ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ರೆಂಟಿಸ್‌ಗೆ ದೊರೆಯದ ಅನುಮತಿ: ವಿದ್ಯಾರ್ಥಿಗಳು ಅತಂತ್ರ

ಐಟಿಐ: ಆರು ಹೊಸ ಕೋರ್ಸ್; ₹ 4,600 ಕೋಟಿ ಅನುದಾನದ ಯೋಜನೆ
Published 14 ಮಾರ್ಚ್ 2024, 0:06 IST
Last Updated 14 ಮಾರ್ಚ್ 2024, 0:06 IST
ಅಕ್ಷರ ಗಾತ್ರ

ಹರಿಹರ: ರಾಜ್ಯದಲ್ಲಿರುವ 150 ಉನ್ನತೀಕರಿಸಿದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ (ಐಟಿಐ) ಉದ್ಯೋಗಾಧಾರಿತ ಹೊಸ ಕೋರ್ಸ್‌ ಅಭ್ಯಸಿಸಿರುವ ವಿದ್ಯಾರ್ಥಿಗಳಿಗೆ ಕೋರ್ಸ್‌ ನಂತರ ಕಡ್ಡಾಯವಾಗಿರುವ ಅಪ್ರೆಂಟಿಸ್‌ (ಪ್ರಾಯೋಗಿಕ ತರಬೇತಿ)ಗೆ ಅನುಮೋದನೆ ಸಿಗದ್ದರಿಂದ ಅವರ ಭವಿಷ್ಯ ಅತಂತ್ರವಾಗಿದೆ.

2021ರಲ್ಲಿ ರಾಜ್ಯದ 258 ಸರ್ಕಾರಿ ಐಟಿಐಗಳ ಪೈಕಿ 150 ಐಟಿಐಗಳನ್ನು ಟಾಟಾ ಟೆಕ್ನಾಲಜೀಸ್ ಸಂಸ್ಥೆ ಸಹಯೋಗದಲ್ಲಿ ಪ್ರಚಲಿತ ಉದ್ಯೋಗಾಧಾರಿತವಾದ ‘ಅಡ್ವಾನ್ಸ್ ಸಿಎನ್‌ಸಿ’, ‘ಮೋಟಾರ್ ಎಲೆಕ್ಟ್ರಿಕಲ್ ವೆಹಿಕಲ್’, ‘ಇಂಡಸ್ಟ್ರಿಯಲ್ ರೊಬೊಟಿಕ್ಸ್’, ‘ಮೆನ್ಯುಫ್ಯಾಕ್ಚರಿಂಗ್ ಪ್ರೊಸೆಸ್ ಕಂಟ್ರೋಲ್’, ‘ಬೇಸಿಕ್ ಡಿಸೈನ್’, ‘ಆರ್ಟಿಜನ್‌ ವೈರಿಂಗ್’  ಎಂಬ ನೂತನ ಕೋರ್ಸ್‌ ಆರಂಭಿಸಲಾಗಿದೆ.

ಈ ಸಂಸ್ಥೆಗಳಲ್ಲಿದ್ದ ಸಾಂಪ್ರದಾಯಿಕ ಕೋರ್ಸ್‌ಗಳೊಂದಿಗೆ ಈ ಹೊಸ ಕೋರ್ಸ್‌ಗಳಿಗೆ 2021ನೇ ಸಾಲಿನಿಂದ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ.

ಸಾಮಾನ್ಯವಾಗಿ ಬಹುತೇಕ ಐಟಿಐ ಕೋರ್ಸ್ ಪಾಸಾದ ವಿದ್ಯಾರ್ಥಿಗಳಿಗೆ ಕನಿಷ್ಠ ಒಂದು ವರ್ಷ ಅಪ್ರೆಂಟಿಸ್‌ಗಾಗಿ ವಿವಿಧ ಕಂಪನಿಗಳಲ್ಲಿ ಶಿಷ್ಯವೇತನದೊಂದಿಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಅಪ್ರೆಂಟಿಸ್‌ ತರಬೇತಿಯ ನಂತರವಷ್ಟೇ ಐಟಿಐ ಕೋರ್ಸ್ ಪರಿಪೂರ್ಣವಾಗಲಿದೆ.

ಅಪ್ರೆಂಟಿಸ್‌ ಪೊರೈಸಿದ ವಿದ್ಯಾರ್ಥಿ ಆಸಕ್ತಿ ಇದ್ದರೆ ಪಾಲಿಟೆಕ್ನಿಕ್‌ನಲ್ಲಿ ಶಿಕ್ಷಣ ಮುಂದುವರಿಸಬಹುದು. ಅಥವಾ ಉದ್ಯೋಗಕ್ಕೆ ಸೇರಬಹುದಾಗಿದೆ. ಆದರೆ, ಸರ್ಕಾರ ಆರಂಭಿಸಿರುವ ಈ ಆರು ಕೋರ್ಸ್‌ಗಳಲ್ಲಿ ಪಾಸಾದ ವಿದ್ಯಾರ್ಥಿಗಳು ಅಪ್ರೆಂಟಿಸ್‌ ಮಾಡಲಾಗದೆ ಮುಂದಿನ ಶಿಕ್ಷಣ ಅಥವಾ ಉದ್ಯೋಗಕ್ಕೆ ಹೋಗಲಾಗದ ಸ್ಥಿತಿಗೆ ಸಿಲುಕಿದ್ದಾರೆ.

ಈ ಕೋರ್ಸ್‌ಗಳಲ್ಲಿ ಕೆಲವು ಒಂದು ವರ್ಷ, ಇನ್ನೂ ಕೆಲವು ಎರಡು ವರ್ಷ ಅವಧಿಯದ್ದಾಗಿವೆ. ಈಚೆಗಷ್ಟೇ ರಾಜ್ಯದ ಒಟ್ಟು 150 ಸರ್ಕಾರಿ ಐಟಿಐ ಕಾಲೇಜುಗಳಲ್ಲಿ 4,500 ವಿದ್ಯಾರ್ಥಿಗಳ ಮೊದಲ ಬ್ಯಾಚ್ ಹೊರ ಬಂದಿದೆ. ಅವರು ಅಪ್ರೆಂಟಿಸ್‌ ತರಬೇತಿಗೆ ಸೇರಿಕೊಳ್ಳಲು ಸಿದ್ಧರಿದ್ದಾರೆ. ಆದರೆ, ದೆಹಲಿಯಲ್ಲಿರುವ ಅಪ್ರೆಂಟಿಸ್‌ ಆಯುಕ್ತಾಲಯದ ಆದೇಶವಿಲ್ಲದ್ದರಿಂದ ವಿವಿಧ ಕೈಗಾರಿಕೆಗಳಲ್ಲಿ ತರಬೇತಿಗೆ ಅವಕಾಶ ದೊರೆಯುತ್ತಿಲ್ಲ ಎಂದು ಅನೇಕ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಭವಿಷ್ಯದಲ್ಲಿ ಯುವಜನತೆಗೆ ಮತ್ತಷ್ಟು ಔದ್ಯೋಗಿಕ ಅವಕಾಶ ನೀಡುವ ನಿಟ್ಟಿನಲ್ಲಿ ಐಟಿಐ ಸಂಸ್ಥೆಗಳನ್ನು ಬಲಪಡಿಸಿ, ನಿಪುಣ ತಂತ್ರಜ್ಞರನ್ನು ರೂಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಟಾಟಾ ಟೆಕ್ನಾಲಜೀಸ್ ಸಂಸ್ಥೆಯ ಸಹಯೋಗದೊಂದಿಗೆ ಒಟ್ಟು ₹ 4,600 ಕೋಟಿ ಅನುದಾನದಲ್ಲಿ ಹೊಸ ಕೋರ್ಸ್‌ ಆರಂಭಿಸಿದೆ. ಈ ಅನುದಾನದ ಉದ್ದೇಶ ಈಡೇರಬೇಕೆಂದರೆ ಕೂಡಲೇ ಈ ಕೋರ್ಸ್‌ ಪೊರೈಸಿದ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್‌ ಪಡೆಯಲು ಸಂಬಂಧಿತ ಇಲಾಖೆಯವರು ಆದೇಶ ಹೊರಡಿಸಬೇಕಿದೆ ಎಂಬ ಆಗ್ರಹ ವಿದ್ಯಾರ್ಥಿ ವಲಯದಿಂದ ಕೇಳಿಬಂದಿದೆ.

ಹೊಸ ಕೋರ್ಸ್‌ಗಳು ಉದ್ಯೋಗ ಆಧಾರಿತವಾಗಿವೆ. ದೆಹಲಿಯಲ್ಲಿರುವ ಆಯುಕ್ತಾಲಯಕ್ಕೆ ಅಪ್ರೆಂಟಿಸ್‌ಗೆ ಅನುಮತಿ ನೀಡಲು ಪತ್ರ ಬರೆಯಲಾಗಿದ್ದು ಅನುಮತಿ ಶೀಘ್ರವೇ ಸಿಗುವ ಸಾಧ್ಯತೆ ಇದೆ.
ಲಕ್ಷ್ಮಿನಾರಾಯಣ ರಾಜು ಸಹಾಯಕ ನಿರ್ದೇಶಕ ಕೈಗಾರಿಕ ಮತ್ತು ತರಬೇತಿ ಇಲಾಖೆ
ಟಾಟಾ ಟೆಕ್ನಾಲಜೀಸ್ ಸಹಯೋಗದಲ್ಲಿ ಐಟಿಐ ಕಾಲೇಜುಗಳಲ್ಲಿ ಹೊಸ ಕೋರ್ಸ್ ಅಭ್ಯಸಿಸಿರುವ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್‌ ಪಡೆಯಲು ಆದಷ್ಟು ಬೇಗ ಅನುವು ಮಾಡಿಕೊಡುವ ಮೂಲಕ ವಿದ್ಯಾರ್ಥಿಗಳ ಆತಂಕ ದೂರ ಮಾಡಬೇಕಿದೆ -
ಜಯಪ್ಪ ಎಂ. ಪ್ರಾಚಾರ್ಯರು ಸರ್ಕಾರಿ ಐಟಿಐ ಹರಿಹರ
ಕೆಲವೇ ದಿನಗಳಲ್ಲಿ 2 ವರ್ಷ ಅವಧಿಯ ಅಡ್ವಾನ್ಸ್ ಸಿಎನ್‌ಸಿ ಕೋರ್ಸ್ ಮುಗಿಸಲಿದ್ದೇನೆ. ನಂತರದ ಅಪ್ರೆಂಟಿಸ್‌ ಇನ್ನೂ ಆದೇಶ ಹೊರಡಿಸಿಲ್ಲ. ಇದು ನಮ್ಮ ಚಿಂತೆ ಹೆಚ್ಚಿಸಿದೆ
-ಗಣೇಶ್ ಅಡ್ವಾನ್ಸ್ ಸಿಎನ್‌ಸಿ 2ನೇ ವರ್ಷದ ಐಟಿಐ ವಿದ್ಯಾರ್ಥಿ ಹರಿಹರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT