ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಬೆನ್ನೂರು: ಶಾಂತಿಸಾಗರದಲ್ಲಿ ಪಂಪ್‌ಸೆಟ್‌ಗಳ ಅಬ್ಬರ!

ತೋಟ ಉಳಿಸಿಕೊಳ್ಳಲು ಪರದಾಟ; ಕುಡಿಯುವ ನೀರಿನ ಕೊರತೆ ಸಾಧ್ಯತೆ
ಕೆ.ಎಸ್. ವೀರೇಶ್ ಪ್ರಸಾದ್
Published 20 ಫೆಬ್ರುವರಿ 2024, 5:46 IST
Last Updated 20 ಫೆಬ್ರುವರಿ 2024, 5:46 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಪ್ರಸಕ್ತ ವರ್ಷ ಭೀಕರ ಬರದ ಛಾಯೆ ಆವರಿಸಿದೆ. ರಣ ಬಿಸಿಲಿಗೆ ಧಗೆ ಏರುತ್ತಿದ್ದು, ನೀರಿನ ಸಮಸ್ಯೆ ಹೆಚ್ಚಿದೆ. ಈ ಭಾಗದ  ಜೀವನಾಡಿ ಶಾಂತಿಸಾಗರ (ಸೂಳೆಕೆರೆ)ವನ್ನೇ ಚನ್ನಗಿರಿ ತಾಲ್ಲೂಕಿನ ಜನರು ಅವಲಂಬಿಸಿದ್ದಾರೆ.

ಶಾಂತಿಸಾಗರದ ನೀರು ಕುಡಿಯಲೂ ಬೇಕು. ತೋಟ ಉಳಿಸಿಕೊಳ್ಳಲೂ ಬೇಕು ಎನ್ನುವ ಹಪಾಹಪಿಯಲ್ಲಿ ಎಲ್ಲರೂ ಕೆರೆಗೆ ಮುಗಿಬಿದ್ದಿದ್ದಾರೆ. ಇದರಿಂದ ಏಷ್ಯಾದ ಎರಡನೇ ಅತಿ ದೊಡ್ಡ ಕೆರೆ ಎಂಬ ಖ್ಯಾತಿಯ ಶಾಂತಿಸಾಗರ ಕೆರೆ ಶೀಘ್ರ ಬರಿದಾಗುವ ಆತಂಕ ಎದುರಾಗಿದೆ.

ತೋಟಗಳನ್ನು ಉಳಿಸಿಕೊಳ್ಳಲು ಶಾಂತಿಸಾಗರದ ಹಿನ್ನೀರು ಭಾಗದಲ್ಲಿ ನೂರಾರು ಪಂಪ್‌ಸೆಟ್‌ಗಳನ್ನು ಅಳವಡಿಸಿ, ನಿರಂತರ ತೋಟಗಳಿಗೆ ನೀರು ಹಾಯಿಸಲಾಗುತ್ತಿದೆ. ಕೊಳವೆಬಾವಿ ಬರಿದಾಗಿರುವ ರೈತರಿಗೆ ಈ ನೀರನ್ನು ಅವಲಂಬನೆ ಅನಿವಾರ್ಯ. ಹತ್ತಾರು ಲಕ್ಷ ವ್ಯಯಿಸಿ ಮಾಡಿದ ತೋಟ ನೀರಿಲ್ಲದೆ ಸೊರಗಿದರೆ ಬದುಕು ದುಸ್ತರ ಎಂಬ ಚಿಂತೆ. ‘ಸದ್ಯ ಬದುಕೋಣ ಮುಂದೆ ದೇವರಿದ್ದಾನೆ’ ಎಂಬ ಗಟ್ಟಿ ನಿರ್ಧಾರದಲ್ಲಿ ಈ ಭಾಗದ ರೈತರು ರಾತ್ರಿ–ಹಗಲು ಕೆರೆಯಿಂದ ನೀರನ್ನು ಹಾಯಿಸಿಕೊಳ್ಳುತ್ತಿದ್ದಾರೆ.

‘ಹಳೆಯ ಕೊಳವೆಬಾವಿಗಳು ಬತ್ತಿವೆ. ಹೊಸದಾಗಿ ಕೊರೆಯಿಸಿರುವ ಕೊಳವೆ‌ಬಾವಿಗಳಲ್ಲಿ ನೀರು ಬರುತ್ತಿಲ್ಲ. ಕೆರೆಯ ಹಿನ್ನೀರಿಗೆ ಮೋಟಾರ್ ಅಳವಡಿಸಿಕೊಂಡು ತೋಟ ಉಳಿಸಿಕೊಳ್ಳುತ್ತಿದ್ದೇವೆ. ಕೊಂಡದಹಳ್ಳಿ, ಹಿರೇಉಡ, ದೇವರಹಳ್ಳಿ, ಚೆನ್ನಾಪುರ, ಕಗತೂರು, ಬುಳುಸಾಗರ, ಮಂಟರಘಟ್ಟ, ಹಟ್ಟಿ, ಆಕಳಕಟ್ಟೆ, ಇಟಗಿ, ಚಿಕ್ಕದೇವರಹಳ್ಳಿ, ಬನ್ನಿಹಟ್ಟಿ, ಗುಳ್ಳಳ್ಳಿ ಗ್ರಾಮಗಳ ಸುಮಾರು 200 ಪಂಪ್‌ಸೆಟ್‌ಗಳು ಕೆರೆಯ ಹಿನ್ನೀರ ವ್ಯಾಪ್ತಿಯಲ್ಲಿ ತಲೆ ಎತ್ತಿವೆ. ಭದ್ರಾ ನಾಲೆಯ ನೀರನ್ನು ಶಾಂತಿಸಾಗರಕ್ಕೆ ಶೀಘ್ರ ಬಿಡಬೇಕು. ಇದರಿಂದ ರೈತರು ಕೊಂಚ ನಿಟ್ಟುಸಿರು ಬಿಡಬಹುದು’ ಎಂದು ವಾಸ್ತವ ತೆರೆದಿಟ್ಟರು ರೈತ ಓಂಕಾರಪ್ಪ.

‘ಸಂತೇಬೆನ್ನೂರು ಸೇರಿದಂತೆ ಚನ್ನಗಿರಿ ತಾಲ್ಲೂಕಿನ ನೂರಾರು ಗ್ರಾಮಗಳಿಗೆ ಕುಡಿಯುವ ನೀರಿನ ಆಗರ ಈ ಕೆರೆ. ಚಿತ್ರದುರ್ಗ, ಹೊಳಲ್ಕೆರೆ ಭಾಗಗಳಿಗೂ ಇಲ್ಲಿಂದ ನೀರು ಪೂರೈಕೆ ಆಗುತ್ತದೆ. ಸದ್ಯ ಸಂಗ್ರಹದಲ್ಲಿರುವ ನೀರು 30 ದಿನಗಳಿಗೆ ಬಂದರೆ ಹೆಚ್ಚು. ಜೂನ್‌ವರೆಗೆ ಕುಡಿಯುವ ನೀರು ಪೂರೈಸಲು 0.54 ಟಿಎಂಸಿ ಅಡಿ ನೀರು ಅವಶ್ಯಕ. ಭದ್ರಾ ನಾಲೆಯಿಂದ ನೀರು ಹರಿಸಿದರೆ ಕುಡಿಯುವ ನೀರು ಸಿಗಲಿದೆ. ಇಲ್ಲವಾದರೆ ತೀವ್ರ ಸಂಕಷ್ಟದ ದಿನಗಳು ಎದುರಾಗುತ್ತವೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಬಿ.ಎನ್. ಲೋಹಿತ್ ಆತಂಕ ವ್ಯಕ್ತಪಡಿಸಿದರು.

‘ಹೊರ ಜಿಲ್ಲೆಗಳ ನೀರಿನ ಪ್ರಮಾಣ ನಿಗದಿಪಡಿಸಿ’
‘ಶಾಂತಿಸಾಗರ ಕುಡಿಯುವ ನೀರಿನ ಯೋಜನೆಗಳಲ್ಲಿ ಹೊರ ಜಿಲ್ಲೆಗಳಿಗೆ ಎಷ್ಟು ಪ್ರಮಾಣದ ನೀರು ಪೂರೈಸಬೇಕು ಎಂಬುದನ್ನು ನಿಗದಿಪಡಿಸಿಲ್ಲ. ಭದ್ರಾ ನಾಲೆಯ ನೀರನ್ನು ಅವಶ್ಯಕತೆ ಇಲ್ಲದೇ ಇದ್ದ ಸಂದರ್ಭದಲ್ಲಿ ಶಾಂತಿಸಾಗರಕ್ಕೆ ಬಿಡಲಾಗುತ್ತದೆ. ತೀವ್ರ ಬೇಡಿಕೆ ಇರುವ ಬರಗಾಲದಲ್ಲಿ ನೀರು ಬಿಡಲು ಅಕ್ರಮ ಸಕ್ರಮಗಳ ಲೆಕ್ಕಾಚಾರ ಹಾಕಲಾಗುತ್ತದೆ. ಸದ್ಯ ಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ನೀರಿನ ಪ್ರಮಾಣ ಇನ್ನಷ್ಟು ಕುಸಿತ ಕಂಡರೆ ಕೆಸರುಯುಕ್ತ ನೀರು ಸಿಗಲಿದೆ. ನೀರು ಜೀವನಾಡಿ. ಭದ್ರಾ ನಾಲೆಯ ನೀರು ಹರಿಸುವ ಮೂಲಕ ಬರಗಾಲದ ಬವಣೆ ನೀಗಿಸಬೇಕು’ ಎಂದು ಖಡ್ಗ ಸಂಘದ ಅಧ್ಯಕ್ಷ ರಘು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT