ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜಿ ಹಿಂಪಡೆಯುವಂತೆ ಜೀವ ಬೆದರಿಕೆ

ಶಾಸಕ ಬೆಲ್ಲದ, ಉಪಮೇಯರ್‌ ಸತೀಶ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು
Published 9 ಜೂನ್ 2024, 6:56 IST
Last Updated 9 ಜೂನ್ 2024, 6:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊಳಚೆ ನಿರ್ಮೂಲನ ಮಂಡಳಿ ನೀಡಿರುವ ಹಕ್ಕು ಪತ್ರ ವಿತರಣೆ ಕುರಿತು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅರವಿಂದ ಬೆಲ್ಲದ, ಉಪ ಮೇಯರ್ ಸತೀಶ ಹಾನಗಲ್ ಮತ್ತು ಲಕ್ಷ್ಮಣ ಭೋವಿ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಏನಿದೆ?: 2023 ಡಿ. 30ರಂದು ಪೊಲೀಸ್ ಕಮಿಷನರ್‌ ನೇತೃತ್ವದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಕುಂದು ಕೊರತೆ ಸಭೆ ನಡೆದಿತ್ತು. ಅಂದು ಪರಶುರಾಮ ದಾವಣಗೆರೆ ಅವರು, ಆನಂದನಗರದ ಕೃಷ್ಣಾಕಾಲೊನಿಗೆ ಸಂಬಂಧಪಟ್ಟ ಖಾಲಿ ಜಾಗವನ್ನು ಕೊಳಚೆ ನಿರ್ಮೂಲನ ಮಂಡಳಿ ಅಕ್ರಮವಾಗಿ ಹಕ್ಕುಪತ್ರ ವಿತರಿಸಿದೆ ಎಂದು ದೂರಿ, ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಹಿಂಪಡೆಯುವಂತೆ ಉಪ ಮೇಯರ್‌ ಮೇಯರ್ ಸತೀಶ ಹಾನಗಲ್ ಹಾಗೂ ಶಾಸಕ ಅರವಿಂದ ಬೆಲ್ಲದ ಕುಮ್ಮಕ್ಕಿನಿಂದ ಲಕ್ಷ್ಮಣ ಭೋವಿ ಅವರು ಅವಾಚ್ಯ ಪದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಆರೋಪಿತರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಅವರು 4ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದರು. ನ್ಯಾಯಾಲವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿ ಪ್ರಕರಣ ದಾಖಲಾಗಿದೆ.

ವ್ಯಕ್ತಿ ಸಾವು: ಇಲ್ಲಿನ ಗಿರಣಿಚಾಳದ ಹತ್ತಿರದ ಪಿಎನ್‌ಟಿ ಕ್ವಾಟ್ರಸ್‌ ಬಳಿ ಮರ ಕಡಿಯುವಾಗ ಮೇಲಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಹಳೇಹುಬ್ಬಳ್ಳಿಯ ಪರಶುರಾಮ ಉಪ್ಪಾರ(58) ಮೃತಪಟ್ಟಿದ್ದಾರೆ.

ಶುಕ್ರವಾರ ಸಂಜೆ ಘಟನೆ ನಡೆದಿದೆ. ಮನೆಗೆ ಎರಗಿದ್ದ ಮರವನ್ನು ಕಡಿಯಲೆಂದು ಮಾಲೀಕರು ಪರಶುರಾಮ ಅವರಿಗೆ ಹೇಳಿದ್ದು, ಏಣಿ ಹಾಕಿಕೊಂಡು ಮರ ಕಡಿಯಲು ಮುಂದಾಗಿದ್ದರು. ಏಣಿ ಜಾರಿ ಕೆಳಗೆ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯವಾಗಿತ್ತು. ಅದೇ ವೇಳೆ ಕಡಿಯುತ್ತಿದ್ದ ಮರ ಸಹ ಅವರ ಮೇಲೆ ಬಿದ್ದಿದೆ ಎನ್ನಲಾಗಿದೆ. ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಡಿಕ್ಕಿ; ಮಹಿಳೆ ಸಾವು: ಇಲ್ಲಿನ ವಿದ್ಯಾನಗರ ಬಿವಿಬಿ ಕಾಲೇಜು ಎದುರು ಬೈಕ್‌ಗೆ ಟ್ಯಾಂಕರ್‌ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಹಿಂಬದಿ ಸವಾರರಾದ ಉಣಕಲ್‌ ಗ್ರಾಮದ ನಂದಾ ಮಾಳವಾದೆ(45) ಮೃತಪಟ್ಟಿದ್ದಾರೆ. ಪತಿ ತುಕಾರಾಮ ಮಾಳವಾದೆ ಅವರಿಗೆ ಸಣ್ಣಣಪುಟ್ಟ ಗಾಯಗಳಾಗಿವೆ.

ಹುಬ್ಬಳ್ಳಿಯಿಂದ ಧಾರವಾಡದ ಕಡೆಗೆ ದಂಪತಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಟ್ಯಾಂಕರ್‌ ಡಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿ ಬಿದ್ದ ನಂದಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಕಿಮ್ಸ್‌ಗೆ ದಾಖಲಿಸಲಾಗಿತ್ತು. ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಗೆ ಯತ್ನ: ಕಿರಾಣಿ ಸಾಮಗ್ರಿ ತರಲು ಹೋದ ಬಿಡ್ನಾಳದ ಈರಣ್ಣ ಕಲ್ಲಪ್ಪನವರ ಅವರಿಗೆ ಶಿವು ಎಂಬಾತ, ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ ಪ್ರಕರಣ ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಬೈಕ್‌ನಲ್ಲಿ ಬಂದ ಶಿವು ಬಸವನಗರದ 2ನೇ ಕ್ರಾಸ್‌ ಬಳಿ ಈರಣ್ಣ ಅವರನ್ನು ಅಡ್ಡಹಾಕಿ ಹಲ್ಲೆಗೆ ಯತ್ನಿಸಿದ್ದಾನೆ. ಅಲ್ಲಿಯೇ ಇದ್ದ ಪೊಲೀಸ್‌ ಸಿಬ್ಬಂದಿಗೆ ವಿಷಯ ತಿಳಿಸಿದಾಗ, ಶಿವು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT