ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳ್ನಾವರ ದೇವಿಯರ ಅದ್ದೂರಿ ರಥೋತ್ಸವ: ‍‍ಪ‍ಟ್ಟಣದಾದ್ಯಂತ ನೆರೆದಿದ್ದ ಭಕ್ತ ಸಮೂಹ

Published 23 ಏಪ್ರಿಲ್ 2024, 15:47 IST
Last Updated 23 ಏಪ್ರಿಲ್ 2024, 15:47 IST
ಅಕ್ಷರ ಗಾತ್ರ

ಅಳ್ನಾವರ: ಪಟ್ಟಣದಲ್ಲಿ 12 ವರ್ಷಗಳ ನಂತರ ನಡೆದ ಗ್ರಾಮದೇವಿಯರ ಜಾತ್ರೆ ಭಕ್ತಿಭಾವದಿಂದ ಕೂಡಿದ್ದು, ಮಂಗಳವಾರ ಮಹಾರಥೋತ್ಸವವು ವೈಭವದಿಂದ ಜರುಗಿತು.

ಭವ್ಯವಾದ ರಥದಲ್ಲಿ ಗ್ರಾಮದೇವಿಯರ ನೂತನ ಮೂರ್ತಿಗಳನ್ನು ಇರಿಸಿ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಭವ್ಯವಾದ ರಥದಲ್ಲಿ ಲಕ್ಷ್ಮೀ ಹಾಗೂ ದುರ್ಗಾದೇವಿಯರ ಮೂರ್ತಿಗಳನ್ನು ಭಕ್ತರು ಕಣ್ತುಂಬಿಕೊಂಡರು. ನೂತನ ಮೂರ್ತಿಗಳನ್ನು ನೋಡುವುದಕ್ಕಾಗಿಯೇ ಅತಿಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ನೆರೆದಿದ್ದರು. ರಥೋತ್ಸವದಲ್ಲಿ ಉಘೆ ಉಘೆ ಎಂದು ಹಣ್ಣು, ಹೂವು ಎಸೆದು ಧನ್ಯರಾದರು.

ಗುಂಜಿಕರ ಮನೆಯ ಹತ್ತಿರದಿಂದ ಮದ್ಯಾಹ್ನ 2 ಗಂಟೆಗೆ ರಥೋತ್ಸವ ಆರಂಭವಾಗಿ, ಸಂಜೆ 6.30ಕ್ಕೆ ಗದ್ದುಗೆ ಸ್ಥಳಕ್ಕೆ ತಲುಪಿತು. ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಭಕ್ತರು ದೇವಿಗೆ ಉಡಿ ತುಂಬಿ ಕಾಣಿಕೆ ಅರ್ಪಿಸಿದರು. ಈ ಹಿಂದೆ 2012ರಲ್ಲಿ ಜಾತ್ರೆ ನಡೆದಿತ್ತು. 12 ವರ್ಷಗಳ ಬಳಿಕ ನಡೆಯುತ್ತಿರುವ ಜಾತ್ರೋತ್ಸವಕ್ಕೆ ಸಾಕ್ಷಿಯಾಗಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಪಟ್ಟಣದಲ್ಲಿ ಉಳಿದುಕೊಂಡಿದ್ದಾರೆ.

20 ಟನ್‌ಗಿಂತ ಅಧಿಕ ಭಾರವಿರುವ 52 ಅಡಿ ಎತ್ತರದ ಹಾಗೂ ಐದು ಮಹಡಿ ಇರುವ ರಥವನ್ನು ಭಕ್ತರು ಕುತೂಹಲದಿಂದ ವೀಕ್ಷಿಸಿದರು.

ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಬೆಂಗಳೂರು ಭವಾನಿ ದತ್ತಪೀಠದ ಗೋಸಾಯಿ ಮಠದ ಮಂಜುನಾಥ ಭಾರತಿ ಸ್ವಾಮೀಜಿ, ಕುಂಬಾರ್ಡಾ ಹಂಡಿಬಡಂಗನಾಥ ಪೀರಯೋಗಿ ಮೋಹನನಾಥ ಸ್ವಾಮೀಜಿ ಸಾನ್ನಿಧ್ಯ  ವಹಿಸಿದ್ದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಜಾತ್ರಾ ಸಮಿತಿ ಅಧ್ಯಕ್ಷ ಬಿ.ಎ. ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT