ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ ಜಿಲ್ಲೆಯಲ್ಲಿ ಬಿತ್ತನೆ ಬೀಜದ ಕೊರತೆ ಇಲ್ಲ: ಕೃಷಿ ನಿರ್ದೇಶಕ ಶ್ರೀನಿವಾಸ್

Published 31 ಮೇ 2024, 6:32 IST
Last Updated 31 ಮೇ 2024, 6:32 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಮುಂಗಾರು ಹಂಗಾಮು ಚುರುಕಾಗಿದ್ದು, ಜನವರಿಯಿಂದ ಮೇ 28ರವರೆಗೆ ವಾಡಿಕೆ ಮಳೆ 96.6 ಮಿ.ಮಿ ಇದ್ದು 145 ಮಿ.ಮಿ. ಮಳೆಯಾಗಿದೆ.

ವಾಡಿಕೆಗಿಂತ ಶೇ 50ರಷ್ಟು ಹೆಚ್ಚಿನ ಮಳೆಯಾಗಿದ್ದು, ಭೂಮಿ ಸಿದ್ಧತೆಗೆ ಅನುಕೂಲವಾಗಿದೆ. ಸಮಗ್ರ ಬೆಳೆ ನಿರ್ವಹಣೆ ಜೊತೆಗೆ ಉತ್ತಮ ಇಳುವರಿ ಪಡೆಯುವಲ್ಲಿ ಗುಣಮಟ್ಟದ ಬಿತ್ತನೆ ಬೀಜಗಳು ಬಹು ಮುಖ್ಯ. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಉತ್ತಮ ಬೆಳವಣಿಗೆ ಹಾಗೂ ಇಳುವರಿ ಪಡೆಯುವಲ್ಲಿ ಗುಣಮಟ್ಟದ ಬಿತ್ತನೆ ಬೀಜ ಅತ್ಯಮೂಲ್ಯವಾಗಿವೆ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ತಿಳಿಸಿದ್ದಾರೆ.

‘ಜಿಲ್ಲೆಗೆ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಭತ್ತ, ತೊಗರಿ, ರಾಗಿ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳ ಒಟ್ಟು 49,869 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆಯಿದ್ದು, ಈವರೆಗೆ 54,052 ಕ್ವಿಂಟಲ್ ಬಿತ್ತನೆ ಬೀಜದ ದಾಸ್ತಾನನ್ನು ಕೃಷಿ ಇಲಾಖೆಯಿಂದ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ನಿಗದಿಪಡಿಸಿದ ಸಹಕಾರಿ ಸಂಘಗಳ ಮೂಲಕ ರಿಯಾಯತಿ ದರದಲ್ಲಿ ವಿವಿಧ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿ ವಿತರಣೆ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.

‘ಜಿಲ್ಲೆಯ ವಿವಿಧ ಕೃಷಿ ಪರಿಕರ ಮಾರಾಟ ಮಳಿಗೆಗಳಲ್ಲಿ ದೃಢೀಕೃತ ಬಿತ್ತನೆ ಬೀಜಗಳು ಲಭ್ಯವಿದ್ದು, ರೈತರಿಗೆ ಯಾವುದೇ ಬಿತ್ತನೆ ಬೀಜಗಳ ಕೊರತೆಯಾಗಿಲ್ಲ. ರೈತರು ಲೂಸ್ ಬಿತ್ತನೆ ಬೀಜ ಮಾರಾಟ ಜಾಲಕ್ಕೆ ಸಿಲುಕದೇ ‘ಬೀಜದಂತೆ ಬೆಳೆ - ನೂಲಿನಂತೆ ಸೀರೆ’ ಎಂಬ ಗಾದೆಯಂತೆ ಉತ್ತಮ ಗುಣಮಟ್ಟದ ದೃಢೀಕೃತ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಿಂದ, ಅಧಿಕೃತ ಕೃಷಿ ಪರಿಕರ ಮಾರಾಟಗಾರರಿಂದ ಖರೀದಿಸಿ ಬಿತ್ತನೆ ಮಾಡಬೇಕು’ ಎಂದು ಮನವಿ ಮಾಡಿದ್ದಾರೆ.

‘ಜಿಲ್ಲೆಗೆ ಮುಂಗಾರು ಹಂಗಾಮಿಗೆ ಒಟ್ಟು 1,53,683 ಮೆಟ್ರಿಕ್‌ ಟನ್‍ಗಳಷ್ಟು ವಿವಿಧ ರಸಗೊಬ್ಬರಗಳ ಬೇಡಿಕೆಯಿದ್ದು, ಜೂನ್ ಮಾಹೆಗೆ 28,178 ಮೆಟ್ರಿಕ್ ಟನ್‍ಗಳಷ್ಟು ರಸಗೊಬ್ಬರದ ಅವಶ್ಯಕತೆ ಇದೆ. ಜಿಲ್ಲೆಯಲ್ಲಿ ಕಾಪು ರಸಗೊಬ್ಬರ ಸೇರಿದಂತೆ ಅಗತ್ಯ ಪ್ರಮಾಣದ ರಸಗೊಬ್ಬರದ ದಾಸ್ತಾನು ಲಭ್ಯವಿದ್ದು, ಯಾವುದೇ ರಸಗೊಬ್ಬರದ ಕೊರತೆ ಇಲ್ಲ.

ಯಾವುದೇ ಅನಧಿಕೃತ ಲೂಸ್ ಬಿತ್ತನೆ ಬೀಜ ದಾಸ್ತಾನು ಹಾಗೂ ಕಳಪೆ ರಸಗೊಬ್ಬರ ಮಾರಾಟ ಮಾಡುವವರು ಕಂಡು ಬಂದಲ್ಲಿ ತಕ್ಷಣ ಈ ಕುರಿತು ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ) ಮೊ.ಸಂ. 8277931106 & 8277931207 ರವರಿಗೆ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT