷಯದಲ್ಲಿ ಕಾನೂನು ಪಾಲನೆ ಮಾಡಲಾಗಿದೆ. ಅಧಿಕಾರಿಗಳು ಸಮಸ್ಯೆಯನ್ನು ಇತ್ಯರ್ಥ ಮಾಡುವಾಗ ಸಂವೇದನಾಶೀಲತೆಯಿಂದ ಕೆಲಸ ಮಾಡಿದಾಗ ಮಾತ್ರ ಸಾರ್ವಜನಿಕರ ಸಮಸ್ಯೆಗಳನ್ನು ನಿವಾರಣೆ ಮಾಡಲು ಸಾಧ್ಯ’ ಎಂದರು.

‘ಜಗಳೂರು ತಾಲ್ಲೂಕಿನ ಕೆಚ್ಚೇನಹಳ್ಳಿಯಲ್ಲಿ ಸಾಮಾಜಿಕ ಬಹಿಷ್ಕಾರ, ಅಸ್ಪೃಶ್ಯತೆ ಆಚರಣೆ ಇದೆ ಎಂದು ಪರಿಶಿಷ್ಟ ಮುಖಂಡರು ಹೇಳುತ್ತಿದ್ದು ಈಗಲೂ ಇದು ಆಚರಣೆಯಲ್ಲಿದ್ದರೆ ನಾಗರಿಕ ಸಮಾಜ ತಲೆತಗ್ಗಿಸುವಂತದ್ದಾಗಿದ್ದು ಉಪವಿಭಾಗಾಧಿಕಾರಿ ಹಾಗೂ ಡಿವೈಎಸ್‌ಪಿ ಗ್ರಾಮಕ್ಕೆ ಕಳುಹಿಸಿ ತನಿಖೆ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ.ಇಟ್ನಾಳ್ ಮಾತನಾಡಿ, ‘ಗ್ರಾಮಗಳಲ್ಲಿ ಆಗಬೇಕಾದ ಕಾಮಗಾರಿಗಳು, ಅಂಗನವಾಡಿ ಕಳಪೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಕರ್ತವ್ಯಲೋಪದ ಬಗ್ಗೆ ತಿಳಿಸಿದ್ದು ಕ್ರಮ ಕೈಗೊಳ್ಳಲಾಗುತ್ತದೆ. ಕೆಲವು ಗ್ರಾಮಗಳಲ್ಲಿ ನಿವೇಶನ, ಕುಡಿಯುವ ನೀರಿನ ಪೂರೈಕೆ ಬಗ್ಗೆ ತುರ್ತು ಕ್ರಮ ಜರುಗಿಸಲಾಗುತ್ತದೆ’ ಎಂದರು.

ನ್ಯಾಮತಿ ತಾಲ್ಲೂಕಿನ ವೃದ್ಧೆ ಜಯಮ್ಮ ‘ನನ್ನ ಮಕ್ಕಳು ನನ್ನ ಜಮೀನಿನ ಎಲ್ಲಾ ದಾಖಲೆಗಳನ್ನು ಪಡೆದು ಮನೆಯಿಂದ ಹೊರಹಾಕಿದ್ದಾರೆ. ಇದರಿಂದ ನಾನು ಬೇರೆಯವರ ಮನೆ ಬಾಗಿಲಲ್ಲಿ ಮತ್ತು ದೇವಸ್ಥಾನದಲ್ಲಿ ವಾಸಿಸುವ ಸ್ಥಿತಿ ಬಂದಿದೆ ಎಂದರು.

‘ಹಿರಿಯ ನಾಗರಿಕರ ಕೋರ್ಟ್ ಎ.ಸಿ. ಅಧ್ಯಕ್ಷತೆಯಲ್ಲಿ ನಡೆಸಲಿದ್ದು, ನಾಳೆಯೇ ಕೋರ್ಟ್ ನಡೆಸುವ ಮೂಲಕ ಜಯಮ್ಮನವರಿಗೆ ನ್ಯಾಯ ಒದಗಿಸಿಕೊಡುತ್ತೇನೆ’ ಎಂದು ಹೊನ್ನಾಳಿ ಉಪವಿಭಾಗಾಧಿಕಾರಿ ಅಭಿಷೇಕ್ ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ್ ಎಂ.ಸಂತೋಷ್, ಸಿಪಿಒ ಮಲ್ಲನಾಯ್ಕ್, ದಾವಣಗೆರೆ ಉಪವಿಭಾಗಾಧಿಕಾರಿ ದುರ್ಗಾಶ್ರೀ, ಪಾಲಿಕೆ ಆಯುಕ್ತೆ ರೇಣುಕಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT