ಶುಕ್ರವಾರ, ಡಿಸೆಂಬರ್ 13, 2019
26 °C
ಜಿಲ್ಲಾಡಳಿತ, ಮಹಾನಗರ ಪಾಲಿಕೆಯಿಂದ ಕಾರ್ಯಾಚರಣೆ

ಗೂಡಂಗಡಿ, ತಳ್ಳುಗಾಡಿ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಇಲ್ಲಿನ ಗಾಂಧಿ ಚೌಕ್‌ ದಿಂದ ನಾಲಬಂದ್ ಚೌಕ್‌ವರೆಗಿನ 60 ಅಡಿ ರಸ್ತೆಯನ್ನು ಅತಿಕ್ರಮಿಸಿಕೊಂಡಿದ್ದ ಗೂಡಂಗಡಿಗಳು ಹಾಗೂ ತಳ್ಳುವ ಗಾಡಿಗಳನ್ನು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಗುರುವಾರ ತೆರವುಗೊಳಿಸಲಾಯಿತು.

ಬೆಳಿಗ್ಗೆ 6 ಗಂಟೆಗೆ ಕಾರ್ಯಾಚರಣೆ ಆರಂಭಿಸಿದ ಪಾಲಿಕೆ ಸಿಬ್ಬಂದಿ ಜೆಸಿಬಿ, ಟ್ರಾಕ್ಟರ್ ಸಹಾಯದಿಂದ ಒತ್ತುವರಿಯನ್ನು ತೆರವುಗೊಳಿಸಿದರು. ಈ ವೇಳೆ ಸ್ಥಳದಲ್ಲಿ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಲಾಲಬಹದ್ದೂರ್ ಶಾಸ್ತ್ರಿ (ಎಲ್‌ಬಿಎಸ್‌) ಮತ್ತು ನೆಹರೂ ಮಾರುಕಟ್ಟೆಯ ಮಧ್ಯದ ರಸ್ತೆಯ ಎರಡೂ ಬದಿಯಲ್ಲಿನ 200ಕ್ಕೂ ಹೆಚ್ಚು ಗೂಡಂಗಡಿಗಳು ಹಾಗೂ ತಳ್ಳುವ ಗಾಡಿಗಳನ್ನು ತೆರವುಗೊಳಿಸಲಾಯಿತು.

ಮಹಿಳೆಯರಿಂದ ಕಣ್ಣೀರು: ಗೂಡಂಗಡಿಗಳ ತೆರವು ಖಂಡಿಸಿ ವ್ಯಾಪಾರಿಗಳು ರಸ್ತೆ ಮೇಲೆ ಕುಳಿತು ಪ್ರತಿಭಟನೆ ಮಾಡಿದರು. ತರಕಾರಿ ಮತ್ತು ಹಣ್ಣು ಮಾರಾಟ ಮಾಡುವ ಮಹಿಳೆಯರು ತೆರವಿಗೆ ವಿರೋಧ ವ್ಯಕ್ತಪಡಿಸಿ, ಕಣ್ಣೀರು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಇದಾದ ಬಳಿಕ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದ ವ್ಯಾಪಾರಿಗಳು ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು, ಪ್ರತಿಭಟನಾನಿರತರ ಜತೆ ಮಾತುಕತೆ ನಡೆಸಿದರು. ಯಾರಿಗೂ ಅನ್ಯಾಯವಾಗದಂತೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ನಿಷೇಧಾಜ್ಞೆ ಜಾರಿ: ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಕಲಂ 144ರ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಇಬ್ಬರು ಡಿವೈಎಸ್‌ಪಿ, ಆರು ಜನ ಇನ್‌ಸ್ಪೆಕ್ಟರ್‌, 12 ಜನ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹಾಗೂ 120 ಜನ ಕಾನ್‌ಸ್ಟೆಬಲ್‌ಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.

ಪ್ರತಿಕ್ರಿಯಿಸಿ (+)