ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಯಕೊಂಡ: ಅಕ್ರಮ ಪಂಪ್‌ಸೆಟ್ ತೆರವು ಕಾರ್ಯಚರಣೆಗೆ ಲಾಠಿ ಹಿಡಿದ ತಹಶೀಲ್ದಾರ್

ತೋಟ ಉಳಿಸಿಕೊಳ್ಳುವಷ್ಟೇ ನೀರು ಕೊಡಿ: ರೈತರ ಬೇಡಿಕೆ
Published 26 ಮಾರ್ಚ್ 2024, 5:45 IST
Last Updated 26 ಮಾರ್ಚ್ 2024, 5:45 IST
ಅಕ್ಷರ ಗಾತ್ರ

ಮಾಯಕೊಂಡ: ಭದ್ರಾ ಕಾಲುವೆಯಲ್ಲಿ ಅಕ್ರಮವಾಗಿ ಅಳವಡಿಸಿರುವ ಪಂಪ್‌ಸೆಟ್‌ಗಳ ತೆರವು ಕಾರ್ಯಾಚರಣೆ ವೇಳೆ ಅಧಿಕಾರಿಗಳು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆದಿದೆ.

ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದರಿಂದ ತಹಶೀಲ್ದಾರ್ ಡಾ.ಅಶ್ವತ್‌ ಲಾಠಿ ಹಿಡಿದು ರೈತರನ್ನು ಚದುರಿಸಿದ ಘಟನೆ ಸಮೀಪದ ಶಂಕರನಹಳ್ಳಿ ಅಣಬೇರು ಬಳಿಯ ಭದ್ರಾ ಕಾಲುವೆ ಬಳಿ ನಡೆದಿದೆ.

ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆ ತಹಶೀಲ್ದಾರ್ ಅಶ್ವತ್, ನೀರಾವರಿ, ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ತಂಡ ಸೋಮವಾರ ಭದ್ರಾ ಕಾಲುವೆಯಲ್ಲಿ ಅಕ್ರಮವಾಗಿ ಅಳವಡಿಸಿರುವ ಅಕ್ರಮ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಲು ಮುಂದಾಗಿತ್ತು.

ಈ ವೇಳೆ ಮಾತನಾಡಿದ ಅಶ್ವತ್, ‘ನಾನು ರೈತನ‌ ಮಗ. ನಿಮ್ಮ ಕಷ್ಟ ಅರ್ಥ ಅಗುತ್ತದೆ. ಆದರೆ, ಮೇಲಧಿಕಾರಿಗಳ ಆದೇಶ ಪಾಲಿಸಬೇಕಿದೆ. ಜನರಿಗೆ ಕುಡಿಯಲು ನೀರಿಲ್ಲದೆ ಸಾಯುವಂತಾಗಿದೆ. ಅವರಿಗೆ ನೀರು ಒದಗಿಸುವ ಜವಾಬ್ದಾರಿ ಇದೆ. ಇದಕ್ಕಾಗಿ ಪಂಪ್‌ಸೆಟ್ ತೆರವುಗೊಳಿಸಿ, ಇಲ್ಲವಾದಲ್ಲಿ ಹೆಚ್ಚಿನ ಫೋರ್ಸ್ ಕರೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಸಮಯ ನಿಗದಿ ಮಾಡಿ:

ವಾರದಲ್ಲಿ 2–3 ದಿನದಂತೆ ನಮಗೆ ನೀರು ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ರೈತರು ಮನವಿ ಮಾಡಿದರು.

‘ಚನ್ನಗಿರಿ, ಭದ್ರಾವತಿ ತಾಲ್ಲೂಕಿನ ಕಾಲುವೆಯಲ್ಲಿ ರೈತರು ಸಾವಿರಾರು ಮೋಟರ್‌ಗಳನ್ನ ಅಳವಡಿಸಿಕೊಂಡು ತೋಟಗಳಿಗೆ ನೀರುಣಿಸುತ್ತಿದ್ದಾರೆ. ಅಧಿಕಾರಿಗಳು ಅವರ ಸುದ್ದಿಗೆ ಹೋಗುತ್ತಿಲ್ಲ. ಈ ಭಾಗದಲ್ಲಿನ ಕೇವಲ 130 ರಿಂದ 140 ಪಂಪ್‌ಸೆಟ್‌ಗಳನ್ನ ತೆರವುಗೊಳಿಸುವಂತೆ ಪದೇ ಪದೇ ಒತ್ತಡ ಹೇರುತ್ತಿದ್ದಾರೆ’ ಎಂದು ದೂರಿದರು.

ಆರೋಪ: ‘ಮಾತಿನ ಚಕಮಕಿ ವೇಳೆ ಕೆಲ ಕಾಲ ಗೊಂದಲ ಉಂಟಾಗಿತ್ತು. ನೀರಗಂಟಿಯನ್ನ ರೈತರು ಹೊಡೆದರು ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಇದನ್ನೇ ನಂಬಿದ ತಹಶೀಲ್ದಾರ್ ಹಾಗೂ ಅಧಿಕಾರಿಗಳು ಲಾಠಿಯಿಂದ ಹೊಡೆದು ದೌರ್ಜನ್ಯ ನಡೆಸಿದ್ದಾರೆ’ ಎಂದು ರೈತರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT