ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನ್ಯಾಯಾಧೀಶರ ವಸತಿ ಗೃಹ ಆವರಣದಲ್ಲಿ ಮಾವಿನ ಹಣ್ಣುಗಳ ಕಳವು; ಪ್ರಕರಣ ದಾಖಲು

ನ್ಯಾಯಾಧೀಶರ ವಸತಿ ಗೃಹ ಆವರಣದಲ್ಲಿರುವ ಮಾವಿನ ಮರ
Published 18 ಫೆಬ್ರುವರಿ 2024, 6:19 IST
Last Updated 18 ಫೆಬ್ರುವರಿ 2024, 6:19 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಕೆ.ಎಚ್.ಬಿ. ಕಾಲೊನಿಯಲ್ಲಿರುವ ನ್ಯಾಯಾಧೀಶರ ವಸತಿ ಗೃಹ ಆವರಣದಲ್ಲಿನ ಮಾವಿನ ಮರದಲ್ಲಿನ ಹಣ್ಣುಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.

‘ಫೆಬ್ರುವರಿ 13 ರಂದು ಮಧ್ಯಾಹ್ನ 12 ರಿಂದ 1 ಗಂಟೆ ಸಮಯದಲ್ಲಿ ಯಾರೋ ಇಬ್ಬರು ಬೈಕ್‌ನಲ್ಲಿ ಬಂದು, ವಸತಿ ಗೃಹದ ಕಾಂಪೌಂಡ್‌ನೊಳಗೆ ಅಕ್ರಮ ಪ್ರವೇಶ ಮಾಡಿ, ಮಾವಿನ ಕಾಯಿಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಈ ದೃಶ್ಯ ಸಿ.ಟಿ. ಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ನ್ಯಾಯಾಧೀಶರ ವಸತಿ ಗೃಹಗಳಲ್ಲಿ ನೀರುಗಂಟಿ ಕೆಲಸ ಎಚ್.ಡಿ.ಅಶೋಕ್ ದೂರು ನೀಡಿದ್ದಾರೆ.

ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿ ಆತ್ಮಹತ್ಯೆ

ದಾವಣಗೆರೆ: ಜಿಲ್ಲೆಯ ಜಗಳೂರು ತಾಲ್ಲೂಕಿನ ಅಣಬೂರು ಗ್ರಾಮದಲ್ಲಿ ಸಿರಿಯಪ್ಪ (35) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದ ಹೊರವಲಯದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಸಿರಿಯಪ್ಪ ಅವರ ಜೇಬಿನ ಹೊರಭಾಗದಲ್ಲಿ ಡೆತ್‌ನೋಟ್‌ ಪತ್ತೆಯಾಗಿದೆ ಎನ್ನಲಾಗಿದೆ.

‘ಮನೆಯಲ್ಲಿ ಹಾಗೂ ಸಂಬಂಧಿಕರಲ್ಲಿ ಯಾವುದೇ ಮನಸ್ತಾಪ ಇರಲಿಲ್ಲ. ಆದರೆ, ಮೃತರ ಜೇಬಿನ ಹೊರಗಡೆ ಭಾಗದಲ್ಲಿ ಒಂದು ಹಾಳೆ ನೇತು ಹಾಕಿಕೊಂಡಿತ್ತು. ಪೂಜಾರಿ ಚಂದ್ರಪ್ಪನ ಕಿರುಕುಳದಿಂದ ಅಂತ ಹಾಳೆಯಲ್ಲಿ ಬರೆಯಲಾಗಿದೆ. ಪೂಜಾರಿ ಚಂದ್ರಪ್ಪ ಮತ್ತು ಸಿರಿಯಪ್ಪ ಅಣ್ಣ –ತಮ್ಮಂದಿರಾಗಿದ್ದಾರೆ’ ಎಂದು ಮೃತರ ಪತ್ನಿ ದೂರು ನೀಡಿದ್ದಾರೆ.

ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣ ಸುಲಿಗೆ; ಬಂಧನ

ದಾವಣಗೆರೆ: ‘ಶಾಲೆ ಮುಚ್ಚಿಸುತ್ತೇವೆ ಎಂದು ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ ಪ್ರಕರಣದಲ್ಲಿ ಹಿಂದೂ ಜನ ಜಾಗೃತಿ ಸೇನಾ ಸಮಿತಿ ಅಧ್ಯಕ್ಷ ಚೇತನ್ ಅಲಿಯಾಸ್‌ ಚೇತನ್ ಕನ್ನಡಿಗ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 

‘2023ರ ಅಕ್ಟೋಬರ್‌ 26ರಂದು ಆರೋಪಿ ಚೇತನ್ ಹಾಗೂ ಸಹಚರರು ನಗರದ ಕರೂರು ಕೈಗಾರಿಕಾ ಪ್ರದೇಶದಲ್ಲಿರುವ ಗ್ಲೋಬಲ್ ಪಬ್ಲಿಕ್ ಸ್ಕೂಲ್‌ಗೆ ಬಂದು ₹ 5 ಲಕ್ಷ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಶಾಲೆಯನ್ನು ಮುಚ್ಚಿಸುತ್ತೇವೆ ಎಂದು ಬೆದರಿಕೆ ಹಾಕಿ, ಹಣ ಸುಲಿಗೆ ಮಾಡಿದ್ದರು’ ಎಂದು ಶಾಲೆಯ ಮಾಲೀಕ ಸೈಯದ್ ಅಕ್ಬರ್ ಅಲಿ ಎಂದು ಗಾಂಧಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆಜಾದ್ ನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಮೊಬೈಲ್‌ ಹಾಗೂ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ. ಆರೋಪಿ ಇದೇ ರೀತಿ ಇತರೆ ಕಡೆಗಳಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT