ಕೊಂಡಜ್ಜಿ ಕೆರೆಗೆ ನೀರು ಹರಿಸಲು ಒತ್ತಾಯ

7
ನೀರಾವರಿ ನಿಗಮದ ಕಚೇರಿಯಲ್ಲಿ ರೈತರ ಪ್ರತಿಭಟನೆ

ಕೊಂಡಜ್ಜಿ ಕೆರೆಗೆ ನೀರು ಹರಿಸಲು ಒತ್ತಾಯ

Published:
Updated:
Deccan Herald

ದಾವಣಗೆರೆ: ಹರಿಹರ ತಾಲ್ಲೂಕಿನ ಕೊಂಡಜ್ಜಿ ಕೆರೆಗೆ ಭದ್ರಾ ಕಾಲುವೆಯಿಂದ ನೀರು ಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕಚೇರಿ ಎದುರು ರೈತರು ಸೋಮವಾರ ಪ್ರತಿಭಟಿಸಿದರು.

ಭದ್ರಾ ಕಾಲುವೆಯ ಕೊನೆಯ ಭಾಗಕ್ಕೆ ನೀರು ಹರಿದು ಬರುತ್ತಿಲ್ಲ. ಇದರಿಂದಾಗಿ ಕೊಂಡಜ್ಜಿ, ಗುಳ್ಳಾಪುರ, ಕೆಂಚನಹಳ್ಳಿ, ಕುರುಬರ ಹಳ್ಳಿ, ವಟಗನಹಳ್ಳಿ ಸುತ್ತಲಿನ ಹಲವು ಹಳ್ಳಿಗಳಲ್ಲಿ ಸರಿಯಾಗಿ ಮಳೆಯಾಗದೇ ನೀರಿನ ಕೊರತೆಯಿಂದಾಗಿ ಮೆಕ್ಕೆಜೋಳ ಬೆಳೆ ಒಣಗುತ್ತಿದೆ. ಕೂಡಲೇ ಕಾಲುವೆಯ ಕೊನೆಯ ಭಾಗಕ್ಕೆ ನೀರು ಹರಿಸದಿದ್ದರೆ ಬೆಳೆ ಕೈಗೆ ಸಿಗುವುದಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

ಭದ್ರಾ ಜಲಾಶಯ ತುಂಬಿ ನದಿಗೆ ನೀರು ಹರಿಸಲಾಗುತ್ತಿದೆ. ಆದರೆ, ಕಾಲುವೆಯ ಕೊನೆಯ ಭಾಗಕ್ಕೆ ಇನ್ನೂ ನೀರು ತಲುಪಿಲ್ಲ. ಕೊಂಡಜ್ಜಿ ಕೆರೆ ತುಂಬಿದರೆ ಕಾಲುವೆಯ ಮೂಲಕ ನೀರು ಹರಿಸಿದರೆ ಕೆಳಭಾಗದ ಹಲವು ಗ್ರಾಮಗಳ ಬೆಳೆಯನ್ನು ಉಳಿಸಿಕೊಳ್ಳಲು ಸಾಧ್ಯ. ಹೀಗಾಗಿ ನೀರು ಹರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನೀರಾವರಿ ನಿಗಮದ ಸಹಾಯಕ ಎಂಜಿನಿಯರ್‌ ಬಿ.ಆರ್‌. ಕೊಟ್ರೇಶ್‌, ಇದೇ 10ರೊಳಗೆ ಕೆರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

10ರೊಳಗೆ ನೀರು ಹರಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿ, ರೈತರು ಧರಣಿಯನ್ನು ಹಿಂದಕ್ಕೆ ಪಡೆದರು.

ರೈತ ಮುಖಂಡ ಶಾಮನೂರು ಲಿಂಗರಾಜ, ಕೆರೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ಎ. ಮುತಿನಪ್ಪ, ಕರಿಬಸಪ್ಪ, ತಿಪ್ಪಣ್ಣ, ಪ್ರಕಾಶಪ್ಪ, ಸಂಗಮೇಶ ಅವರೂ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !