ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾವು ಕರಸೇವಕರು ನಮ್ಮನ್ನು ಬಂಧಿಸಿ’: ರೇಣುಕಾಚಾರ್ಯ ಸೇರಿ ಹಲವರ ಬಂಧನ, ಬಿಡುಗಡೆ

Published 8 ಜನವರಿ 2024, 16:05 IST
Last Updated 8 ಜನವರಿ 2024, 16:05 IST
ಅಕ್ಷರ ಗಾತ್ರ

ದಾವಣಗೆರೆ: ‘ನಾವು ಕರಸೇವಕರು ನಮ್ಮನ್ನು ಬಂಧಿಸಿ’ ಅಭಿಯಾನದ ಭಾಗವಾಗಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ನೂರಾರು ಹಿಂದೂ ಕಾರ್ಯಕರ್ತರು ಸೋಮವಾರ ನಗರದ ಬಡಾವಣೆ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಕಾರರನ್ನು ಬಂಧಿಸಿ ಬಿಡುಗಡೆಗೊಳಿಸಿದರು.

ಪಿ.ಜೆ. ಬಡಾವಣೆಯ ಶ್ರೀರಾಮ ಮಂದಿರದಿಂದ ಬಡಾವಣೆ ಪೊಲೀಸ್ ಠಾಣೆಯವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರ ಜೊತ ಮಾತಿನ ಚಕಮಕಿ ನಡೆಸಿದರು. ಈ ವೇಳೆ ಹೈಡ್ರಾಮಾವೇ ನಡೆದು ಹೋಯಿತು. ಪೊಲೀಸರು ಅವರನ್ನು ಬಂಧಿಸಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣಕ್ಕೆ ಕರೆದೊಯ್ದ ಕೆಲ ಸಮಯದ ನಂತರ ಬಿಡುಗಡೆ ಮಾಡಿದರು.

‘ರಾಜ್ಯ ಸರ್ಕಾರ ತುಘಲಕ್ ದರ್ಬಾರ್ ನಡೆಸುತ್ತಿದ್ದು, ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. 30 ವರ್ಷಗಳ ಹಿಂದಿನ ಪ್ರಕರಣವನ್ನು ಕೆದಕಿ ತೆಗೆದು ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸಿದ ಕರಸೇವಕರಿಗೆ ತೊಂದರೆ ಕೊಡುತ್ತಿದೆ’ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.

‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಲಕ್ಷಾಂತರ ಕರ ಸೇವಕರು ಅನೇಕ ಹೋರಾಟ ನಡೆಸಿದ್ದಾರೆ. ಅವರಲ್ಲಿ ನಾನೂ ಒಬ್ಬ. ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ಎಲ್ಲ ಕರಸೇವಕರ ಬಂಧಿಸಿ ಎಂದು ಸವಾಲು ಹಾಕಿದ ಅವರು, ನಾವು ಹಿಂದೂಗಳು ಶಾಂತಿಪ್ರಿಯರು. ಹೋರಾಟಕ್ಕಾಗಿ ಲಾಠಿ, ಗುಂಡು, ಪಿಸ್ತೂಲು ಹಿಡಿಯುವುದಿಲ್ಲ. ಬದಲಿಗೆ ಎದೆಕೊಟ್ಟು ನಿಂತು ನಾವು ಹೋರಾಟ ನಡೆಸುತ್ತೇವೆ. ಇದು ಹೋರಾಟದ ಆರಂಭ’ ಎಂದು ಎಚ್ಚರಿಸಿದರು.

‘ಇಡೀ ಭಾರತದ ಇತಿಹಾಸದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟಲು ನಡೆದಿರುವ ಹೋರಾಟ ಬೇರೊಂದು ನಡೆದಿಲ್ಲ. ಇದೇ ರೀತಿ ಕಾಶಿ, ಮಥುರಾದಲ್ಲಿಯೂ ಇರುವ ಮಸೀದಿ ಕೆಡವಿ ನಮ್ಮ ಮಂದಿರ ಕಟ್ಟುತ್ತೇವೆ’ ಎಂದು ಸವಾಲು ಹಾಕಿದರು.

‘ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಅವರು ಗೋದ್ರಾ ಹತ್ಯಾಕಾಂಡ ಮತ್ತೊಮ್ಮೆ ನಡೆಯಲಿದೆ ಎಂದು ಹೇಳುತ್ತಾ ಹಿಂದೂಗಳನ್ನು ಹೆದರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಹೀಗೆ ಮಾತನಾಡಲು ಅವರಿಗೆ ನಾಚಿಕೆ ಆಗಬೇಕು. ಹಿಂದೂ ಕಾರ್ಯಕರ್ತರು ಫುಟ್‌ಬಾಲ್‌ ಇದ್ದಂತೆ. ನೀವು ಒದ್ದಷ್ಟು ಮತ್ತೆ ನಾವು ಪುಟಿದೇಳುತ್ತೇವೆ’ ಎಂದು ಬಿಜೆಪಿ ಮುಖಂಡ ಎನ್. ರಾಜಶೇಖರ್ ಸವಾಲು ಹಕಿದರು.

ಹರಿಹರ ಶಾಸಕ ಬಿ.ಪಿ. ಹರೀಶ್, ಮಾಜಿ ಮೇಯರ್ ಬಿ.ಜಿ. ಅಜಯ್‌ಕುಮಾರ್, ಡಾ.ಟಿ.ಜಿ. ರವಿಕುಮಾರ್, ಪಿ.ಸಿ. ಮಹಾಬಲೇಶ್ವರಭಟ್, ಪಿ.ಸಿ. ಶ್ರೀನಿವಾಸ್, ಲೋಕಿಕೆರೆ ನಾಗರಾಜ್, ಚಂದ್ರಶೇಖರ್ ಪೂಜಾರ್, ರಾಜು ವೀರಣ್ಣ, ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ, ಸೋಮಶೇಖರ್, ರಾಜೇಶ್ವರಿ ಕಲ್ಲಿಂಗಪ್ಪ, ಎಚ್.ಎಸ್. ಲಿಂಗರಾಜ್, ಎಂ.ಪಿ. ಕೃಷ್ಣಮೂರ್ತಿ ಪವಾರ್, ದೊಡ್ಡೇಶ್ ಇತರರು ಇದ್ದರು.

‘ನಾವು ಕರಸೇವಕರು ನಮ್ಮನ್ನು ಬಂಧಿಸಿ’ ಅಭಿಯಾನದ ಭಾಗವಾಗಿ ಹಿಂದೂ ಕಾರ್ಯಕರ್ತರು ದಾವಣಗೆರೆಯಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
‘ನಾವು ಕರಸೇವಕರು ನಮ್ಮನ್ನು ಬಂಧಿಸಿ’ ಅಭಿಯಾನದ ಭಾಗವಾಗಿ ಹಿಂದೂ ಕಾರ್ಯಕರ್ತರು ದಾವಣಗೆರೆಯಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮುಜರಾಯಿ ಇಲಾಖೆಯಿಂದ ಬಂದ ಹಣವನ್ನು ಸಿದ್ದರಾಮಯ್ಯ ಅವರು ವಕ್ಫ್ ಬೋರ್ಡ್‌ಗೆ ನೀಡಲು ಹೊರಟಿದ್ದಾರೆ. ಅಲ್ಪಸಂ‌ಖ್ಯಾತರ ಮೇಲೆ ಇರುವ ಕಾಳಜಿ ರೈತರ ಮೇಲೆ ಇಲ್ಲ.
ಎಂ.ಪಿ. ರೇಣುಕಾಚಾರ್ಯ ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT