ದಾವಣಗೆರೆ: ಡಿಎಸ್‌4 ಕಾರ್ಯಕರ್ತರಿಂದ ತಮಟೆ ಚಳವಳಿ

7
ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯ

ದಾವಣಗೆರೆ: ಡಿಎಸ್‌4 ಕಾರ್ಯಕರ್ತರಿಂದ ತಮಟೆ ಚಳವಳಿ

Published:
Updated:
Deccan Herald

ದಾವಣಗೆರೆ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ (ಡಿಎಸ್‌4) ಕಾರ್ಯಕರ್ತರು ಸೋಮವಾರ ನಗರದಲ್ಲಿ ತಮಟೆ ಚಳವಳಿ ನಡೆಸಿದರು.

ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ತಮಟೆ ಚಳವಳಿಗೆ ಚಾಲನೆ ನೀಡಲಾಯಿತು. ಕಾರ್ಯಕರ್ತರು ತಮಟೆ ಬಡಿಯುತ್ತ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.

ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಸಲ್ಲಿಸಬೇಕು. ಪರಿಶಿಷ್ಟ ಜಾತಿ ಮೀಸಲು ಪಟ್ಟಿಯಲ್ಲಿರುವ 101 ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಪ್ರಮಾಣ ಹೆಚ್ಚಿಸಿ ಎಲ್ಲ ಜಾತಿಗಳಿಗೂ ಸಮಾನವಾಗಿ ಅವಕಾಶಗಳು ಸಿಗುವಂತೆ ಮಾಡಬೇಕು.

ಎಸ್‌.ಸಿ. ಹಾಗೂ ಎಸ್‌.ಟಿ ಉಪಯೋಜನೆ ಕಾಯ್ದೆಯಂತೆ ಬಜೆಟ್‌ನಲ್ಲಿ ಮೀಸಲಿಟ್ಟ ₹ 29,000 ಕೋಟಿಯನ್ನು ಇಲಾಖಾವಾರು ಬಿಡುಗಡೆ ಮಾಡಿ ಪರಿಶಿಷ್ಟರ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ಈ ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡುವುದನ್ನು ನಿರ್ಬಂಧಿಸಬೇಕು. ಸಮಾನ ಶಿಕ್ಷಣ ನೀತಿಯನ್ನು ಜಾರಿಗೊಳಿಸಬೇಕು. ಆರೋಗ್ಯ ವ್ಯವಸ್ಥೆಯನ್ನು ರಾಷ್ಟ್ರೀಕರಣಗೊಳಿಸಬೇಕು. ಪರಿಶಿಷ್ಟ ಜಾತಿ, ವರ್ಗಗಳ ನೌಕರರ ಬಡ್ತಿ ಮೀಸಲಾತಿಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.

ನನೆಗುದಿಗೆ ಬಿದ್ದಿರುವ ಅಂಬೇಡ್ಕರ್‌ ಭವನದ ಶಂಕುಸ್ಥಾಪನೆಯನ್ನು ಕೂಡಲೇ ನೆರವೇರಿಸಬೇಕು. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ದಲಿತರಿಗೆ ಪ್ರತ್ಯೇಕ ಸ್ಮಶಾನ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಡಿಎಸ್‌4ನ ಜಿಲ್ಲಾ ಘಟಕದ ಅಧ್ಯಕ್ಷ ಹೆಗ್ಗೆರೆ ರಂಗಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಟಿ. ಬಸವರಾಜ್‌, ಜಿಲ್ಲಾ ಉಪಾಧ್ಯಕ್ಷ ಕೆ.ಸಿ. ಮೂರ್ತಿ ಬೆಳ್ಳಿಗನೂಡು, ಮುಖಂಡರಾದ ಡಾ. ಎಚ್‌. ವಿಶ್ವನಾಥ್‌, ಕಾರಿಗನೂರು ನಾಗರಾಜ್‌, ಕೆ.ಎಂ. ವಾಗೀಶಯ್ಯ, ಎಲ್‌. ಜಯಪ್ಪ, ದೀಪಕ್‌ ಕುಮಾರ್‌ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !