ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಳೆಕೆರೆ: ಅದ್ದೂರಿ ರಥೋತ್ಸವ

ಹಳೆಯದಾದ ತೇರು; ಹೊಸ ರಥ ನಿರ್ಮಾಣಕ್ಕೆ ಭಕ್ತರ ಆಗ್ರಹ
Published 13 ಮಾರ್ಚ್ 2024, 5:18 IST
Last Updated 13 ಮಾರ್ಚ್ 2024, 5:18 IST
ಅಕ್ಷರ ಗಾತ್ರ

ತ್ಯಾವಣಿಗೆ: ಸಮೀಪದ ಇತಿಹಾಸ ಪ್ರಸಿದ್ಧ ಸೂಳೆಕೆರೆ ಸಿದ್ದೇಶ್ವರ ದೇವಸ್ಥಾನ ರಥೋತ್ಸವ ತಡವಾಗಿಯಾದರೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಅದ್ದೂರಿಯಾಗಿ ನೇರವೇರಿತು.

‘ತೇರು ಹಳೆಯದಾದ್ದರಿಂದ ಕಳೆದಬಾರಿಯಂತೆ ಮೂರು ಹೆಜ್ಜೆ ಮಾತ್ರ ಚಲಿಸುವುದು’ ಎಂದು ಮೈಕ್‌ನಲ್ಲಿ ಹೇಳಿದಾಗ, ‘ಮೂರು ವರ್ಷಗಳಿಂದ ಇದನ್ನೇ ಹೇಳುತ್ತಿದ್ದು, ಇನ್ನು ಯಾವಾಗ ರಥ ನಿರ್ಮಾಣ ಮಾಡುತ್ತೀರಿ. ಕಳೆದ ಬಾರಿಯ ಹಣ ಏನಾಯಿತು’ ಎಂದು ಭಕ್ತರು ಆಡಳಿತಾಧಿಕಾರಿ ಚಂದ್ರಪ್ಪ ಡಿ.ಎಸ್. ಇವರ ಮೇಲೆ ಮುಗಿಬಿದ್ದ ಪ್ರಸಂಗ ನಡೆಯಿತು.

ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದ್ದು, ತಹಶೀಲ್ದಾರ್ ಸ್ಥಳಕ್ಕೆ ಆಗಮಿಸುವವರೆಗೂ ರಥೋತ್ಸವ ನಡೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

‘ಸ್ಥಳಕ್ಕೆ ತಹಶೀಲ್ದಾರ್ ಬರಲಿದ್ದಾರೆ. ಈಗ ಸಮಯವಾಗುತ್ತಿದೆ, ತೇರಿನ ಮೇಲಿನ ಹಾರ, ಬಾವುಟಗಳ ಹರಾಜು ಪ್ರಕ್ರಿಯೆ ನಡೆಸೋಣ’ ಎಂದು ಅರ್ಚಕರು ಹೇಳಿದಾಗ ರೊಚ್ಚಿಗೆದ್ದ ಭಕ್ತ ಸಮೂಹ ಹರಾಜು ಪ್ರಕ್ರಿಯೆ ನಡೆಸದಂತೆ ಘೋಷಣೆ ಕೂಗಿದರು.

ಸಮಯ 10 ಗಂಟೆಯಾದ್ದರಿಂದ ‘ತೇರು ಎಳೆಯೋಣ, ಮುರಿದರೆ ಹೊಸ ರಥ ನಿರ್ಮಾಣ ಮಾಡಿಕೊಡುವರು’ ಎಂದು ಘೋಷಣೆ ಕೂಗುತ್ತ ಪ್ರತಿವರ್ಷದಂತೆ ಭಕ್ತರು ಹರ್ಷೋದ್ಗಾರದಿಂದ ರಥ ಎಳೆದರು. ತೇರಿನ ಗಾಲಿಗೆ ಕಾಯಿ ಒಡೆದರು. ರಥಕ್ಕೆ ಬಾಳೆ ಹಣ್ಣು, ಮಂಡಕ್ಕಿ, ಮೆಣಸಿನಕಾಳು ಎರಚಿ ಭಕ್ತಿ ಸರ್ಮಪಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಅರ್ಚಕರಾದ ಟಿ.ರುದ್ರಪ್ಪ, ಪ್ರಸಾದ ಸೇವಾ ಸಮಿತಿಯ ಬಿ.ಎಂ.ರೇವಣಸಿದ್ದಪ್ಪ, ಪ್ರಸನ್ನ ಇತರರಿದ್ದರು.

‘ಹೊಸ ರಥ ನಿರ್ಮಿಸಿ’

‘ಅನಾದಿಕಾಲದಿಂದ ದೊಡ್ಡಬಾತಿ ಗ್ರಾಮದ ಗ್ರಾಮಸ್ಥರು ತಮ್ಮ ಊರಿನ  ಹಬ್ಬಕ್ಕಿಂತ ಈ ಊರಿನ ರಥೋತ್ಸವವನ್ನು ಇಲ್ಲಿಗೆ ಬಂದು ಸಡಗರದಿಂದ ಆಚರಿಸುವುದು ಸಂಪ್ರದಾಯ. ರಥೋತ್ಸವ ನಡೆಯದಿರುವುದು ನಮ್ಮ ಧಾರ್ಮಿಕ ಭಾವನೆಗಳಿಗೆ ನೊವುಂಟು ಮಾಡಿದೆ. ಕೂಡಲೇ ಹೊಸ ತೇರು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ’ ಎಂದು ಸ್ಥಳಕ್ಕೆ ಬಂದ ತಹಶೀಲ್ದಾರ್ ಎರ‍್ರಿಸ್ವಾಮಿ ಅವರಿಗೆ ಬಾತಿ ದೊಗ್ಗಳ್ಳಿ ವೀರೇಶ್ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ‘ಈ ಬಗ್ಗೆ ಲಿಖಿತವಾಗಿ ಮನವಿ ನೀಡಿ. ಹೊಸ ರಥ ನಿರ್ಮಾಣಕ್ಕೆ ಎಲ್ಲ ಸಹಕಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT