ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸಕ್ಕೆ ಚ್ಯುತಿ ಬಾರದು: ಜೋಶಿ ಅಭಯ

Published 24 ಫೆಬ್ರುವರಿ 2024, 12:57 IST
Last Updated 24 ಫೆಬ್ರುವರಿ 2024, 12:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: 2004ರಿಂದ ಇಲ್ಲಿಯವರೆಗೆ ವಿಶ್ವಾಸಕ್ಕೆ ಧಕ್ಕೆ ಬರದಂತೆ ಕೆಲಸ ಮಾಡಿದ್ದೇನೆ. ಮುಂದೆಯೂ ಜನರ ವಿಶ್ವಾಸ ಹಾಗೂ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಶನಿವಾರ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.

‘ಮೊದಲ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಹೇಗೆ ನಿಮ್ಮ ವಿಶ್ವಾಸ ಹಾಗೂ ನಿರೀಕ್ಷೆಗೆ ತಕ್ಕಂತೆ ಮಾಡಿದ್ದೇನೋ ಅದೇ ರೀತಿ ಇದುವರೆಗೆ ಕೆಲಸ ಮಾಡಿದ್ದೇನೆ. ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕಾದರೆ, ವಿಶ್ವದಲ್ಲಿಯೇ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕಾಗಿದೆ’ ಎಂದು ಹೇಳಿದರು.

ಮುಂಬರುವ ಲೋಕಸಭೆ ಚುನಾವಣೆಯು ಸಾಧನೆಯ ಆಧಾರದ ಮೇಲೆ ನಡೆಯಲಿರುವ ಚುನಾವಣೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಭೂತಪೂರ್ವ ಕೆಲಸಗಳಾಗಿದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.

ತ್ರಿವಳಿ ತಲಾಖ್ ತೆಗೆದುಹಾಕಿರುವುದು, ಶೇ 33 ಮಹಿಳಾ ಮೀಸಲಾತಿ, ಆರ್ಟಿಕಲ್ 370 ರದ್ದುಪಡಿಸಿರುವುದು ಸೇರಿದಂತೆ ಹಲವು ಸಾಧನೆಯನ್ನು ಕೈಗೊಳ್ಳಲಾಗಿದೆ. ಇದಕ್ಕೆ ಪಕ್ಷದ ಕಾರ್ಯಕರ್ತರು ಹಾಗೂ ಜನರ ಆಶೀರ್ವಾದವೇ ಕಾರಣ ಎಂದು ಹೇಳಿದರು.

ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ಐಐಟಿ, ಐಐಐಟಿ, ಫ್ಲೈ ಓವರ್, ರಸ್ತೆ ಅಭಿವೃದ್ಧಿ, ಶಾಲೆ– ಅಂಗನವಾಡಿಗಳ ಸುಧಾರಣೆ, ರೈಲ್ವೆ ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳ ಅಭಿವೃದ್ಧಿ, ಕೆರೆಗಳ ಪುನರುಜ್ಜೀವನ ಸೇರಿದಂತೆ ಹಲವು ಕಾರ್ಯಗಳನ್ನು ಜೋಶಿ ಅವರು ಮಾಡಿದ್ದಾರೆ. ಹಿಂದಿನ ಎಲ್ಲ ಚುನಾವಣೆಗಿಂತ ಹೆಚ್ಚು ಮತಗಳ ಅಂತರದಿಂದ ಜೋಶಿ ಅವರು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಪ್ಪು ಆರ್ಥಿಕ ನೀತಿಯಿಂದಾಗಿ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಅಭಿವೃದ್ಧಿ ಕೆಲಸ ಕೈಗೊಳ್ಳಲು ಅನುದಾನವಿಲ್ಲ. ತೆರಿಗೆ ಸಂಗ್ರಹ ಸಮರ್ಪಕವಾಗಿ ಮಾಡುತ್ತಿಲ್ಲ. ಇವೆಲ್ಲ ವೈಫಲ್ಯಗಳನ್ನು ಕೇಂದ್ರ ಸರ್ಕಾರದ ಮೇಲೆ ಹೊರಿಸಲು ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ. ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಿಂದ ಸಂಗ್ರಹಿಸುವ ತೆರಿಗೆಯನ್ನು ಕೇಂದ್ರ ಸರ್ಕಾರ ಸಮರ್ಪಕವಾಗಿ ಮರುಹಂಚಿಕೆ ಮಾಡುತ್ತಿಲ್ಲ ಎಂದು ಸಿದ್ದರಾಮಯ್ಯ ಅವರು ದಕ್ಷಿಣದ ರಾಜ್ಯಗಳನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಅಬಕಾರಿಯಿಂದ ಸಂಗ್ರಹಿಸುವ ತೆರಿಗೆಯನ್ನು ತಮ್ಮ ಸಲುವಾಗಿ ಖರ್ಚು ಮಾಡಬೇಕೆಂದು ಮದ್ಯಪ್ರಿಯರು ಹಠ ಹಿಡಿದರೆ ಅವರ ಬೇಡಿಕೆ ಪೂರೈಸಲು ಸಾಧ್ಯವೆ ನಮ್ಮ ಸಾರಾಯಿ, ನಮ್ಮ ತೆರಿಗೆ, ನಮ್ಮ ಹಕ್ಕು ಎಂದು ಮದ್ಯಪ್ರಿಯರು  ಕೇಳಿದರೆ ಸಿದ್ದರಾಮಯ್ಯ ಏನು  ಮಾಡುತ್ತಾರೆ ಎಂದು ಪ್ರಶ್ನಿಸಿದರು. 

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಸಂಸದರು ಹೆಚ್ಚನ ಅನುದಾನ ತಂದಿದ್ದಾರೆ. ಎಲ್ಲಡೆ ಅಭಿವೃದ್ಧಿ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ಜನರ ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿದೆ ಎಂದು ಹೇಳಿದರು.

ಧಾರವಾಡ ಲೋಕಸಭಾ ಕ್ಷೇತ್ರದ ಉಸ್ತುವಾರಿ ಎಂ.ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಹುಬ್ಬಳ್ಳಿ– ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಸ್ವಾಗತಿಸಿದರು.

‘ಜೋಶಿ ಅವರು ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಜಾತಿ ನಾಯಕರನ್ನು ಬೆಳೆಸಿದ್ದಾರೆ. ಸ್ಥಳೀಯವಾಗಿ ಅಭಿವೃದ್ಧಿ ಕೈಗೊಳ್ಳಲು ಸಾಕಷ್ಟು ಅನುದಾನ ಕೊಡಿಸಿದ್ದಾರೆ. ನಮ್ಮ ಗೆಲುವಿನಲ್ಲಿ ಅವರ ಕೊಡುಗೆ ದೊಡ್ಡದಿದೆ

–ಎಂ.ಆರ್. ಪಾಟೀಲ ಕುಂದಗೋಳ ಶಾಸಕ

ಶೆಟ್ಟರ್‌ ಗೈರು

ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣೆ ಕಾರ್ಯಾಲಯ ಉದ್ಘಾಟನೆ ಸಮಾರಂಭದಲ್ಲಿ ಜಗದೀಶ ಶೆಟ್ಟರ್‌ ಗೈರಾಗಿದ್ದರು. ಬಿಜೆಪಿಗೆ ಮರುಸೇರ್ಪಡೆಯಾದ ನಂತರ ಪಕ್ಷದ 3ನೇ ಪ್ರಮುಖ ಕಾರ್ಯಕ್ರಮದಿಂದ ಅವರು ದೂರ ಉಳಿದಿದ್ದಾರೆ.  ಶೆಟ್ಟರ್‌ ಗೈರಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಪ್ರಲ್ಹಾದ ಜೋಶಿ ‘ಮೂರು ದಿನಗಳವರೆಗೆ ಊರಿನಲ್ಲಿ ಇರಲ್ಲವೆಂದು ಖುದ್ದು ಶೆಟ್ಟರ್ ಅವರೇ ತಿಳಿಸಿದ್ದಾರೆ. ಅಪಾರ್ಥ ಕಲ್ಪಿಸುವುದು ಬೇಡ. ಅವರ ಬೆಂಬಲಿಗರ ಪಕ್ಷದಲ್ಲಿ ಮರುಸೇರ್ಪಡೆ ಕಾರ್ಯ ಶೀಘ್ರದಲ್ಲಿ ನಡೆಯಲಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು. 

ಸಚಿವ ಸ್ಥಾನ ಉಳಿಸಿಕೊಳ್ಳಲು ಲಾಡ್‌ಗೆ ಗುರಿ

ಹುಬ್ಬಳ್ಳಿ: ‘ಸಚಿವ ಸ್ಥಾನ ಉಳಿಸಿಕೊಳ್ಳಬೇಕಾದರೆ ವಾರಕ್ಕೆ 3 ಬಾರಿ ಮೋದಿ ಹಾಗೂ 2 ಬಾರಿ ನನ್ನನ್ನು ಬೈಯುವಂತೆ ಕಾಂಗ್ರೆಸ್‌ ಪಕ್ಷ ಸಂತೋಷ ಲಾಡ್‌ಗೆ ಟಾರ್ಗೆಟ್‌ ನೀಡಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು. ಸಂತೋಷ ಲಾಡ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ವಲ್ಲಭಬಾಯಿ ಪಟೇಲ್‌ ಅವರು ಆರ್‌ಎಸ್‌ಎಸ್‌ ಮೇಲೆ ನಿಷೇಧ ಹೇರಿದ್ದರು ಎನ್ನುವುದಕ್ಕಿಂತ ಗೋವಾ ಹೈದರಾಬಾದ್‌ಗೆ ಸೈನ್ಯ ಕಳುಹಿಸಿ ಅವೆರಡನ್ನೂ ಭಾರತದ ಒಕ್ಕೂಟದೊಳಗೆ ಸೇರಿಸಿದ್ದರು. ಅವರ ಈ ಕೊಡುಗೆಯನ್ನು ನೋಡಿ ಬಿಜೆಪಿ ಸ್ಮರಿಸುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT