ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಘಾಟನೆಗೆ ಸಿದ್ಧವಾದ ಈಜುಗೊಳ

ದೇವರಾಜ ಅರಸ್‌ ಬಡಾವಣೆಯ ಕೊಳಕ್ಕೆ ನವೀಕರಣ ಭಾಗ್ಯ
Last Updated 23 ಸೆಪ್ಟೆಂಬರ್ 2022, 5:34 IST
ಅಕ್ಷರ ಗಾತ್ರ

ದಾವಣಗೆರೆ:ಇಲ್ಲಿನ ದೇವರಾಜ ಅರಸ್‌ ಬಡಾವಣೆಯಲ್ಲಿನ ಈಜುಗೊಳ ನವೀಕರಣಗೊಂಡಿದ್ದು, ಉದ್ಘಾಟನೆಗೆ ಸಿದ್ಧಗೊಂಡಿದೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ₹ 5 ಕೋಟಿ ವೆಚ್ಚದಲ್ಲಿ ನವೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ಪುಟ್ಟ ಮಕ್ಕಳಿಗಾಗಿ ಮೀಸಲಾಗಿದ್ದ ಈ ಕೊಳವನ್ನು ಅಭಿವೃದ್ಧಿ ಪಡಿಸಲಾಗಿದ್ದು, ಮೇಲ್ಭಾಗದಲ್ಲಿ 3 ಅಡಿಯಿಂದ ಮುಂದುವರಿದಂತೆ 18 ಅಡಿಯವರೆಗೆ ಆಳ ಇದೆ. 50 ಅಡಿ ಉದ್ದ, 25 ಅಡಿ ಅಗಲದ ಕೊಳವನ್ನು ಸಿದ್ಧಪಡಿಸಲಾಗಿದೆ.

ನವೀಕರಣಗೊಂಡ ಈಜುಗೊಳ ಗಮನ ಸೆಳೆಯುತ್ತಿದ್ದು, ಇನ್ನೊಂದು ವಾರದಲ್ಲಿ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಗೆ ಹಸ್ತಾಂತರಗೊಳ್ಳಲಿದೆ. ಬಳಿಕ ಉದ್ಘಾಟನೆಯಾಗಲಿದೆ.

ನಗರದ ಎಂ.ಸಿ.ಸಿ ‘ಬಿ’ ಬ್ಲಾಕ್‌ ಹಾಗೂ ದೇವರಾಜ ಅರಸ್‌ ಬಡಾವಣೆಯಲ್ಲಿ ಎರಡು ಈಜುಗೊಳಗಳಿದ್ದರೂ ಉಪಯೋಗ ಆಗುತ್ತಿಲ್ಲ. ಯಾವಾಗಲೂ ಮುಚ್ಚಿರುತ್ತದೆ ಎಂಬ ಆರೋಪ ಇತ್ತು.

ದೇವರಾಜ ಅರಸ್‌ ಬಡಾವಣೆಯಲ್ಲಿ ಮೊದಲು ಇದ್ದ ಈಜುಗೊಳದಲ್ಲಿ ಸೋರಿಕೆಯಾಗುತ್ತಿದ್ದು, ನೀರು ಸಂಗ್ರಹ ಆಗದಿರುವುದು ಸೇರಿ ಕೆಲ ತಾಂತ್ರಿಕ ಸಮಸ್ಯೆ ಇತ್ತು. ಹೀಗಾಗಿ ಈಜುಗೊಳ ಬಹುತೇಕ ಬಾಗಿಲು ಹಾಕಿರುತ್ತಿತ್ತು.

ಈಜುಕೊಳ ಇಲ್ಲದೇ ಅಭ್ಯಾಸಕ್ಕೆ ತೊಂದರೆಯಾಗುತ್ತದೆ. ದುರಸ್ತಿ ಮಾಡಬೇಕು ಎಂದು ಕ್ರೀಡಾಪಟುಗಳು, ಕ್ರೀಡಾಪ್ರೇಮಿಗಳು
ಒತ್ತಡ ಹೇರಿದ್ದರು.

ಈ ಕಾರಣಸ್ಮಾರ್ಟ್‌ ಸಿಟಿ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿತ್ತು.

ಪ್ರೇಕ್ಷಕರ ಗ್ಯಾಲರಿ, ನೆಲಕ್ಕೆ ಟೈಲ್ಸ್‌ ಸೇರಿ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ. ಪ್ರೇಕ್ಷಕರಗ್ಯಾಲರಿಗೆ ಸೋಲಾರ್‌ ಅಳವಡಿಸಲಾಗುತ್ತಿದೆ.
ಅಲ್ಲಿ ಉತ್ಪಾದಿಸಲಾಗುವ ವಿದ್ಯುತ್ತನ್ನು ಅಲ್ಲೇ ಬಳಸುವ ಯೋಜನೆ ರೂಪಿಸಲಾಗಿರುವುದು ವಿಶೇಷ.

ನೀರು ಸೋರಿಕೆಗೆ ತಡೆ, ಕೊಳದ ಸುತ್ತಲಿನ ಪ್ರದೇಶಕ್ಕೆ ಟೈಲ್ಸ್‌ ಅಳವಡಿಕೆ, ವಾಕಿಂಗ್‌ ಪಾಥ್‌ ನಿರ್ಮಾಣ, ಸ್ನಾನಗೃಹದ ನವೀಕರಣ,
ಕಟ್ಟಡಕ್ಕೆ ಬಣ್ಣ, ನೀರು ಪೂರೈಕೆ ಪಂಪ್‌ಗಳ ದುರಸ್ತಿ ಸೇರಿ ಹಲವು ಕಾಮಗಾರಿ ಕೈಗೊಳ್ಳಲಾಗಿದೆ.

ಸ್ಪರ್ಧೆಗಳು ನಡೆಯುವ ಸಮಯದಲ್ಲಿ ಸುತ್ತ 500 ಮಂದಿ ಕುಳಿತುಕೊಳ್ಳುವ ಪ್ರೇಕ್ಷಕರ ಗ್ಯಾಲರಿ ಇದೆ. ಸ್ಪರ್ಧೆಗಳ ಉದ್ಘಾಟನೆಯ ಕಿರು ಕಾರ್ಯಕ್ರಮ ನಡೆಸಲೂ ಇಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ. ಸ್ಪರ್ಧೆ ಅಲ್ಲದೆ ನಿತ್ಯ ಈಜು ಅಭ್ಯಾಸ, ಈಜು ಕಲಿಯಲು ಬರುವವರಿಗೆ ಇಲ್ಲಿ ಅವಕಾಶ ಇದೆ.

‘ಪ್ರೇಕ್ಷಕರ ಗ್ಯಾಲರಿ ಸಿದ್ಧಗೊಂಡಿದೆ. 40 ಕಿಲೋ ವ್ಯಾಟ್‌ನ ಸೋಲಾರ್‌ ಪ್ಯಾನೆಲ್‌ ಅಳವಡಿಸಲಾಗಿದೆ. ಇದರಿಂದ ಕೊಳಕ್ಕೆ ಅಗತ್ಯವಾದ ವಿದ್ಯುತ್‌ ಉತ್ಪಾದನೆಗೆ ಅನುಕೂಲವಾಗಲಿದೆ.ಸೋರಿಕೆಯಾಗದಂತೆ ನಿರೋಧಕಗಳನ್ನು ಅಳವಡಿಸಲಾಗಿದೆ ನೀರಿನ ಹಳೆ ಫಿಲ್ಟರ್‌ಗಳನ್ನು ತೆಗೆದು ಹೊಸವನ್ನು ಅಳವಡಿಸಲಾಗಿದೆ’ ಎಂದು ಸ್ಮಾರ್ಟ್‌ ಸಿಟಿ ಎಂಜಿನಿಯರ್‌ ಭರತ್‌ ‘ಪ್ರಜಾವಾಣಿ‘ಗೆ ತಿಳಿಸಿದರು.

ಕೊಳದ ನೀರು ತೆಗೆದು ಒಣಗಿಸಿ ಹೊಸ ನೀರು ಪೂರೈಸಬೇಕು. ಇಷ್ಟು ದಿನ ಮಳೆ ಬರುತ್ತಿದ್ದ ಕಾರಣ ಸಮಸ್ಯೆಯಾಗಿತ್ತು. ಈಗ ಎಲ್ಲ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ನೀರು ತುಂಬಿಸುವ ಕಾರ್ಯವೂ ನಡೆದಿದೆ. ವಾರದಲ್ಲಿ ಕ್ರೀಡಾ ಇಲಾಖೆಗೆ ಹಸ್ತಾಂತರಗೊಳ್ಳಲಿದೆ ಎಂದು ಅವರು ಹೇಳಿದರು.

‘ನಿರ್ವಹಣೆಗೆ ಟೆಂಡರ್‌ ಕರೆಯಲಾಗುವುದು. ಈಜುಗೊಳದ ಸಂಪೂರ್ಣ ನಿರ್ವಹಣೆ ಜವಾಬ್ದಾರಿ ಟೆಂಡರ್‌ ಪಡೆದ ಕಂಪನಿಯೇ ನಿರ್ವಹಿಸಲಿದೆ. ಶುಲ್ಕ ಮತ್ತಿತರ ವಿಷಯಗಳನ್ನು ಗುತ್ತಿಗೆ ಪಡೆದ ಕಂಪನಿಯೇ ನೋಡಿಕೊಳ್ಳಲಿದೆ’ ಎಂದುಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಸಹಾಯಕ ನಿರ್ದೇಶಕಿ ಸುಚೇತಾ ನೇವಲಗಿ ಹೇಳಿದರು.

ಬಾಲಕರು ಮತ್ತು ಬಾಲಕಿಯರು ಸೇರಿದಂತೆ ಈಜು ಅಭ್ಯಾಸ ಮಾಡಲು ಬರುವವರಿಗೆ ಪ್ರತ್ಯೇಕ ಸಮಯ ಮೀಸಲಿಡಲಾಗುವುದು. ಬೆಳಿಗ್ಗೆ, ಮಧ್ಯಾಹ್ನದಂತೆ ಪಾಳಿಯಲ್ಲಿ ಪ್ರವೇಶ ನೀಡಲಾಗುವುದು. ಈಜುಗೊಳ ಆಳ ಇರುವ ಕಾರಣ ವಯೋಮಿತಿ ನೋಡಿಕೊಂಡು ಅವಕಾಶ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ನಿರ್ವಹಣೆ ಇಲ್ಲದೇ ಮುಚ್ಚಿದ್ದ ಈಜುಕೊಳ

2001ರಲ್ಲಿ ₹ 1.61 ಕೋಟಿ ವೆಚ್ಚದಲ್ಲಿ ಈಜುಗೊಳ
ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಸುದೀರ್ಘ ಕಾಲದ ನಂತರ 2008ರಲ್ಲಿ ಈ ಕಾಮಗಾರಿ ಪೂರ್ಣಗೊಂಡಿತ್ತು. ಕರ್ನಾಟಕ ಭೂ ಸೇನಾ ನಿಗಮವು ಈ ಕೊಳವನ್ನು ನಿರ್ಮಿಸಿ ಕ್ರೀಡಾ ಇಲಾಖೆಗೆ ಹಸ್ತಾಂತರಿಸಿತ್ತು.
ಬಳಿಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಡಿ 2015ರ ವರೆಗೆ ಇಲ್ಲಿ ಈಜು ಅಭ್ಯಾಸ ನಡೆಯುತ್ತಿತ್ತು. ಬಳಿಕ ನಿರ್ವಹಣೆ ಇಲ್ಲದೇ ನಿಂತು ಹೋಗಿತ್ತು.

ನೀರಿನ ಸೋರಿಕೆ ಸೇರಿ ಹಲವು ಕಾರಣಗಳಿಂದ ಕೊಳವನ್ನು ಆಗಾಗ ಮುಚ್ಚಲಾಗುತ್ತಿತ್ತು. ಇದರಿಂದ ಕ್ರೀಡಾಪಟುಗಳು ಅಸಮಾಧಾನಗೊಂಡಿದ್ದರು. ಹಲವು ಪ್ರಯತ್ನದಿಂದ ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿ ಕೈಗೊಳ್ಳಲು ಯೋಜನೆ ರೂಪಿಸಲಾಗಿತ್ತು.

ಕೊಳಕ್ಕೆ ನೀರು ಪೂರೈಕೆ ಕೆಲಸವೂ ಆಗಿದೆ.ವಾರದಲ್ಲಿ ಬಣ್ಣ ಬಳಿಯುವುದು ಸೇರಿ ಎಲ್ಲ ಕಾಮಗಾರಿ ಮುಗಿಯಲಿದೆ.ಬಳಿಕ ಕ್ರೀಡಾ ಇಲಾಖೆಗೆ ಹಸ್ತಾಂತರಿಸಲಾಗುವುದು.

ರವೀಂದ್ರ ಮಲ್ಲಾಪುರ, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ

ಕೊಳ ಹಸ್ತಾಂತರಗೊಂಡ ಬಳಿಕ ಅದನ್ನು ಸಾರ್ವಜನಿಕರ ಬಳಕೆಗೆ ಮೀಸಲಿಡಲಾಗುವುದು. ಅದಕ್ಕೂ ಮೊದಲು ಕೊಳದ ನಿರ್ವಹಣೆಗೆ ಟೆಂಡರ್‌ ಕರೆಯಾಗುವುದು.

ಸುಚೇತಾ ನೇವಲಗಿ, ಸಹಾಯಕ ನಿರ್ದೇಶಕಿ, ಕ್ರೀಡಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT