ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿಗಾಗಿ ಮುಖ್ಯಮಂತ್ರಿಗೆ ಮನವಿ: ಹೊರಟ್ಟಿ

ಸಾವಯವ ಕೃಷಿ ಯೋಜನೆಯಲ್ಲಿ ಅವ್ಯವಹಾರ: ಆರೋಪ
Last Updated 19 ನವೆಂಬರ್ 2020, 12:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವೀರಶೈವ ಲಿಂಗಾಯತ ಸಮುದಾಯವನ್ನು ‘ಒಬಿಸಿ’ಗೆ ಸೇರ್ಪಡೆಗೊಳಿಸಬೇಕು. ಶೇ 16 ರಿಂದ 18 ರಷ್ಟು ಮೀಸಲಾತಿ ನೀಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಆಗ್ರಹಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ–ಲಿಂಗಾಯತ ಅಭಿವೃದ್ಧಿ ನಿಗಮದ ಘೋಷಣೆಯಷ್ಟೇ ಮಾಡಲಾಗಿದೆ. ಅದರ ಸಾಧಕ–ಬಾಧಕದ ಬಗೆಗೆ ತಜ್ಞರೊಂದಿಗೆ ಚರ್ಚೆ ನಡೆಸಿಲ್ಲ.ಅದಕ್ಕೆ ನೀಡಲಾಗುವ ಅನುದಾನ, ನಿಯಮಾವಳಿಗಳ ರಚನೆ ಮಾಡಿಲ್ಲ. ಆದ್ದರಿಂದ ಅದು ಬೇಕೇ, ಬೇಡವೇ ಎಂಬುದಕ್ಕೆ ಈಗಲೇ ಪ್ರತಿಕ್ರಿಯಿಸುವುದು ಸರಿಯಲ್ಲ ಎಂದರು.

ಸಣ್ಣ, ಸಣ್ಣ ಸಮುದಾಯಗಳಿಗಾದರೆ, ನಿಗಮಗಳಿಂದ ಅನುಕೂಲ ಆಗುತ್ತದೆ. ಆದರೆ, ದೊಡ್ಡ ಸಮುದಾಯಗಳಿಗೆ ಪ್ರಯೋಜನವಾಗುವುದಿಲ್ಲ. ಈ ವಿಷಯವನ್ನು ಈಗಾಗಲೇ ಪತ್ರ ಬರೆದು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿದೆ. ಮೀಸಲಾತಿ ಪಡೆಯುವುದೇ ಮೊದಲ ಆದ್ಯತೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮೀಸಲಾತಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಕೇಂದ್ರವು ‘ಒಬಿಸಿ’ಗೆ ಸೇರಿಸಬೇಕು ಎಂಬ ವಿಷಯ ನ್ಯಾಯಾಲಯದ ಮುಂದಿದೆ ಎಂದು ಕೇಳಿದ್ದೇನೆ. ಅಲ್ಲಿ ಅದರ ಹೋರಾಟ ಮುಂದುವರೆಯಲಿದೆ. ರಾಜ್ಯ ಸರ್ಕಾರ ಒಬಿಸಿಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅವ್ಯವಹಾರ ಆರೋಪ:ಸಾವಯವ ಕೃಷಿಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರವು ಎಂಟು ವರ್ಷಗಳ ಅವಧಿಯಲ್ಲಿ ₹ 290 ಕೋಟಿ ಬಿಡುಗಡೆ ಮಾಡಿದೆ. ಇದರಿಂದ 69 ಲಕ್ಷ ಜನರಿಗೆ ಲಾಭವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆರು ಜನರಿಗೂ ಲಾಭವಾಗಿಲ್ಲ. ಅನುದಾನ ರೈತರಿಗೆ ತಲುಪಿಲ್ಲ. ಅವ್ಯವಹಾರ ನಡೆದಿದೆ. ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಾವಯವ ಕೃಷಿ ಅನುಷ್ಠಾನ ಸರಿಯಾಗಿ ಆಗಿಲ್ಲ. ದಾಖಲೆಗಳಲ್ಲಿ ಮಾತ್ರ ಸಾವಯವ ಹಳ್ಳಿಗಳಿವೆ. ಹಣ ಹೊಡೆಯಲು ಈ ಯೋಜನೆಯನ್ನು ಅಧಿಕಾರಿಗಳು ದಾರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಸಿಎ ನಿವೇಶನ ದುರುಪಯೋಗ: ಹೊರಟ್ಟಿ

ಹುಬ್ಬಳ್ಳಿ: ಬಡಾವಣೆಗಳಲ್ಲಿ ನಾಗರಿಕ ಮೂಲಸೌಲಭ್ಯಕ್ಕೆ ಮೀಸಲಾದ ಸಿಎ ನಿವೇಶನಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಅನ್ಯ ಉದ್ದೇಶಕ್ಕೆ ಅವುಗಳನ್ನುಬಳಸಲಾಗಿದೆ. ಈ ಕುರಿತು ಒಂದು ತಿಂಗಳಲ್ಲಿ ವರದಿ ನೀಡುವಂತೆ ಹುಡಾ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದೇನೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಸಿಎ ನಿವೇಶನಗಳು ಎಷ್ಟಿವೆ. ಅವುಗಳ ವಿಸ್ತೀರ್ಣ ಎಷ್ಟು? ಅವುಗಳನ್ನು ಕಾಯ್ದಿರಿಸಿದ ಉದ್ದೇಶಗಳಿಗೆ ಬಳಸಲಾಗಿದೆಯೇ ಎಂಬ 10 ವರ್ಷಗಳ ವಿವರ ಕೇಳಲಾಗಿದೆ ಎಂದರು.

ಉದ್ಯಾನ, ಶಿಕ್ಷಣ ಸಂಸ್ಥೆಗಳ ಆರಂಭಕ್ಕೆ ಮೀಸಲಿಟ್ಟ ಜಾಗಗಳು ಪ್ರಭಾವಿಗಳ ಪಾಲಾಗಿವೆ. ಅಧಿಕಾರದಲ್ಲಿದ್ದವರು ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡಿದ್ದಾರೆ. ವರದಿ ಬಂದ ಮೇಲೆ ಅವುಗಳ ಉಳಿವಿಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT