ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ನಾಲೆ: ನೀರು ಹರಿಸಲು ರೈತರ ಆಗ್ರಹ

Published 7 ಆಗಸ್ಟ್ 2023, 16:50 IST
Last Updated 7 ಆಗಸ್ಟ್ 2023, 16:50 IST
ಅಕ್ಷರ ಗಾತ್ರ

ಮಲೇಬೆನ್ನೂರು:  ಇಲ್ಲಿನ ಕರ್ನಾಟಕ ನೀರಾವರಿ ನಿಗಮ ಕಚೇರಿ ಎದುರು ಮುಂಗಾರು ಹಂಗಾಮಿಗೆ ಭದ್ರಾ ನಾಲೆಗೆ ಆಗಸ್ಟ್‌ 10ರಿಂದ ನೀರು ಹರಿಸುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

‘ಈಗಾಗಲೇ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಸಸಿ ಮಡಿ ತಯಾರಾಗಿದ್ದು, ನಾಟಿ ಮಾಡಲು ನಾಲೆ ನೀರಿಗಾಗಿ ಕಾಯುತ್ತಿದ್ದೇವೆ. ಭದ್ರಾ ಅಣೆಕಟ್ಟೆ 163 ಅಡಿ ತಲುಪುತ್ತಿದ್ದಂತೆ ಆಗಸ್ಟ್‌ 10ರಿಂದ ನಾಲೆಗೆ ನೀರು ಹರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‍.ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ. ಆದರೆ ಇಲಾಖೆಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ತುರ್ತಾಗಿ ನಾಲೆಗೆ ನೀರು ಹರಿಸುವ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಬೇಕು’ ಎಂದು ರೈತರು ಒತ್ತಾಯಿಸಿದರು.

ಭದ್ರಾ ನಾಲೆ ನೀರಿನ ಸಮಸ್ಯೆ ಹಾಗೂ ರೈತರ ಇತರೆ ಬೇಡಿಕೆಗಳ ಕುರಿತು ಚರ್ಚಿಸಲು ಆಗಸ್ಟ್‌ 7ರಂದು ಸಭೆ ನಡೆಸಲು ಕೋರಲಾಗಿತ್ತು. ಇಂದು ಇಇ ಹಾಗೂ ಎಇಇ ಇಬ್ಬರೂ ಕಚೇರಿಯಲ್ಲಿ ಇಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಎಂಜಿನಿಯರ್‌ಗಳ ವರ್ತನೆ ಖಂಡಿಸಿ ಘೋಷಣೆ ಕೂಗಿದ ರೈತರು ಸಿಬ್ಬಂದಿಯನ್ನು ಕಚೇರಿಯಿಂದ ಹೊರಗೆ ಕಳಿಸಿದ ಘಟನೆಯೂ ನಡೆಯಿತು.

ದೇವರಬೆಳಕೆರೆ ಪಿಕಪ್ ಡ್ಯಾಂಗೆ ನೀರು ಹರಿಸಿ:

ದೇವರಬೆಳಕೆರೆ ಪಿಕಪ್ ಡ್ಯಾಂನ ಎಡದಂಡೆ ನಾಲೆಗೆ ಕುಣೆಬೆಳಕೆರೆ ಬಳಿ ಸೇತುವೆ ಕಾಮಗಾರಿ ಪ್ರಗತಿ ಹಂತದಲ್ಲಿರುವುದರಿಂದ ನಾಲೆಗೆ ನೀರು ಬಂದ್ ಮಾಡಿ ಹಳ್ಳಕ್ಕೆ ನೀರು ಬಿಡಲಾಗಿದೆ. ನಾಲೆ ನೀರಿಲ್ಲದೆ, ಭತ್ತದ ಸಸಿಮಡಿ ಒಣಗುತ್ತಿವೆ. ಭತ್ತ ನಾಟಿ ಮಾಡುವ ಈ ಸಮಯದಲ್ಲಿ ಸೇತುವೆ ನಿರ್ಮಾಣ ಮಾಡುವ ಅಗತ್ಯ ಏನಿತ್ತು ಎಂದು ರೈತರು ಪ್ರಶ್ನಿಸಿದರು.

ಸೇತುವೆ ಕಾಮಗಾರಿ ಮುಂದೂಡಬೇಕು. ಎಡದಂಡೆ ನಾಲೆಗೆ ನೀರು ಹರಿಸಿ. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ನಂದಿತಾವರೆ ನಂದೀಶ್, ಪರಮೇಶ್ವರಪ್ಪ ಎಚ್ಚರಿಕೆ ನೀಡಿದರು.

ಆಗಸ್ಟ್ 10ಕ್ಕೆ ನೀರು ಬಿಡುವಂತೆ ಮನವಿ ಸಲ್ಲಿಸಿದ ಬಳಿಕ ರೈತರು ಬೈಕ್ ರ್‍ಯಾಲಿ ಮೂಲಕ ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು.

ರೈತ ಸಂಘ ಹಸಿರು ಸೇನೆ ಹಾಳೂರು ನಾಗರಾಜ್, ನಂದಿತಾವರೆ ಶಂಭಣ್ಣ, ಬಸಣ್ಣ, ಕೆಂಚನಹಳ್ಳಿ ಪರಮೇಶ್, ಭಾನುವಳ್ಳಿ ಪರಮೇಶ್ವರಪ್ಪ, ನಂದೀಶ್, ರುದ್ರಮುನಿ, ಮಾಲತೇಶ್, ಆಂಜಿನಪ್ಪ, ಶೇಖರಪ್ಪ, ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT