ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅನ್ನಭಾಗ್ಯ; 25,386 ಪಡಿತರದಾರರು ವಂಚಿತ

ಯೋಜನೆಯ ಲಾಭ ಪಡೆದ ಜಿಲ್ಲೆಯ 3.51 ಲಕ್ಷ ಪಡಿತರದಾರರು; ಒಟ್ಟು ₹153 ಕೋಟಿ ಜಮೆ
Published 4 ಜೂನ್ 2024, 4:25 IST
Last Updated 4 ಜೂನ್ 2024, 4:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಧಾರ್‌ ಕಾರ್ಡ್‌, ಪಡಿತರ ಚೀಟಿ, ಬ್ಯಾಂಕ್‌ ಖಾತೆಯಲ್ಲಿ ಹೆಸರು ಹೊಂದಾಣಿಕೆ ಆಗದೆ ಕಾರಣ ಜಿಲ್ಲೆಯ 25,386 ಪಡಿತರದಾರರು ‘ಅನ್ನಭಾಗ್ಯ’ ಯೋಜನೆಯಿಂದ ವಂಚಿತರಾಗಿದ್ದಾರೆ. ಒಟ್ಟು 3.51 ಲಕ್ಷ ಜನ ಯೋಜನೆಯ ಲಾಭ ಪಡೆದಿದ್ದಾರೆ.

2023ರ ಜುಲೈನಿಂದ ಅನುಷ್ಠಾನಗೊಂಡ ಅನ್ನಭಾಗ್ಯ ಯೋಜನೆಯಡಿ ಪಡಿತರ ಪಡೆಯುವ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿ ಹಾಗೂ ಇನ್ನುಳಿದ 5 ಕೆಜಿ ಅಕ್ಕಿ ಬದಲು ಪ್ರತಿ ಕೆಜಿಗೆ ₹34ರಂತೆ ಒಬ್ಬ ಸದಸ್ಯನಿಗೆ ₹170 ಅನ್ನು ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ.

ಆದರೆ, ಎನ್‌ಪಿಸಿಐ(ನಿರ್ದಿಷ್ಟ ಬ್ಯಾಂಕ್‌ ಖಾತೆಯೊಂದಿಗೆ ಆಧಾರ್‌ ಕಾರ್ಡ್‌ ಜೋಡಣೆ ಮಾಡುವುದು) ಮ್ಯಾಪಿಂಗ್‌, ಇ–ಕೆವೈಸಿ ಆಗದೆ ಸಾವಿರಾರು ಪಡಿತರದಾರರು ಯೋಜನೆಯಿಂದ ವಂಚಿತರಾಗಿದ್ದಾರೆ. ಸತತ ಮೂರು ತಿಂಗಳಿನಿಂದ ಪಡಿತರ ಪಡೆಯದವರ ಖಾತೆಗೆ ಹಣ ಜಮೆಯಾಗುವುದಿಲ್ಲ. 2023ರ ಜುಲೈನಿಂದ ಡಿಸೆಂಬರ್‌ವರೆಗೆ 12,572 ಪಡಿತರದಾರರ ಖಾತೆಗೆ ಹಣ ಜಮೆ ಆಗಿಲ್ಲ. ಆದರೆ ಸತತವಾಗಿ ಮೂರು ತಿಂಗಳು ಪಡಿತರ ಪಡೆದ ನಂತರ ದಾಖಲೆಗಳು ಸರಿಯಾಗಿದ್ದಲ್ಲಿ ಅವರ ಖಾತೆಗೆ ಹಣ ಜಮೆ ಮಾಡಲಾಗುತ್ತದೆ.

ಜಿಲ್ಲೆಯಲ್ಲಿ ಒಟ್ಟು 3,54,979 ಬಿಪಿಎಲ್‌ ಪಡಿತರ ಚೀಟಿ, 95,975 ಎಪಿಎಲ್‌ ಪಡಿತರ ಚೀಟಿ ಹಾಗೂ 10,313 ಜನ ಅಂತ್ಯೋದಯ ಪಡಿತರ ಚೀಟಿ ಹೊಂದಿದ್ದು, 2024ರ ಜನವರಿವರೆಗೆ 3.51 ಲಕ್ಷ ಪಡಿತರದಾರರು ‘ಅನ್ನಭಾಗ್ಯ’ ಯೋಜನೆಯ ಲಾಭ ಪಡೆದಿದ್ದು, ಈವರೆಗೆ ಒಟ್ಟು ₹153 ಕೋಟಿ ಜಮೆ ಆಗಿದೆ.

’ಯೋಜನೆಯಿಂದ ವಂಚಿತರಾದವರ ಪಟ್ಟಿಯನ್ನು ಸಂಬಂಧಪಟ್ಟ ಪಡಿತರ ವಿತರಿಕರಿಗೆ ಕಳಿಸಲಾಗಿದೆ. ಆಯಾ ವಿತರಕರು ತಮ್ಮ ಗ್ರಾಹಕರಿಗೆ ಇ–ಕೆವೈಸಿ ಮಾಡಿಸುವಂತೆ ತಿಳಿಸಿದ್ದಾರೆ. ಆದರೆ, ಅವರಿಗೆ ಜುಲೈ ತಿಂಗಳಿನಿಂದ ಹಣ ಜಮೆ ಆಗುವುದಿಲ್ಲ. ಅವರು ದಾಖಲೆಗಳನ್ನು ಸರಿಪಡಿಸಿಕೊಂಡ ತಿಂಗಳಿನಿಂದ ಮಾತ್ರ ಹಣ ಜಮೆ ಆಗುತ್ತದೆ’ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಧಾರವಾಡ ಜಿಲ್ಲಾ ಜಂಟಿ ನಿರ್ದೇಶಕ ವಿನೋದ ಹೆಗ್ಗಳಗಿ ತಿಳಿಸಿದರು.

’ಪ್ರತಿ ತಿಂಗಳು 17ರೊಳಗೆ ದಾಖಲೆ ಸರಿಪಡಿಸಿಕೊಂಡ ಪಡಿತರದಾರರಿಗೆ ಮಾತ್ರ ಆ ತಿಂಗಳ ಹಣ ಜಮೆ ಆಗುತ್ತದೆ. ಆರಂಭದಲ್ಲಿ 2.82 ಲಕ್ಷ ಜನರು ಯೋಜನೆಯ ಲಾಭ ಪಡೆಯುತ್ತಿದ್ದರು, ಪ್ರಸ್ತುತ 3.51ಲಕ್ಷ ಜನ ಯೋಜನೆಯ ಲಾಭ ಪಡೆಯುತ್ತಿದ್ದಾರೆ‘ ಎಂದು ಅವರು ಹೇಳಿದರು.

ಪ್ರತಿ ತಿಂಗಳ ಕೊನೆಗೆ ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗುತ್ತದೆ. ತಾಂತ್ರಿಕ ಕಾರಣಗಳಿಂದ ಏಪ್ರಿಲ್‌ ತಿಂಗಳ ಹಣ ಜಮೆ ಆಗಿಲ್ಲ ಶೀಘ್ರ ಹಣ ಜಮೆ ಮಾಡಲಾಗುವುದು

-ವಿನೋದ ಹೆಗ್ಗಳಗಿ ಜಂಟಿ ನಿರ್ದೇಶಕ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಧಾರವಾಡ

ಯೋಜನೆ ಜಾರಿಯಾದ ಎರಡು ತಿಂಗಳಲ್ಲಿ ಇಲಾಖೆಯಿಂದ ಯೋಜನೆ ವಂಚಿತ ಪಡಿತರದಾರರ ಪಟ್ಟಿ ನೀಡಲಾಗಿತ್ತು. ಸಂಬಂಧಿಸಿದ ಪಡಿತರದಾರರಿಗೆ ದಾಖಲೆಗಳನ್ನು ಸರಿಪಡಿಸಿಕೊಳ್ಳುವಂತೆ ಹೇಳಿದ್ದೇವೆ -ಸ್ಥಳೀಯ ಪಡಿತರ ವಿತರಕರು ಹುಬ್ಬಳ್ಳಿ

ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ಖಾತೆಗೆ ಹಣ ಜಮೆಯಾದ ನಂತರ ಸಂದೇಶ ಬರುತ್ತದೆ. ಮನೆಯ ಅಗತ್ಯಕ್ಕೆ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಬಳಸುತ್ತಿದ್ದೇನೆ

- ಶ್ರೀದೇವಿ ಎನ್‌.ಜಿ. ಹುಬ್ಬಳ್ಳಿ

12ಸಾವಿರ ಐಪಿಪಿಬಿ ಖಾತೆ ‘ಬ್ಯಾಂಕ್‌ ಖಾತೆ ಇದ್ದರೂ ತಾಂತ್ರಿಕ ಕಾರಣಗಳಿಂದ  ಹಣ ಜಮೆಯಾಗದಿದ್ದಲ್ಲಿ ಹಾಗೂ ಬ್ಯಾಂಕ್ ಖಾತೆ ಹೊಂದಿಲ್ಲದ ಪಡಿತರದಾರರಿಗೆ ಪಡಿತರ ವಿತರಕರ ಅಂಗಡಿಯಲ್ಲೆ ಐಪಿಪಿಬಿ ಖಾತೆ ತೆರೆಯಲು ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯವರೆಗೆ 12ಸಾವಿರಕ್ಕೂ ಹೆಚ್ಚು ಐಪಿಪಿಬಿ ಖಾತೆಗಳನ್ನು ತೆರೆಯಲಾಗಿದ್ದು ಅಕ್ಕಿಯ ಹಣ ಅದಕ್ಕೆ ಜಮೆಯಾಗುತ್ತಿದೆ’  ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಧಾರವಾಡ ಜಿಲ್ಲಾ ಜಂಟಿ ನಿರ್ದೇಶಕ ವಿನೋದ ಹೆಗ್ಗಳಗಿ ತಿಳಿಸಿದರು. ‘ವಯಸ್ಸಾದವರು ಅನಾರೋಗ್ಯದಿಂದ ಬಳಲುತ್ತಿರುವವರು ಅಂಗವಿಕಲರು ಹಾಗೂ ಇತರೆ ಕಾರಣಗಳಿಂದ 2813 ಪಡಿತರದಾರರಿಗೆ ಬಯೊಮೆಟ್ರಿಕ್‌ ಸಮಸ್ಯೆಯಾಗಿದ್ದು ಅವರಿಗೂ ಪಡಿತರ ನೀಡಲು ವಿನಾಯಿತಿ ನೀಡಲಾಗಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT