ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಹಳ್ಳಿಗಳನ್ನು ಕಟ್ಟುವ ಕಷ್ಟಸುಖ’ ನವರಸಭರಿತ ಕೃತಿ: ನಾಗೇಶ ಹೆಗಡೆ

Published 19 ಮೇ 2024, 15:50 IST
Last Updated 19 ಮೇ 2024, 15:50 IST
ಅಕ್ಷರ ಗಾತ್ರ

ಧಾರವಾಡ: ‘ಹಳ್ಳಿಗಳನ್ನು ಕಟ್ಟುವ ಕಷ್ಟಸುಖ’ ಕೃತಿಯಲ್ಲಿ ಹಾಸ್ಯ, ಆನಂದ, ಶೃಂಗಾರ, ಬೀಭತ್ಸ, ರುದ್ರ ಮೊದಲಾದ ನವರಸಗಳ ನವಿರಾದ ಸಾಕಷ್ಟು ಕಥನಗಳು ಇವೆ ಎಂದು ಲೇಖಕ ನಾಗೇಶ ಹೆಗಡೆ ಅಭಿಪ್ರಾಯಪಟ್ಟರು.

ಬೆಂಗಳೂರಿನ ಬಹುರೂಪಿ ಪ್ರಕಾಶನ, ಸೂರಶೆಟ್ಟಿಕೊಪ್ಪದ ಸರ್ವೋದಯ ಮಹಾಸಂಘದ ವತಿಯಿಂದ ನಗರದ ಆಲೂರು ವೆಂಕಟರಾವ್‌ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ‘ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಓಡುವ ನೀರನ್ನು ನಡೆಯುವಂತೆ ಮಾಡುವುದು, ನಡೆಯುವ ನೀರನ್ನು ನಿಲ್ಲಿಸುವುದು, ನಿಲ್ಲಿಸಿದ ನೀರನ್ನು ಇಂಗಿಸುವುದು, ಮಣ್ಣಿನ ಸವಕಳಿಯನ್ನು ತಪ್ಪಿಸುವುದು ಈ ಎಲ್ಲ ವಿಷಯಗಳು ಕೃತಿಯಲ್ಲಿವೆ. ಮಾದರಿ ಮೂಲಕ ಅವುಗಳನ್ನು ತಿಳಿಸಿಕೊಟ್ಟಿದ್ಧಾರೆ. ಹೃದಯಸ್ಪರ್ಶಿ ಘಟನೆಗಳು ಕೃತಿಯಲ್ಲಿವೆ’ ಎಂದು ವಿಶ್ಲೇಷಿಸಿದರು.

‘ಬಡವರನ್ನು ಗುರುತಿಸುವುದು ಹೇಗೆ? ಎಂಬ ಕುರಿತ ಸಮೀಕ್ಷಾತ್ಮಕ ವಿವರ, ಸೊಗಸಾದ ಉದಾಹರಣೆಗಳು ಇವೆ. ‘ಅಪ್ಪೆಮಿಡಿ ಉಪ್ಪಿನಕಾಯಿ’ ಉದ್ಯಮ ಸ್ಥಾಪಿಸಲು ಮುಂದಾಗಿ ಕೈಸುಟ್ಟುಕೊಂಡ ಕತೆ, ಹಗ್ಗಇದೆಯೆಂದು ಎಮ್ಮೆ ಖರೀದಿಸಿದ ಉದಾಹರಣೆಯಂತಿದೆ’ ಎಂದು ವಿವರಿಸಿದರು.

‘ಉದ್ಯಮ ಆದ್ಯತೆ ಮತ್ತು ಉದ್ಯೋಗದ ಆದ್ಯತೆ ವ್ಯತ್ಯಾಸಗಳನ್ನು ನಾವು ಕಂಡುಕೊಳ್ಳಬೇಕು. ಬಹುರಾಷ್ಟ್ರೀಯ ಸಂಸ್ಥೆಗಳ ಉದ್ಯಮಗಳನ್ನು ಸ್ಥಾಪಿಸಿದರೆ ದೇಶ ಉದ್ಧಾರವಾಗುತ್ತದೆ ಎಂದು ಹಲವರು ಹೇಳುತ್ತಾರೆ. ಆದರೆ, ಈ ಹಂತದಲ್ಲಿ ಹಳ್ಳಿಗಳ ಕಸುಬುಗಳು (ಕಮ್ಮಾರಿಕೆ, ಕುಂಬಾರಿಕೆ...) ಒಂದೊಂದಾಗಿ ಕಳಚಿಕೊಳ್ಳುತ್ತವೆ. ಉದ್ಯಮ ಸ್ಥಾಪನೆಯಾಗಿದ್ದರಿಂದ ಹಳ್ಳಿಗಳು ನಿಧಾನಕ್ಕೆ ಬಡತನದ ಕಡೆಗೆ ಸಾಗುತ್ತಿವೆ. ಬಹುರಾಷ್ಟ್ರೀಯ ಕಂಪನಿಗಳ ಪ್ರವೇಶದಿಂದ ಹಳ್ಳಿಗಳು ಮಹಾಪತನ ಕಡೆಗೆ ಸಾಗುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಹಳ್ಳಿಗಳನ್ನು ಪ್ರಗತಿ ಕಡೆಗೆ ಒಯ್ಯುವ ಕಾಯಕದಲ್ಲಿ ಕೃತಿಕಾರ ಶಾಂತವಾಗಿ ತೊಡಗಿದ್ದಾರೆ. ನಮಗೆ ಅಗತ್ಯ ಇರುವುದನ್ನು ಪುನರುತ್ಥಾನ ಮಾಡುವ ಪ್ರಯತ್ನದಲ್ಲಿ ಅವರು ತೊಡಗಿದ್ದಾರೆ. ಇಂಗ್ಲಿಷ್‌ ಸಹಿತ ಇತರ ಭಾಷೆಗಳಿಗೂ ಈ ಪುಸ್ತಕ ಅನುವಾದ ಆಗಬೇಕು. ಸಮಾಜದ ಎಲ್ಲ ಸ್ತರಗಳಿಗೆ ಪುಸ್ತಕ ತಲುಪಬೇಕು. ವಿಶ್ವವಿದ್ಯಾಲಯಗಳು, ಕೃಷಿ, ತೋಟಗಾರಿಕೆ, ಪಶುವೈದ್ಯಕೀಯ ವಿಜ್ಞಾನ ವಿದ್ಯಾರ್ಥಿಗಳು, ಶಿಕ್ಷಕರಿಗೆ ಈ ಪುಸ್ತಕ ವರದಾನವಾಗಲಿ’ ಎಂದು ಆಶಯ ವ್ಯಕ್ತಪಡಿಸಿದರು.

ಕೃತಿಕಾರ ಪ್ರಕಾಶ ಭಟ್‌ ಮಾತನಾಡಿ, ‘ಕಷ್ಟ ಅನುಭವಿಸುವಾಗ ಕಷ್ಟ ಅನಿಸುತ್ತದೆ. ಕಷ್ಟಪಟ್ಟರೆ ಸುಖ ಸಿಗುತ್ತದೆ. ಹಳ್ಳಿಜನರು ನಾವು ತೋರಿದ ಪ್ರೀತಿಗೆ 100 ಪಟ್ಟು ಬಡ್ಡಿ ಹಾಕಿ ಪ್ರೀತಿ ಕೊಟ್ಟಿದ್ದಾರೆ‘ ಎಂದರು.

ಸರ್ವೋದಯ ಮಹಾಸಂಘದ ಸದಸ್ಯೆ ದ್ಯಾಮಕ್ಕ ಪಾಟೀಲ ಮಾತನಾಡಿ, ‘ಬೈಫ್‌’ ಸಂಸ್ಥೆಯ ಪ್ರಕಾಶ ಭಟ್‌ ಅವರು ನಮ್ಮ ಹಳ್ಳಿಭಾಗದ ಮಹಿಳೆಯರಿಗೆ ಸ್ವಉದ್ಯೋಗಕ್ಕೆ (ಹೈನುಗಾರಿಕೆ, ಹೊಲಿಗೆ ಯಂತ್ರ...) ವ್ಯವಸ್ಥೆ ಮಾಡಿದರು. ಸ್ವಾವಲಂಬನೆಗೆ ದಾರಿ ಮಾಡಿಕೊಟ್ಟರು’ ಎಂದು ಹೇಳಿದರು.

ಕೃತಿಕಾರ ಡಾ.ಪ್ರಕಾಶ ಭಟ್‌ ಅವರೊಂದಿಗೆ ಸಂವಾದ ನಡೆಯಿತು.

ಪುಸ್ತಕ ವಿವರ

ಕೃತಿ: ಹಳ್ಳಿಗಳನ್ನು ಕಟ್ಟುವ ಕಷ್ಟಸುಖ

ಕೃತಿಕಾರ: ಡಾ.ಪ್ರಕಾಶ ಭಟ್‌

ಪ್ರಕಾಶನ: ಬಹುರೂಪಿ ಪ್ರಕಾಶನ ಬೆಂಗಳೂರು

ಪುಟ: 280

ಬೆಲೆ: ₹ 300

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT